ಎಐಸಿಸಿ, ಕೆಪಿಸಿಸಿಯಿಂದ ಬೆಳಗಾವಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶವನ್ನು ಲಕ್ಷ್ಮೀ ಹೆಬ್ಬಾಳಕರ, ರಣದೀಪ್ ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸತೀಶ ಜಾರಕಿಹೊಳಿ, ಎಚ್.ಕೆ.ಪಾಟೀಲ ಅವರು ಖಾಲಿ ಸಿಲಿಂಡರ್‌ಗಳಿಗೆ ಮಾಲೆ ಹಾಕಿ ವಿನೂತನವಾಗಿ ಉದ್ಘಾಟಿಸಿದರು.
ಬೆಳಗಾವಿ: ‘ಕಾಶ್ಮೀರದಲ್ಲಿ ಭಯೋತ್ಪಾದಕರು ಅಮಾಯಕರ ಹತ್ಯೆ ಮಾಡಿದಾಗ ಒಬ್ಬ ಪೊಲೀಸ್ ಕೂಡ ಅಲ್ಲಿರಲಿಲ್ಲ. ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ. ಲೋಪ ಮರೆಮಾಚಲು ನನ್ನ ಹೇಳಿಕೆ ತಿರುಚುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಮತ್ತು ‘ಸಂವಿಧಾನ ರಕ್ಷಿಸಿ ದೇಶ ಉಳಿಸಿ’ ಆಂದೋಲನದ ಅಂಗವಾಗಿ ಎಪಿಸಿಸಿ, ಕೆಪಿಸಿಸಿ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪಾಕಿಸ್ತಾನ ವಿರುದ್ಧ ಯುದ್ಧ ಮಾಡುವುದೇ ಬೇಡವೆಂದು ನಾನು ಹೇಳಿಲ್ಲ. ಅನಿವಾರ್ಯ ಪರಿಸ್ಥಿತಿ ಬಂದರೆ ಯುದ್ಧ ಮಾಡಲೇಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರದವರು ಭಯೋತ್ಪಾದಕರನ್ನು ಮಟ್ಟ ಹಾಕುವುದನ್ನು ಬಿಟ್ಟು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ದೇಶದ ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ಬಂದರೆ ಎದುರಿಸಲು ಸಿದ್ಧರಿದ್ದೇವೆ’ ಎಂದರು.
‘ಕೇಂದ್ರ ಗುಪ್ತಚರ ವಿಭಾಗ ಮತ್ತು ಭದ್ರತಾ ವ್ಯವಸ್ಥೆ ಏನು ಮಾಡುತ್ತಿದೆ? ಇದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ವಿಫಲತೆ ಅಲ್ಲವೇ? ನಮಗೆ ರಕ್ಷಣೆ ನೀಡುವಲ್ಲಿ ವಿಫಲ ಆಗಿರುವುದನ್ನು ಭಾರತೀಯರಾದ ನಾವು ಪ್ರಶ್ನಿಸಬಾರದೇ?’ ಎಂದು ವಾಗ್ದಾಳಿ ನಡೆಸಿದರು.
‘ನಮ್ಮ ಪ್ರತಿಭಟನಾ ಸಮಾವೇಶಕ್ಕೇ ನುಗ್ಗಿದ ಬಿಜೆಪಿಯವರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಇಂಥ ಬೆದರಿಕೆಗೆ ನಾನು ಜಗ್ಗಲ್ಲ, ಬಗ್ಗಲ್ಲ. ನಮ್ಮ ಕಾರ್ಯಕರ್ತರಿಗೂ ಶಕ್ತಿ ಇದೆ’ ಎಂದು ಬಿಜೆಪಿ ಪ್ರತಿಭಟನಾಕಾರರ ವಿರುದ್ಧ ಗುಡುಗಿದರು.
‘ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದನ್ನು ಮರೆಮಾಚಲು ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಜನರಿಗೆ ಸತ್ಯ ತಿಳಿಸಲು ನಾವು ಪ್ರತಿಭಟನಾ ಸಮಾವೇಶ ಮಾಡುತ್ತಿದ್ದೇವೆ’ ಎಂದರು.
ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಕೆ.ಎಚ್.ಮುನಿಯಪ್ಪ ನೇತೃತ್ವ ವಹಿಸಿದ್ದರು.
ಎಎಸ್ಪಿ ಮೇಲೆ ಕೈ ಮಾಡಲು ಮುಂದಾದ ಸಿದ್ದರಾಮಯ್ಯ
ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ನುಗ್ಗಿದ ಆರು ಬಿಜೆಪಿ ಕಾರ್ಯಕರ್ತೆಯರು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದರು. ಕಪ್ಪು ಬಾವುಟ ತೋರಿಸಿ ಘೋಷಣೆ ಮೊಳಗಿಸಿದರು.
ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಧಾರವಾಡ ಎಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಕೈ ಮಾಡಲು ಮುಂದಾದರು. ಭರಮನಿ ಅವರು ತಕ್ಷಣಕ್ಕೆ ಹಿಂದೆ ಸರಿದರು.
‘ಯಾರಯ್ಯ ಬೆಳಗಾವಿ ಎಸ್ಪಿ. ಏನು ನಡೆಯುತ್ತಿದೆ ಇಲ್ಲಿ? ಏನ್ ಮಾಡುತಿದ್ದೀರಿ ನೀವೆಲ್ಲ’ ಎಂದೂ ರೇಗಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್ ಹಾಗೂ ಸಚಿವ ಎಚ್.ಕೆ.ಪಾಟೀಲ ತಕ್ಷಣ ಸಿದ್ದರಾಮಯ್ಯ ಬಳಿ ಬಂದು ಸಮಾಧಾನಪಡಿಸಿದರು.
ಇದರ ಮಧ್ಯೆ ಪ್ರತಿಭಟನಾನಿರತ ಮಹಿಳೆಯರು ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಪೊಲೀಸರು ಎಲ್ಲರನ್ನೂ ಹೊರಕ್ಕೆ ಎಳೆದೊಯ್ದರು. ಹೊರಗೆ ನಿಂತಿದ್ದ ಬಿಜೆಪಿಯ ಕೆಲ ಕಾರ್ಯಕರ್ತರು ಪೊಲೀಸ್ ವಾಹನಗಳಿಗೂ ಮುತ್ತಿಗೆ ಹಾಕಿದರು.
ಇದರಿಂದ ಸಮಾವೇಶದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಸಿ.ಎಂ ಕೆಲಹೊತ್ತು ಭಾಷಣ ನಿಲ್ಲಿಸಿದರು.
ಒಂದೆಡೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು, ಮತ್ತೊಂದೆಡೆ ಬಿಜೆಪಿ ಸರ್ಕಾರದ ಲೂಟಿ. ಎರಡರ ಮಧ್ಯೆ ಸಂಘರ್ಷ ನಡೆದಿದೆ. ಗ್ಯಾರಂಟಿಗಳು ನೆಮ್ಮದಿ ನೀಡುತ್ತಿದ್ದರೆ ಕೇಂದ್ರದ ನೀತಿಗಳು ಆತಂಕ ತಂದೊಡ್ಡಿವೆ.– ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಧಾನ ಕಾರ್ಯದರ್ಶಿ, ಎಐಸಿಸಿ
ಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್‌ನ ದರ ಏರಿಕೆಯೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಮೂಲ. ಹೀಗಾಗಿ ಜನರ ಆಕ್ರೋಶ ಏನಿದ್ದರೂ ಕೇಂದ್ರ ಸರ್ಕಾರದ ಮೇಲಿರಬೇಕು.– ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಬಿಜೆಪಿಯವರು ನಮ್ಮ ಸಮಾವೇಶ ಹಾಳು ಮಾಡಲು ಯತ್ನಿಸಿದ್ದಾರೆ. ನಮಗೇನು ಕಾರ್ಯಕರ್ತರಿಲ್ಲವೇ? ಶಕ್ತಿ ಇಲ್ಲವೇ? ಇದೇ ರೀತಿಯ ಪಾಠವನ್ನು ನಾವೂ ಕಲಿಸುತ್ತೇವೆ.– ಲಕ್ಷ್ಮೀ ಹೆಬ್ಬಾಳಕರ, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.