ದೇವನಹಳ್ಳಿ: ‘ಜೆಡಿಎಸ್ ಮತ್ತು ಬಿಜೆಪಿ ಮುಖಂಡರೆಲ್ಲ ನನ್ನನ್ನು ಜೈಲಿಗೆ ಕಳಿಸಲು ಆತುರದಲ್ಲಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
‘ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರೆಲ್ಲ ಆದಾಯ ತೆರಿಗೆ ಇಲಾಖೆಯ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರಂತೂ ನ್ಯಾಯಾಧೀಶರಾಗಿಬಿಟ್ಟಿದ್ದಾರೆ’ ಎಂದರು.
ಗುರುವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಮೇಲೆ ದಾಖಲು ಮಾಡಿರುವ ಎಫ್‌ಐಆರ್ ರಾಜಕೀಯಪ್ರೇರಿತ. ಅದನ್ನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಹೋರಾಡುತ್ತಿದ್ದೇನೆ. ಎಲ್ಲದಕ್ಕೂ ಸಮಯವೇ ಉತ್ತರ ಕೊಡಲಿದೆ’ ಎಂದರು.
‘ಹೊಸದಾಗಿ ಹುಟ್ಟಿಕೊಂಡಿರುವ ಆದಾಯ ತೆರಿಗೆ ಇಲಾಖೆ ವಕ್ತಾರರು ಶೇ 90ರಷ್ಟು ತನಿಖೆ ಪೂರ್ಣಗೊಂಡಿದೆ ಎಂದು ಹೇಳುತ್ತಿದ್ದಾರೆ. ಆದರೆ, ಒಂದು ದಿನವೂ ನನ್ನನ್ನು ವಿಚಾರಣೆಗೆ ಕರೆದಿಲ್ಲ. ಅದು ಹೇಗೆ ತನಿಖೆ ಮುಗಿಯಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ಸಿಬಿಐ ವಿಚಾರಣೆಗೆ ಕರೆದು ನನ್ನ ಆಸ್ತಿ ಯಾವುವು, ನನ್ನ ಪತ್ನಿಯ ಆಸ್ತಿ ಎಷ್ಟಿದೆ ಎಂಬ ಮಾಹಿತಿ ಪಡೆಯದೇ ಹೇಗೆ ತನಿಖೆ ಮುಕ್ತಾಯ ಮಾಡಲು ಸಾಧ್ಯ? ದೇಶದ ಕಾನೂನು ಮತ್ತು ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಎಲ್ಲವನ್ನೂ ಪಟ್ಟಿ ಮಾಡಿಕೊಂಡಿದ್ದೇನೆ. ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತೇನೆ’ ಎಂದರು.
‘ನನ್ನನ್ನು ಶಾಶ್ವತವಾಗಿ ತಿಹಾರ್ ಜೈಲಿಗೆ ಕಳಿಸುತ್ತೇವೆ ಎಂದು ಕಟೀಲ್ (ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್) ಹೇಳುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳಿಸುವುದು ಪೂರ್ವಯೋಜಿತ ಯೋಜನೆ. ನಾನು ಎಲ್ಲಿಗೂ ಓಡಿ ಹೋಗುವುದಿಲ್ಲ. ಆದಾಯ ತೆರಿಗೆ ಇಲಾಖೆ ಈಗಾಗಲೇ ಮಾಧ್ಯಮ ಪ್ರಕಟಣೆ ನೀಡಿದೆ. ಬಿಜೆಪಿ ಸರ್ಕಾರದಲ್ಲಿ ಎಲ್ಲ ಕಾಮಗಾರಿಗಳಿಗೆ ಗುತ್ತಿಗೆ ನೀಡಲಾಗಿದೆ. ನಾವು ಒಬ್ಬರಿಗೂ ಹೊಸದಾಗಿ ಗುತ್ತಿಗೆ ಕಾಮಗಾರಿ ನೀಡಿಲ್ಲ’ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.