
ಬೆಳಗಾವಿ: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ ವಿರೋಧಿಸಿ, ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ‘ಈ ಮಸೂದೆ ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
‘ಈ ಮಸೂದೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಇದು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ತಂತ್ರವಾಗಿದ್ದು, ಸಂವಿಧಾನ ನೀಡಿದ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನವೂ ಇದಾಗಿದೆ’ ಎಂದು ಆರೋಪಿಸಿದರು.
‘ದ್ವೇಷ ಭಾಷಣಕ್ಕೆ ಸರ್ಕಾರ ನೀಡಿದ ವ್ಯಾಖ್ಯಾನ ಅಸ್ಪಷ್ಟವಾಗಿದೆ. ಸರ್ಕಾರದ ಜನವಿರೋಧಿ ನೀತಿಗಳನ್ನು ಟೀಕಿಸುವುದು, ಸಾಮಾಜಿಕವಾಗಿ ಚರ್ಚಿಸುವುದನ್ನು ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ವಿರೋಧ ಪಕ್ಷದವರಷ್ಟೇ ಅಲ್ಲ; ಜನಸಾಮಾನ್ಯರನ್ನೂ ಅಪರಾಧಿಗಳಾಗಿ ನೋಡುವ ಈ ಕಾಯ್ದೆ ನಮಗೆ ಬೇಕೇ?’ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಸಂಜಯ ಪಾಟೀಲ, ‘ಭ್ರಷ್ಟಾಚಾರದಲ್ಲಿ ಮುಳುಗಿದ ರಾಜ್ಯ ಸರ್ಕಾರದ ಅಧಿಕಾರವಧಿಯಲ್ಲಿ ಅನೇಕ ಹಗರಣ ನಡೆದಿವೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಅಭಿವೃದ್ಧಿ ಬದಲಿಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಟವನ್ನೇ ನೋಡುವಂತಾಗಿದೆ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಕಡಿವಾಣ ಹಾಕಲು ತಂದಿರುವ ಈ ಮಸೂದೆ ವಿರೋಧಿಸಿ ಪ್ರತಿಭಟಿಸುತ್ತಿದ್ದೇವೆ’ ಎಂದರು.
ಮುಖಂಡರಾದ ಎಂ.ಬಿ.ಝಿರಲಿ, ಗೀತಾ ಸುತಾರ, ಯುವರಾಜ ಜಾಧವ, ಉಜ್ವಲಾ ಬಡವನ್ನಾಚೆ, ಮುರುಘೇಂದ್ರಗೌಡ ಪಾಟೀಲ ಇತರರಿದ್ದರು.
‘ನರೇಗಾ ತಿದ್ದುಪಡಿ ಬೇಡ’
ಬೆಳಗಾವಿ: ಕೇಂದ್ರ ಸರ್ಕಾರವು ನರೇಗಾ ಕಾಯ್ದೆ ಬದಲಿಗೆ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆ ಜಾರಿ ಮಾಡುತ್ತಿರುವುದನ್ನು ವಿರೋಧಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ(ಗ್ರಾಕೂಸ್)ಯವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ರಾಣಿ ಚನ್ನಮ್ಮನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಈ ಮಸೂದೆ ರದ್ದತಿಗೆ ಆಗ್ರಹಿಸಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು. ‘ಬಡವರಿಗೆ ನರೇಗಾ ಯೋಜನೆ ಆಸರೆಯಾಗಿದೆ. ಕಳೆದ 15 ವರ್ಷಗಳಿಂದ ಅಪಾರ ಸಂಖ್ಯೆಯ ಕುಟುಂಬಗಳು ಇದನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಗ್ರಾಮೀಣ ಭಾಗದ ಜನ ಕೆಲಸಕ್ಕಾಗಿ ವಲಸೆ ಹೋಗುವುದು ತಪ್ಪಿದೆ. ನರೇಗಾ ಕಾಯ್ದೆಯಲ್ಲಿ ಯಾವುದೇ ಲೋಪವಿದ್ದರೆ ನರೇಗಾ ಸರಿಪಡಿಸಬಹುದಿತ್ತು. ಆದರೆ ವಿಬಿ–ಜಿ ರಾಮ್ ಜಿ ಮಸೂದೆ ಜಾರಿಗೆ ಮುಂದಾಗಿರುವುದು ಸರಿಯಲ್ಲ. ಇದು ಕಾರ್ಮಿಕರಿಗೆ ಮಾರಕವಾಗಿದೆ’ ಎಂದು ದೂರಿದರು. ಅನಿತಾ ಸಾಗರಿಕಾ ವಂದನಾ ವಿದ್ಯಾ ಮಹಾದೇವಿ ನೇತೃತ್ವ ವಹಿಸಿದ್ದರು.
ಸಂಸದ ಮಾನೆ ವಿರುದ್ಧ ಆಕ್ರೋಶ
ಬೆಳಗಾವಿ: ನಾಡವಿರೋಧಿ ಧೋರಣೆ ತಳೆದ ಮಹಾರಾಷ್ಟ್ರದ ಹಾತಕಣಗಲೆ ಕ್ಷೇತ್ರದ ಸಂಸದ ಧೈರ್ಯಶೀಲ ಮಾನೆ ವಿರುದ್ಧವಾಗಿ ಧ್ವನಿ ಎತ್ತದ ರಾಜ್ಯದ ಸಂಸದರ ವಿರುದ್ಧ ಗಡಿನಾಡು ಕನ್ನಡಿಗರ ಸೇನೆಯವರು ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ‘ಬೆಳಗಾವಿಯಲ್ಲಿ ಎಂಇಎಸ್ ನಡೆಸುವ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಿ ಪ್ರಚೋದನಕಾರಿ ಭಾಷಣ ಮಾಡದಂತೆ ತಡೆಯಲು ಧೈರ್ಯಶೀಲ ಮಾನೆ ಅವರಿಗೆ ಬೆಳಗಾವಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಹೀಗಿರುವಾಗ ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದು ಸರಿಯಲ್ಲ’ ಎಂದು ಆರೋಪಿಸಿದರು. ಮುಖಂಡರಾದ ಬಲರಾಮ ಮಾಸೇನಟ್ಟಿ ಆನಂದ ಬಿಲಾವರ ಸಂತೋಷ ಮಾಸೇನಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.