
ದೇವನಹಳ್ಳಿ: ಇರಾನ್–ಇಸ್ರೇಲ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರೊಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ 37 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.
ಪಶ್ಚಿಮ ಏಷ್ಯಾ ದೇಶಗಳಿಗೆ ತೆರಳಬೇಕಿದ್ದ ವಿಮಾನಗಳು ರದ್ದಾದ ಪರಿಣಾಮ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು. ಮಾರ್ಚ್ 1ರಂದು 18 ಆಗಮನ ಮತ್ತು 19 ನಿರ್ಗಮನ ಸೇರಿ ಒಟ್ಟು 37 ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಬಿಐಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಅಬುಧಾಬಿ, ರಿಯಾದ್, ಜೆಡ್ಡಾ, ದಮಾಮ್, ದುಬೈ ಮತ್ತು ದೋಹಾಕ್ಕೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ. ಕೆಐಎದಿಂದ ದುಬೈ ಮತ್ತು ಅಬುಧಾಬಿಗೆ ಹೆಚ್ಚು ಮಂದಿ ಪ್ರಯಾಣಿಸುತ್ತಾರೆ. ಶನಿವಾರ ಹಲವು ವಿಮಾನಗಳು ರದ್ದಾದ ಕಾರಣ ಪ್ರಯಾಣಿಕರು ಆತಂಕಕ್ಕೆ
ಒಳಗಾದರು.
‘ಇರಾನ್–ಇಸ್ರೇಲ್ ಯುದ್ಧಭೀತಿಯಿಂದ ವಿಮಾನ ಸಂಚಾರ ರದ್ದುಪಡಿಸಲಾಗಿದೆ. ಅಧಿಕಾರಿಗಳು ಬೇರೊಂದು ನಗರಕ್ಕೆ ಹೋಗುವ ಆಯ್ಕೆ ನೀಡಿದರು. ಆದರೆ, ನಾನು ಹೋಗಬೇಕಿದ್ದ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಈಗ ವಿಮಾನವೇ ರದ್ದಾಗಿದೆ’ ಎಂದು ದೆಹಲಿಯಿಂದ ಬೆಂಗಳೂರು ಮೂಲಕ ಅಬುಧಾಬಿಗೆ ತೆರಳಬೇಕಿದ್ದ ರಶೀದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.
ಭದ್ರತಾ ಕಾರಣದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಏರ್ ಇಂಡಿಯಾ ಹಾಗೂ ಇಂಡಿಗೊ ಸೇರಿದಂತೆ ಹಲವು ವಿಮಾನ ಕಂಪನಿಗಳು ಪಶ್ಚಿಮ ಏಷ್ಯಾ ದೇಶಗಳಿಗೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಬಹರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗೆ ಮಾರ್ಚ್ 2ರ ರಾತ್ರಿ 11.59ರವರೆಗೆ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದೆ. ಫೆಬ್ರುವರಿ 28ರೊಳಗೆ ಬುಕ್ಕಿಂಗ್ ಮಾಡಿರುವ ಮತ್ತು ಮಾರ್ಚ್ 5ರವರೆಗೆ ಪ್ರಯಾಣ ನಿಗದಿಪಡಿಸಿರುವವರಿಗೆ ದಿನಾಂಕ ಬದಲಾವಣೆ ಶುಲ್ಕ ಇಲ್ಲದೆ ಮುಂದೂಡುವ ಅಥವಾ ಸಂಪೂರ್ಣ ಹಣ ಮರುಪಾವತಿ ಪಡೆಯುವ ಅವಕಾಶ ನೀಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಕಟಣೆ ತಿಳಿಸಿದೆ.
ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಮರು ಬುಕಿಂಗ್ ಮತ್ತು ಹಣ ಮರುಪಾವತಿ ಕುರಿತು ಮಾಹಿತಿ ನೀಡಲಾಗುತ್ತಿದೆ. ಕೆಐಎದಲ್ಲೂ ಕೌಂಟರ್‌ಗಳ ಮುಂದೆ ಪ್ರಯಾಣಿಕರ ಉದ್ದನೆ ಸಾಲು ಕಂಡು ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.