ಅಪಘಾತ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು
ದೊಡ್ಡಬಳ್ಳಾಪುರ: ತಾಲ್ಲೂಕಿನ ನಾಯಕರಂಡನಹಳ್ಳಿ ಸಮೀಪ ಗೌರಿಬಿದನೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿಗಳಾದ ಡಿ.ಎಂ.ಈಶ್ವರಪ್ಪ (75) , ಪುರುಷೋತ್ತಮ (62), ಕಾಳಪ್ಪ(69), ಗೋಪಿನಾಥ್ (52) ಹಾಗೂ ಕಾರು ಚಾಲಕ ನರಸಿಂಹಮೂರ್ತಿ (50) ಮೃತಪಟ್ಟವರು.
ಕಾರಿನಲ್ಲಿ ಎಂಟು ಜನರು ದೊಡ್ಡಬಳ್ಳಾಪುರದಿಂದ ಗೌರಿಬಿದನೂರು ಸಮೀಪದ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಕಾರಿನಲ್ಲಿದ್ದ ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ-ಕ್ಯಾಂಟರ್ ಮುಖಾಮುಖಿ ಡಿಕ್ಕಿ ಇಬ್ಬರು ಚಾಲಕರ ಸ್ಥಿತಿ ಗಂಭೀರ
ದೊಡ್ಡಬಳ್ಳಾಪುರ: ಇನ್ನೋವಾ ಕಾರು ಪಲ್ಟಿ ಹೊಡೆದು ಮಂಗಳವಾರ ಬೆಳಿಗ್ಗೆ ಐದು ಜನ ಮೃತಪಟ್ಟ ಗೌರಿಬಿದನೂರು ರಸ್ತೆಯಲ್ಲೇ ಲಾರಿ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕ್ಯಾಂಟರ್ ಮತ್ತು ಲಾರಿ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕರ ಹೆಸರು, ವಿಳಾಸ ತಿಳಿದಿಲ್ಲ.
ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆ
ದೊಡ್ಡಬಳ್ಳಾಪುರ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಶೆಟ್ಟಿಹಳ್ಳಿಯಲ್ಲಿನ ಭಾರತ್ ಪೆಟ್ರೋಲಿಯಂ ಬಂಕ್ ಸಮೀಪ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ.ಬಾಬಾ, ಡಿ.ವೈ.ಎಸ್.ಪಿ ರವಿ ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.