ADVERTISEMENT

ಆನೇಕಲ್‌ ಕ್ಷೇತ್ರ ಸ್ಥಿತಿ–ಗತಿ: ಕಾಂಗ್ರೆಸ್‌ಗೆ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆ

ಶಾಸಕ ಶಿವಣ್ಣ ಸತತ ಗೆಲುವು ತಡೆಗೆ ಬಿಜೆಪಿ, ಜೆಡಿಎಸ್‌ ತಂತ್ರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 6:07 IST
Last Updated 4 ಫೆಬ್ರುವರಿ 2023, 6:07 IST
ಆನೇಕಲ್‌ ಶಾಸಕ ಶಿವಣ್ಣ
ಆನೇಕಲ್‌ ಶಾಸಕ ಶಿವಣ್ಣ    

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ (ಮೀಸಲು) ಎರಡು ಅವಧಿಗಳಿಂದಲೂ ಕಾಂಗ್ರೆಸ್‌ ಶಾಸಕ ಬಿ.ಶಿವಣ್ಣ ಅವರ ಹಿಡಿತದಲ್ಲಿದ್ದು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇವರ ಗೆಲುವಿನ ಓಟವನ್ನು ಕಟ್ಟಿ ಹಾಕಲು ಜೆಡಿಎಸ್‌ ಮತ್ತು ಬಿಎಸ್‌ಪಿ ನಾನಾ ತಂತ್ರಗಳನ್ನು ರೂಪಿಸುತ್ತಿವೆ.

ಬಿಜೆಪಿ ಭದ್ರಕೋಟೆಯಾಗಿದ್ದ ಆನೇಕಲ್ ಕ್ಷೇತ್ರವನ್ನು 2013 ಮತ್ತು 2018ರಲ್ಲಿ ಕಾಂಗ್ರೆಸ್‌ ಶಾಸಕ ಶಿವಣ್ಣ ಅವರು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಇವರ ಹ್ಯಾಟ್ರಿಕ್ ಗೆಲುವು ತಡೆಯಲು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಆಕಾಂಕ್ಷಿಗಳು ಉತ್ಸಾಹಿಗಳಾಗಿದ್ದಾರೆ. ಇದಕ್ಕೆ ತಕ್ಕೆ ಭೂಮಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಜೆಡಿಎಸ್‌ ಮತ್ತು ಬಿಎಸ್‌ಪಿ ತಮ್ಮದೇ ಆದ ಚುನಾವಣಾ ತಂತ್ರ ಎಣೆಯುತ್ತಾ ಚುನಾವಣೆಗೆ ವೇದಿಕೆ ಸಜ್ಜುಗೊಳಿಸಿವೆ.

ಕೇಂದ್ರ ಸಚಿವ ಆನೇಕಲ್‌ನ ಎ.ನಾರಾಯಣಸ್ವಾಮಿ ಅವರು ನಾಲ್ಕು ಬಾರಿ ಆನೇಕಲ್‌ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಪ್ರಸ್ತುತ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಅವರು ಆಶೀರ್ವಾದ ನಿರೀಕ್ಷೆಯಲ್ಲಿದ್ದಾರೆ ಬಿಜೆಪಿಯ ಆಕಾಂಕ್ಷಿಗಳು.

ADVERTISEMENT

ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮು, ಟಿ.ವಿ.ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹುಲ್ಲಹಳ್ಳಿ ಶ್ರೀನಿವಾಸ್‌, ಬಂಡಾಪುರ ರಾಮಚಂದ್ರ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಡಾ.ಸಂದೀಪ್‌, ಮುಖಂಡರಾದ ಪಟಾಪಟ್‌ ಶ್ರೀನಿವಾಸ್‌, ಮಂಜುನಾಥ್‌ ಮದ್ದೂರಪ್ಪ, ಬಿ.ವೈ.ರವಿಚಂದ್ರ ಬಿಜೆಪಿ ಆಕಾಂಕ್ಷಿಗಳು.

