ADVERTISEMENT

ಎರಡು ಸಾವಿರ ಅಂಗನವಾಡಿಗೆ ಪ್ರಸ್ತಾವ: ಸಚಿವೆ ಶಶಿಕಲಾ ಜೊಲ್ಲೆ 

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 12:38 IST
Last Updated 24 ಜನವರಿ 2021, 12:38 IST
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಹೊಸಪೇಟೆಯ ಸಾವಿತ್ರಿಬಾಯಿ ಫುಲೆ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಮಗುವಿಗೆ ಮುದ್ದಾಡಿದರು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಹೊಸಪೇಟೆಯ ಸಾವಿತ್ರಿಬಾಯಿ ಫುಲೆ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಮಗುವಿಗೆ ಮುದ್ದಾಡಿದರು.   

ಹೊಸಪೇಟೆ: ‘ರಾಜ್ಯದಲ್ಲಿ ಹೊಸದಾಗಿ ಎರಡು ಸಾವಿರ ಅಂಗನವಾಡಿಗಳಿಗೆ ಬೇಡಿಕೆ ಇದ್ದು, ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಿನಿ ಅಂಗನವಾಡಿಗಳನ್ನು ನಿರ್ಮಿಸುವಂತೆ ಮನವಿ ಬಂದಿವೆ. ಅದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಂಗನವಾಡಿ ಕೇಂದ್ರದಿಂದ ಮಹಿಳೆ ಹಾಗೂ ಮಕ್ಕಳಿಗೆ ನೀಡುವ ಮೊಟ್ಟೆ ದರ ಹೆಚ್ಚಳಕ್ಕೆ ಬೇಡಿಕೆ ಇದೆ. ಈಗ ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ಹಣ ಹಾಕಿ ಮೊಟ್ಟೆ ಖರೀದಿಸಿ ವಿತರಿಸುವ ಕಾರ್ಯ ನಡೆಯುತ್ತಿದೆ. ವಿಭಾಗವಾರು ಟೆಂಡರ್ ಪ್ರಕ್ರಿಯೆ ಮೂಲಕ ತಾಲ್ಲೂಕು ಪಂಚಾಯಿತಿ ವತಿಯಿಂದ ಮೊಟ್ಟೆ ವಿತರಿಸುವ ಕುರಿತು ಚಿಂತಿಸಲಾಗುತ್ತಿದೆ’ ಎಂದು ಹೇಳಿದರು.

‘ಫಲಾನುಭವಿಗೆ ಯಾವುದೇ ಪರಿಣಾಮ ಉಂಟಾಗದೆ ಹಾಗೂ ವಿತಕರಿಗೆ ದರ ವ್ಯತ್ಯಾಸವಾಗದಂತೆ ಸೂಕ್ತ ರೀತಿಯಲ್ಲಿ ನೀಡಲಾಗುತ್ತದೆ. ಕೋವಿಡ್–19 ಕಾರಣದಿಂದ ಸ್ಥಗಿತಗೊಂಡಿದ್ದ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಬರುವ ಮಾರ್ಚ್-ಏಪ್ರಿಲ್‌ನಿಂದ ಆರಂಭಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಲಿಂಗಾನುಪಾತ ಸರಿದೂಗಿಸಲು ಹೆಣ್ಣು ಮಕ್ಕಳ ದಿನ’

‘ದೇಶದಲ್ಲಿ ಗಂಡು–ಹೆಣ್ಣಿನ ಲಿಂಗಾನುಪಾತದಲ್ಲಿ ಭಾರಿ ಅಂತರ ಉಂಟಾಗಿದೆ. ಅದನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಪ್ರತಿ ವರ್ಷದ ಜ. 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾಗಿ ಆಚರಿಸುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಇಲ್ಲಿನ ಎಂ.ಜೆ. ನಗರದ ಸಾವಿತ್ರಿಬಾಯಿ ಫುಲೆ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಇದು. ದೇಶ ಸಮೃದ್ಧ, ಸುರಕ್ಷಿತ ಮತ್ತು ಅಭಿವೃದ್ಧಿ ಪಥದ ಕಡೆಗೆ ಹೋಗಬೇಕು ಅಂದರೆ ಆರೋಗ್ಯಯುತ ಮಗುವಿನ ಜನನ ಅಗತ್ಯ ಎಂದು ಹೇಳಿದರು.

ಆರು ವರ್ಷಗಳ ಹಿಂದೆ ಜಾರಿಗೆ ಬಂದ ಈ ಯೋಜನೆಯ ಪರಿಣಾಮದಿಂದ ಅನೇಕ ರಾಜ್ಯಗಳಲ್ಲಿ ಲಿಂಗಾನುಪಾತದಲ್ಲಿನ ವ್ಯತ್ಯಾಸ ದೂರವಾಗುತ್ತಿದೆ. ಹೋದ ವರ್ಷ ಬಳ್ಳಾರಿ ಜಿಲ್ಲೆಯಲ್ಲಿ ಗಂಡಿಗಿಂತ ಹೆಣ್ಣು ಮಕ್ಕಳ ಜನನ ಜಾಸ್ತಿಯಾಗಿದೆ ಎಂದರು.

ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಯಲಿಗಾರ, ಮಾಜಿ ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.