ಬೆಳಗಾವಿ: ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಸತತ ಮಳೆಯಿಂದ ಮೊದಲ ಫಸಲು ಕಳೆದುಕೊಂಡು ಎರಡನೇ ಸಲ ಬಿತ್ತಿದ್ದ ರೈತರನ್ನು ವರುಣ ಮತ್ತೆ ಸಂಕಷ್ಟಕ್ಕೆ ದೂಡಿದ್ದಾನೆ. ಇನ್ನೇನು ರಾಶಿ ಮಾಡಬೇಕು ಎನ್ನುವಷ್ಟರಲ್ಲೇ ಎರಡನೇ ಫಸಲು ಕೂಡ ಮಳೆಪಾಲಾಗಿದೆ.
ಒಂದೇ ಹಂಗಾಮಿನಲ್ಲಿ ಎರಡು ಬಾರಿ ಫಸಲು ಕಳೆದುಕೊಂಡ ಕೃಷಿಕರೀಗ, ‘ನಮಗೆ ಒಂದೋ ಅಥವಾ ಎರಡು ಬಾರಿಯ ಬೆಳೆಹಾನಿಗೆ ಪರಿಹಾರ ಸಿಗುತ್ತದೆಯೋ’ ಎಂದು ಗೊಂದಲಕ್ಕೆ ಸಿಲುಕಿದ್ದಾರೆ.
ಪ್ರತಿವರ್ಷ ಬೆಳೆ ಹಾನಿಯಾದಾಗ ಕೇಂದ್ರದ ಅಧಿಕಾರಿಗಳ ತಂಡ ಜಿಲ್ಲೆಗೆ ಆಗಮಿಸಿ ಅಧ್ಯಯನ ಕೈಗೊಳ್ಳುತ್ತಿತ್ತು. ಆದರೆ, ಈವರೆಗೆ ಕೇಂದ್ರ ತಂಡದವರು ಜಿಲ್ಲೆಗೆ ಭೇಟಿ ಕೊಟ್ಟಿಲ್ಲ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ನಿಯೋಗದವರು ಶುಕ್ರವಾರವಷ್ಟೇ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆಯೇ ಹೊರತು, ಸಚಿವರು ಮತ್ತು ಶಾಸಕರು ತಮ್ಮ ಸಮಸ್ಯೆ ಆಲಿಸಲು ಬಾರದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
83 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿ: ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ 7.53 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಬೆಳೆ ಹಾಗೂ 59 ಸಾವಿರ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗಳ ಬಿತ್ತನೆಯಾಗಿತ್ತು.
ಈ ಪೈಕಿ ಸುಮಾರು 80 ಸಾವಿರ ಹೆಕ್ಟೇರ್‌ನಲ್ಲಿ ಬೆಳೆದ ಹೆಸರು, ಉದ್ದು, ಸೋಯಾಅವರೆ, ಗೋವಿನಜೋಳ, ತೊಗರಿ ಮತ್ತಿತರ ಕೃಷಿ ಬೆಳೆಗಳು, 3,278 ಹೆಕ್ಟೇರ್‌ನಲ್ಲಿ ಬೆಳೆದ ಈರುಳ್ಳಿ, ಮೆಣಸಿನಸಿನಕಾಯಿ, ಟೊಮೆಟೊ ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಒಟ್ಟು 83,278 ಹೆಕ್ಟೇರ್ ಬೆಳೆ ಕೈ ತಪ್ಪಿದೆ.
‘ಯಾವುದಾದರೂ ಹಂಗಾಮಿನಲ್ಲಿ ವರುಣ ಅಬ್ಬರಿಸಿದರೆ, ಒಂದು ಬೆಳೆ ಕಳೆದುಕೊಳ್ಳುತ್ತಿದ್ದೆವು. ಆದರೆ, ಈ ಸಲ ಎರಡೂ ಫಸಲು ಕೈತಪ್ಪಿವೆ. ಆದರೆ, ಈವರೆಗೂ ಪರಿಹಾರ ಕೈಸೇರಿಲ್ಲ. ಪರಿಹಾರ ಮೊತ್ತದ ವಿಚಾರವಾಗಿ ಸ್ಪಷ್ಟತೆಯೂ ಇಲ್ಲ. ಕೇಂದ್ರದ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಿದ ನಂತರ ಪರಿಹಾರ ಸಿಗುತ್ತದೆಯೋ ಎಂಬುದು ಸಹ ತಿಳಿಯುತ್ತಿಲ್ಲ’ ಎಂದು ರೈತರು ಅಲವತ್ತುಕೊಂಡಿದ್ದಾರೆ.