ಬಿಜೆಪಿ ಪಕ್ಷದ ಬಹುತೇಕ ಎಲ್ಲಾ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ತಾಲ್ಲೂಕಿನ ಎಲ್ಲೆಡೆ ಗೋಡೆ ಬರಹ, ಬ್ಯಾನರ್‌ಗಳು, ಕಟೌಟ್‌ಗಳು ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ತಮ್ಮದೇ ಆದ ನೆಲೆ ಹೊಂದಿರುವ ಜೆಡಿಎಸ್‌ ಈ ಬಾರಿ ಕೆ.ಪಿ.ರಾಜು ಅವರನ್ನು ಕಣಕ್ಕಿಳಿಸುತ್ತಿದೆ. ಈಗಾಗಲೇ ಅವರು ತಾಲ್ಲೂಕಿನ ಎಲ್ಲೆಡೆ ಪ್ರಚಾರದಲ್ಲಿ ನಡೆಸುತೊಡಗಿದ್ದಾರೆ. ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್‌ ಅವರ ನೇತೃತ್ವದಲ್ಲಿ ಮುನ್ನುಗ್ಗುತ್ತಿದ್ದಾರೆ.

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನೆಲೆ ವಿಸ್ತರಿಸಿಕೊಳ್ಳುತ್ತಿರುವ ಬಿಎಸ್‌ಪಿ ಡಾ.ಚಿನ್ನಪ್ಪ.ವೈ.ಚಿಕ್ಕಹಾಗಡೆ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಇವರ ನೇತೃತ್ವದಲ್ಲಿ ವಿವಿಧ ವರ್ಗಗಳನ್ನು ಒಗ್ಗೂಡಿಸಿ ಚುಣಾವಣೆ ತಂತ್ರ ರೂಪಿಸುತ್ತಿದ್ದಾರೆ. ಎಎಪಿ ಪಕ್ಷದಿಂದ ಮುನೇಶ್‌ ಅವರು ಮತ್ತು ವಿಸಿಕೆ ಪಕ್ಷದಿಂದ ಎಂ.ಸಿ.ಹಳ್ಳಿ ವೇಣು ಅವರು ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.

ಹದಗೆಟ್ಟ ರಸ್ತೆಯೇ ಚುನಾವಣೆ ಸವಾಲು
ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ ಬಿ.ಶಿವಣ್ಣ ಅವರಿಗೆ ಈ ಬಾರಿ ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ ಪಕ್ಷಗಳು ಸವಾಲು ಒಡ್ಡಿವೆ. ಹಲವೆಡೆ ಹದಗೆಟ್ಟಿರುವ ಮುಖ್ಯ ರಸ್ತೆಗಳು ಚುನಾವಣೆಗೆ ಸವಾಲಾಗಿವೆ. ಈ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎಂಬ ದೂರಿದೆ. ಬಿಜೆಪಿ ಸರ್ಕಾರ ಹೆಚ್ಚು ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಸಮಜಾಯಿಷಿ ನೀಡಿ ಜನರನ್ನು ಸಮಾಧಾನ ಮಾಡುವ ತಂತ್ರ ಕಾಂಗ್ರೆಸ್‌ ಅನುಸರಿಸುತ್ತಿದೆ.

ಬಿಜೆಪಿ ಅಭ್ಯರ್ಥಿ: ನಿಗೂಢ
ಬಿಜೆಪಿಯಲ್ಲಿ 8ಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮದೇ ಆದ ಪ್ರಭಾವ ಬಳಸಿ ಟಿಕೆಟ್‌ ಪಡೆಯಬೇಕೆಂಬ ಉಮೇದಿನಲ್ಲಿದ್ದಾರೆ. ಈ ನಡುವೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸ್ಪರ್ಧಿಸುವರು ಎಂಬ ಮಾತುಗಳು ಕೇಳಿ ಬರುತ್ತಿವೆ. ಚುನಾವಣೆಗೆ ಅಭ್ಯರ್ಥಿ ಯಾರೆಂಬುದು ನಿಗೂಢವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.