
ದೊಡ್ಡಬಳ್ಳಾಪುರ: ನಗರದಲ್ಲಿ ಬ್ಯಾನರ್ ಹಾವಳಿ ಮಿತಿ ಮೀರಿದೆ. ಪಕ್ಷಗಳು, ಸಂಘಟನೆಗಳು ಹೆದ್ದಾರಿ, ಗಲ್ಲಿ ರಸ್ತೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬ್ಯಾನರ್ ಕಟ್ಟುವುದರಲ್ಲಿ ಪೈಪೋಟಿಯೇ ನಡೆದಿದೆ.
ಬ್ಯಾನರ್ ಹಾವಳಿ ಯಾವ ಪರಿಗೆ ಹೋಗಿ ತಲುಪಿದೆಯಂದರೆ ನಗರಸಭೆ ಅಧಿಕಾರಿಗಳು ಈ ಬಗ್ಗೆ ಪ್ರಶ್ನೆ ಮಾಡಿದರೆ, ಪೌರ ಕಾರ್ಮಿಕರು ಕಿತ್ತು ಹಾಕಿದರೆ ಎಲ್ಲಿ ನಮ್ಮ ಕೆಲಸಕ್ಕೆ ಕುತ್ತು ಬರುತ್ತದೆಯೋ ಎನ್ನುವ ಆತಂಕದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಭಾವಪೂರ್ಣ ಶ್ರದ್ದಾಂಜಲಿ ಬ್ಯಾನರ್‌ಗಳಿಂದ ಮೊದಲುಗೊಂಡು ಜನ್ಮದಿನ, ಹಬ್ಬಗಳಿಗೆ ಶುಭಾಶಯ, ಗಣ್ಯರ ಆಗಮನಕ್ಕೆ ಸ್ವಾಗತ ಕೋರುವ ಬ್ಯಾನರ್‌ಗಳಿಂದಾಗಿ ರಸ್ತೆಗಳಲ್ಲಿ ಸಂಚಾರಕ್ಕೆ ಕುತ್ತು ಬಂದಿದೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ವಿದ್ಯುತ್ ಕಂಬಗಳ ಎತ್ತರದವರೆಗೂ ಸತ್ತವರು, ಬದುಕಿರುವವರ ಹತ್ತಾರು ಬ್ಯಾನರ್‌ಗಳನ್ನು ತೂಗಿ ಹಾಕಲಾಗಿದೆ. ಟೋಲ್ ಸಂಗ್ರಹ ಮಾಡುವವರು, ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಯಾರೂ ಸಹ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಗಾಳಿಗೆ ಬ್ಯಾನರ್‌ಗಳು ಗಾಳಿಗೆ ತೂಗಾಡಿ ಕಿತ್ತು ಬಿದ್ದು ಅಪಘಾತಗಳಿಗೆ ಒಳಗಾಗುತ್ತಿದ್ದಾರೆ.
ನಗರದ ಮೂಲಕ ಹಾದು ಹೋಗಿರುವ ಬೆಂಗಳೂರು–ಹಿಂದೂಪುರ ರಾಜ್ಯ ಹೆದ್ದಾರಿ ಮಾರಸಂದ್ರದಿಂದ ಕಂಟನಕುಂಟೆ ಗ್ರಾಮದವರೆಗೂ ಯಾವ ವಿದ್ಯುತ್ ಕಂಬಗಳು ಖಾಲಿ ಇಲ್ಲದಂತೆ ಹತ್ತಾರು ಬ್ಯಾನರ್‌ಗಳನ್ನು ನೇತು ಹಾಕಲಾಗಿದೆ. ಅದರಲ್ಲೂ ನಗರದ ಪ್ರವಾಸಿ ಮಂದಿರ ಸಮೀಪದ ಹಿಂದೂಪುರ ಹೆದ್ದಾರಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಯಾವ ಕಡೆಯಿಂದಲೂ ಬರುವ ವಾಹನಗಳು ಕಾಣದಂತೆ ಸುತ್ತಲೂ ಬ್ಯಾನರ್ ಕಟ್ಟುವ ಮೂಲಕ ಮುಚ್ಚಿ ಹಾಕಲಾಗಿದೆ.
