ADVERTISEMENT

ಬನ್ನೇರುಘಟ್ಟ: ಸ್ಕೂಟರ್‌ ಬೆನ್ನಟ್ಟಿ ₹31.30 ಲಕ್ಷ ದೋಚಿದರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 4:34 IST
Last Updated 3 ಫೆಬ್ರುವರಿ 2026, 4:34 IST
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಸಕಲವಾರದಲ್ಲಿ ದರೋಡೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಸಕಲವಾರದಲ್ಲಿ ದರೋಡೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಬನ್ನೇರುಘಟ್ಟ(ಆನೇಕಲ್): ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಸಕಲವಾರದ ಬಳಿ ಭಾನುವಾರ ಹಣ ಸಾಗಿಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಸ್ತ್ರ ತೋರಿಸಿ ₹31.30 ಲಕ್ಷ ದೋಚಿದ್ದಾರೆ.

ಉಡಾನ್‌ ಕ್ಯಾಶ್‌ ಕಲೆಕ್ಟಿಂಗ್‌ ಖಾಸಗಿ ಕಂಪನಿಯ ಹಣ ಸಂಗ್ರಹ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಕೈಲಾಶ್‌ ಭಾನುವಾರ ವಿವಿಧ ಶಾಖೆಗಳಿಗೆ ತೆರಳಿ ₹31,38,625 ಹಣ ಸಂಗ್ರಹಿಸಿ ಸ್ಕೂಟರ್‌ ಡಿಕ್ಕಿಯಲ್ಲಿ ಇಟ್ಟುಕೊಂಡು ಹೊರಟಿದ್ದ. ಎರಡು ಬೈಕ್‌ನಲ್ಲಿ ಆತನನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಬನ್ನೇರುಘಟ್ಟ ಬಳಿ ಸ್ಕೂಟರ್‌ ಅಡ್ಡಗಟ್ಟಿದರು.

ಕೈಲಾಶ್‌ಗೆ ಲಾಂಗ್‌ ತೋರಿಸಿದ ದುಷ್ಕರ್ಮಿಗಳು ₹31.30 ಲಕ್ಷ ಹಣವಿದ್ದ ಸ್ಕೂಟರ್  ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆ ಸಂಭವಿಸಿದ ಜಾಗದ ಒಂದೆರಡು ಕಿಲೋ ಮೀಟರ್‌ ದೂರ ಹೋದ ನಂತರ ಸ್ಕೂಟರ್‌ನಲ್ಲಿದ್ದ ಹಣ ತೆಗೆದುಕೊಂಡು, ಸ್ಕೂಟರ್‌ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ದರೋಡೆಯ ದೃಶ್ಯ ಸೆರೆಯಾಗಿದೆ.

ADVERTISEMENT

ಕೈಲಾಶ್‌ ಉಡಾನ್‌ ಕ್ಯಾಶ್‌ ಕಲೆಕ್ಟಿಂಗ್ ಕಂಪನಿಯ ಏಜೆಂಟ್‌ ಆಗಿದ್ದು ಕಳೆದು ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಇ– ಕಾಮರ್ಸ್‌ ಕಂಪನಿಗಳು ಮತ್ತು ದಾಸ್ತಾನುಗಳಿಂದ ನಗದು ಸಂಗ್ರಹಿಸಿ ತೆರಳುತ್ತಿದ್ದಾಗ ಸಂಜೆ 4.30ಕ್ಕೆ ಮುಖ್ಯರಸ್ತೆಯಲ್ಲೇ ದರೋಡೆ ನಡೆದಿದೆ.

ಸ್ಥಳಕ್ಕೆ ಎಸ್ಪಿ ಚಂದ್ರಕಾಂತ್‌, ಎಎಸ್ಪಿಗಳಾದ ನಾಗರಾಜು, ವೆಂಕಟೇಶ್‌ ಪ್ರಸನ್ನ, ಅನೇಕಲ್‌ ಡಿವೈಎಸ್ಪಿ ಮೋಹನ್‌ ಕುಮಾರ್‌ ಮತ್ತು ಬನ್ನೇರುಘಟ್ಟ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೃಷ್ಣಕುಮಾರ್‌, ಇನ್‌ಸ್ಪೆಕ್ಟರ್‌ಗಳಾದ ರಾಘವೇಂದ್ರ, ನವೀನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.