ಸುದ್ದಿಗೋಷ್ಠಿಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.
ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ಪಡೆಯುವ ಹೋರಾಟದ ಕುರಿತು ಚರ್ಚಿಸಲು ಜೂನ್ 23ರಂದು ಮಧ್ಯಾಹ್ನ 1ಕ್ಕೆ ಉತ್ತರ ಕನ್ನಡ ಜಿಲ್ಲೆಯ ಉಳವಿಯಲ್ಲಿ ಸಂಕಲ್ಪ ಸಭೆ ಆಯೋಜಿಸಿದ್ದೇವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಉಳವಿಯಲ್ಲಿ ಸಂಕಲ್ಪ ಸಭೆ ಮಾಡಿದ ನಂತರ ನಮ್ಮ ಹೋರಾಟಕ್ಕೆ ಬಲ ಬಂದಿತ್ತು. ಹಾಗಾಗಿ ಬೆಳಗಾವಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಮತ್ತೆ ಅಲ್ಲಿಯೇ ಸಂಕಲ್ಪ ಸಭೆ ನಡೆಸುತ್ತಿದ್ದು, ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು. ಮಾರನೇ ದಿನವಾದ ಜೂನ್ 24ರಂದು ಬೆಳಿಗ್ಗೆ 8ಕ್ಕೆ ಉಳವಿಯಲ್ಲೇ ಇಷ್ಟಲಿಂಗ ಪೂಜೆ ನಡೆಸುತ್ತೇವೆ’ ಎಂದು ತಿಳಿಸಿದರು.
‘ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಹಾಗಾಗಿ ಅದರ ಬಳಿ ಮೀಸಲಾತಿ ಕೇಳುವುದಕ್ಕಿಂತ ಜನರ ಬಳಿಯೇ ಹೋಗಿ, ಸಂಘಟನೆ ಮಾಡುತ್ತೇವೆ. ಅವರು ನೀಡುವ ಸಲಹೆಗಳನ್ನು ಕ್ರೋಢಿಕರಿಸಿ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ. ಮೀಸಲಾತಿ ಆದೇಶ ಪತ್ರ ನಮ್ಮ ಕೈಸೇರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಎಂಟನೇ ಹಂತದ ಪ್ರತಿಜ್ಞಾ ಕ್ರಾಂತಿ ಅಭಿಯಾನ ಹೋರಾಟವನ್ನು ಯಾವ ವಿಧಾನಸಭಾ ಕ್ಷೇತ್ರದಿಂದ ಆರಂಭಿಸಬೇಕು ಮತ್ತು ಜನಪ್ರತಿನಿಧಿಗಳ ಜತೆ ಸಭೆಯನ್ನು ಎಂದು ನಡೆಸಬೇಕು ಎಂದು ಅಲ್ಲಿಯೇ ತೀರ್ಮಾನಿಸುತ್ತೇವೆ’ ಎಂದರು.
‘ನಿಮ್ಮ ಸಮುದಾಯದ ಜನಪ್ರತಿನಿಧಿಗಳನ್ನು ರಾಜ್ಯ ಸರ್ಕಾರ ನಿಯಂತ್ರಿಸುತ್ತಿದೆಯೇ’ ಎಂಬ ಪ್ರಶ್ನೆಗೆ, ‘ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲೇ ಅದು ಜಗಜ್ಜಾಹೀರಾಗಿದೆ’ ಎಂದು ಶ್ರೀಗಳು ಉತ್ತರಿಸಿದರು.
‘ನಮ್ಮ ಸಮುದಾಯದ ಎಲ್ಲ ನಾಯಕರ ಮೇಲೆ ನಮಗೆ ವಿಶ್ವಾಸವಿಲ್ಲ. ಆದರೆ, ಕೆಲವು ಗಟ್ಟಿ ನಾಯಕರಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ. ಬದ್ಧತೆಯಿಂದ ನಮ್ಮೊಂದಿಗೆ ಹೋರಾಡುತ್ತಿದ್ದಾರೆ. ಅವರೊಂದಿಗೆ ಹೋರಾಡಿ ಗುರಿ ಮುಟ್ಟಿತ್ತೇವೆ ಎಂಬ ಆಶಾಭಾವ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.