ನಗರ ಸೇರಿದಂತೆ ತಾಲ್ಲೂಕಿನ ಯಾವುದೇ ಹಳ್ಳಿಯಲ್ಲಿ ಯಾರಾದರೂ ನಿಧನರಾದರೆ ಇಲ್ಲಿ ಒಂದು ಬ್ಯಾನರ್ ಕಟ್ಟಿದರೆ ಅವರಿಗೆ ಸ್ವರ್ಗಪ್ರಾತ್ತಿ ಎನ್ನುವಷ್ಟರ ಮಟ್ಟಿಗೆ ಇಲ್ಲಿನ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಬ್ಯಾನರ್‌ಗಳ ಹಾವಳಿ ಮಿತಿ ಮೀರಿದೆ. ಇಲ್ಲಿನ ಕಟ್ಟಲಾಗಿರುವ ಬ್ಯಾನರ್‌ಗಳನ್ನು ನಗರಸಭೆ ವತಿಯಿಂದ ತೆರವುಗೊಳಿಸುವುದು ಅಪರೂಪವೇ. ಕಾರಣ ಪ್ರತಿ ದಿನ ಭಾವಪೂರ್ಣ ಶ್ರದ್ಧಾಂಜಲಿ ಹೊಸ ಬ್ಯಾನರ್ ಕಟ್ಟುವವರು ಹಳೆ ಬ್ಯಾನರ್‌ಗಳನ್ನು ತೆರವು ಮಾಡುತ್ತಾರೆ. ಇಲ್ಲಿನ ವೃತ್ತದಲ್ಲಿ ಸದಾ ಹತ್ತಾರು ಭಾವಪೂರ್ಣ ಶ್ರದ್ಧಾಂಜರಿ ಬ್ಯಾನರ್‌ಗಳು ಇರುವ ಕಾರಣಕ್ಕಾಗಿಯೇ ಇದನ್ನು ‘ಸತ್ತವರ ದಿಬ್ಬ’ ಎಂದು ಸಹ ಕರೆಯಲಾಗುತ್ತಿದೆ.
ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ
ತೆರಿಗೆ ಪಾವತಿ ಮಾಡದೆ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ಮೇಲೆ ಕಾನೂನು ಬಾಹಿರವಾಗಿ ಬ್ಯಾನರ್ ಫ್ಲೆಕ್ಸ್ ಬಾವುಟ ಹಾಗೂ ಬಂಟಿಂಗ್ಸ್ ಅಳವಡಿಸಲಾಗುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವಂತೆ ಶಾಸಕ ಧೀರಜ್ ಮುನಿರಾಜು ಅವರಿಗೆ ವಕೀಲ ಟಿ.ಕೆ.ಹನುಮಂತರಾಜು ಪತ್ರ ಬರೆದು ಆಗ್ರಹಿಸಿದ್ದಾರೆ. ರಾಜಕೀಯ ಪಕ್ಷಗಳು ಖಾಸಗಿ ವ್ಯಕ್ತಿಗಳು ಸಂಸ್ಥೆಗಳು ಅಥವಾ ಧಾರ್ಮಿಕ ಸಂಘಟನೆಗಳು ಎಂಬ ಭೇದವಿಲ್ಲದೆ ಕಾನೂನು ಎಲ್ಲರಿಗೂ ಸಮಾನವಾಗಿದೆ. ಅಲ್ಲದೆ ಕಾನೂನುಬಾಹಿರ ಬ್ಯಾನರ್ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೂ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವಂತೆ ಕೋರಿದ್ದಾರೆ. ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸ್ಥಳೀಯ ಆಡಳಿತ ಅಥವಾ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.