ಕಾಯಿ ಕಟ್ಟುವಾಗ ವರುಣ ಕೈಕೊಟ್ಟ: ‘ನೇಸರಗಿ ಭಾಗದಲ್ಲಿ ಸೋಯಾಅವರೆ ಹೆಚ್ಚಾಗಿ ಬೆಳೆಯುತ್ತೇವೆ. ಹೂವು ಬಿಟ್ಟು, ಕಾಯಿ ಕಟ್ಟುವಾಗ ಮಳೆ ಬೇಕಿತ್ತು. ಆಗ ವರುಣ ಕೈಕೊಟ್ಟ. ಇನ್ನೇನು ಬಂದಷ್ಟು ಫಸಲನ್ನಾದರೂ ಕಟಾವು ಮಾಡಬೇಕು ಎಂದರೆ, ಈಗ ವರುಣ ಅಬ್ಬರಿಸಿ ಸಂಕಷ್ಟಕ್ಕೆ ತಳ್ಳಿದ್ದಾನೆ. ಹಿಂದಿನ ವರ್ಷ ಎಕರೆಗೆ 12 ಕ್ವಿಂಟಲ್ ಸೋಯಾಅವರೆ ಫಸಲು ಬಂದಿತ್ತು. ಈ ಸಲ ಎರಡ್ಮೂರು ಕ್ವಿಂಟಲ್ ಬಂದಿದೆ’ ಎಂದು ರೈತರು ಸಮಸ್ಯೆ ತೋಡಿಕೊಂಡಿದ್ದಾರೆ.
ಗೋವಿನಜೋಳ ಬೆಳ್ಳುಳ್ಳಿ ಉಳ್ಳಾಗಡ್ಡಿ ನೀರುಪಾಲು
ಸತ್ತಿಗೇರಿ: ಸತ್ತಿಗೇರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಎಡೆಬಿಡದೇ ಸುರಿದ ಮಳೆಯ ಕಾರಣ ಗೋವಿನಜೋಳ ಹೆಸರು ಜೋಳ ಉಳ್ಳಾಗಡ್ಡಿ ಬೆಳ್ಳುಳ್ಳಿ ಬೆಳೆ ನಾಶವಾಗುವ ಭಯ ಎದುರಾಗಿದೆ. ಎಲ್ಲ ಬೆಳೆಗಳೂ ಕಟಾವಿಗೆ ಬಂದಿದ್ದು ನೀರಿನಲ್ಲಿ ನಿಂತು ಕೊಳೆತು ಬಿಟ್ಟಿವೆ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ. ಪ್ರತಿ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋವಿನ ಜೋಳ ಬೆಳೆ ಬೆಳೆಯುತ್ತಾರೆ. ಗೋವಿನಜೋಳ ಹೆಸರು ಬೆಳೆದ ರೈತರು ನಿರಂತರ ಮಳೆಯಿಂದಾಗಿ ಹೈರಾಣಾಗಿದ್ದಾರೆ. ಅಲ್ಪಸ್ವಲ್ಪ ಉಳಿಸಿಕೊಂಡರೂ ರೋಗಭಾದೆ ಕಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅತಿವೃಷ್ಟಿಯಿಂದಾಗಿ ಹೊಲದಲ್ಲೇ ಕೊಳೆತು ಹೋಗಿವೆ. ಸತ್ತಿಗೇರಿ ಕೋ.ಶಿವಾಪುರ ಮುಗಳಿಹಾಳ ಗುಡುಮಕೇರಿ ಕೋಟೂರ ಯರಗಣವಿ ಶಿವಾಪೂರ ಯರಝರ್ವಿ ಮಾಡಮಗೇರಿ ಬೂದಿಗೊಪ್ಪ ಗ್ರಾಮಗಳಲ್ಲಿ ಬೆಳೆಗಳು ನೆಲಕಚ್ಚಿವೆ.
ಯಾರು ಏನಂತಾರೆ...?
ಆಗಸ್ಟ್‌ನಲ್ಲಿ 6ರಿಂದ 10ರ ಅವಧಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೀಡಾದ ಬೆಳೆಗಳ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡುತ್ತಿದ್ದೇವೆ. ಸೆಪ್ಟೆಂಬರ್ ಕೊನೇ ವಾರ ಸುರಿದ ಮಳೆಯಿಂದ ಆಗಿರುವ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಪ್ರಗತಿಯಲ್ಲಿದೆ–ಎಚ್.ಡಿ.ಕೋಳೇಕರ ಜಂಟಿನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ
ತೋಟಗಾರಿಕೆ ಕೃಷಿ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ನಿಯಮಾನುಸಾರ ಶೀಘ್ರವೇ ಪರಿಹಾರ ರೈತರ ಕೈಗೆಟುಕಲಿದೆ–ಮಹಾಂತೇಶ ಮುರಗೋಡ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಬೆಳಗಾವಿ
ಬೆಳೆ ಹಾನಿ ಗಮನಕ್ಕೆ ಬಂದಿದೆ. ಸರ್ವೆ ಮಾಡಲು ತಿಳಿಸಿದ್ದೇನೆ. ಯರಗಟ್ಟಿ– ಸವದತ್ತಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಲಾಗುವುದು.–ರಮೇಶ ಹಾವರಡ್ಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸವದತ್ತಿ
ಪ್ರತಿ ಎಕರೆಯಲ್ಲಿ ಕ್ಯಾರೆಟ್ ಬೆಳೆಯಲು ₹45 ಸಾವಿರ ಖರ್ಚಾಗಿತ್ತು. ಆದರೆ ಫಸಲು ಹಾಳಾಗಿ ಹಾಕಿದ ಬಂಡವಾಳವೂ ಕೈಗೆ ಬಂದಿಲ್ಲ. ಸರ್ಕಾರ ತ್ವರಿತವಾಗಿ ಪರಿಹಾರ ನೀಡಲಿ–ಈರಣ್ಣ ಮೀಶಿಪಾಟೀಲ ರೈತ ನೇಸರಗಿ
ಕಟಾವಿಗೆ ಬಂದು ನಿಂತ ಬೆಳೆಗಳು ಕೈಗೆ ಬಾರದಂತಾಗಿವೆ. ಸಂಬಂಧಿತ ಅಧಿಕಾರಿಗಳು ಪರಿಶೀಲನೆ ಮಾಡಿ ರೈತರಿಗೆ ಪರಿಹಾರ ನೀಡಬೇಕು–ಮಹಾಂತೇಶ ತೋಟಗಿ ರೈತ ಕೋ.ಶಿವಾಪುರ
ನನ್ನ ಹೊಲದಲ್ಲಿ ಬೆಳೆದ ಬೆಳ್ಳುಳ್ಳಿ ಈರುಳ್ಳಿ ಬೆಳೆ ನೀರುಪಾಲಾಗಿದೆ. ₹90 ಸಾವಿರ ವೆಚ್ಚದಲ್ಲಿ ಬೀಜ ಖರೀದಿಸಿದ್ದೆ. ₹50 ಸಾವಿರ ವ್ಯಯಿಸಿ ಔಷಧ ₹60 ಸಾವಿರ ವ್ಯಯಿಸಿ ಗೊಬ್ಬರ ಖರೀದಿಸಿದ್ದೆ. ಆದರೆ ಈಗ ಬೆಳೆ ಕೈಗೆ ಬಾರದೆ ಸಂಕಷ್ಟದಲ್ಲಿ ಕೈತೊಳೆಯುವಂತಾಗಿದೆ ಳ–ಬಸವರಾಜ ದಳವಾಯಿ ರೈತ ಮುಗಳಿಹಾ
ಭರವಸೆ ನೀಡಿ ಹೋದ ಸಿ.ಎಂ
ಈ ಬಾರಿ ಉತ್ತರ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ 95ರಷ್ಟು ಮಳೆ ಹೆಚ್ಚಾಗಿ ಬಿದ್ದಿದೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಘೋಷಣೆ ಮಾಡಿದ್ದಾರೆ. ಅದರಲ್ಲೂ ನಿರಂತರ ಮಳೆಯ ಕಾರಣ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪೆಟ್ಟು ಬಿದ್ದಿದೆ.
ಆದರೆ ಈವರೆಗೆ ಕೃಷಿ ಇಲಾಖೆ ಅಧಿಕಾರಿಗಳು ಶೇ 60ರಷ್ಟು ಮಾತ್ರ ಸಮೀಕ್ಷೆ ನಡೆಸಿದ್ದಾರೆ ಎಂಬುದು ರೈತರ ಅಂಬೋಣ. ಒಂದೆಡೆ ಅತಿವೃಷ್ಟಿಯಾದರೆ ಇನ್ನೊಂದೆಡೆ ಮಹಾರಾಷ್ಟ್ರದಿಂದ ಬಂದ ನೆರೆಯ ಉಪಟಳ. ಬೆಳಗಾವಿ ಖಾನಾಪುರ ಬೈಲಹೊಂಗಲ ಯರಗಟ್ಟಿ ತಾಲ್ಲೂಕುಗಳು ಅತಿವೃಷ್ಟಿ ಕಾರಣ ಸಂಕಷ್ಟ ಎದುರಿಸುತ್ತಿವೆ. ಅದೇ ರೀತಿ ಚಿಕ್ಕೋಡಿ ಅಥಣಿ ಕಾಗವಾಡ ಹಾಗೂ ರಾಯಬಾಗ ತಾಲ್ಲೂಕುಗಳು ಕೃಷ್ಣಾ ನದಿ ನೀರಿನಿಂದ ಕಂಗೆಟ್ಟಿವೆ. ಈ ನೀರು ಕೂಡ ಮಹಾರಾಷ್ಟ್ರದಲ್ಲಿ ಆದ ಅತಿವೃಷ್ಟಿಯಿಂದ ಬಂದಿದೆ. ಮಳೆ ಜಿಲ್ಲೆಯಲ್ಲಿ ಆದರೂ ನೆರೆ ಜಿಲ್ಲೆಯಲ್ಲಿ ಆದರೂ ಬೆಳಗಾವಿ ಜಿಲ್ಲೆ ರೈತರಿಗೆ ಮಾತ್ರ ಸಂಕಷ್ಟ ತಪ್ಪಿದ್ದಲ್ಲ ಎಂಬಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.