ADVERTISEMENT

ಮಹದಾಯಿ ನೀರು ಹಂಚಿಕೆ | ಗೋವಾದ ದುರುದ್ದೇಶ ನ್ಯಾಯಾಲಯಕ್ಕೆ ತಿಳಿಸಿ -ಅಶೋಕ ಚಂದರಗಿ

ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಸರ್ಕಾರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 12:08 IST
Last Updated 21 ಮಾರ್ಚ್ 2021, 12:08 IST
ಕಳಸಾ ಯೋಜನಾ ಸ್ಥಳಕ್ಕೆ ಜಂಟಿ ಪರಿಶೀಲನಾ ಸಮಿತಿ ಸದಸ್ಯರು ಭೇಟಿ ನೀಡಿದ್ದ ಚಿತ್ರ
ಕಳಸಾ ಯೋಜನಾ ಸ್ಥಳಕ್ಕೆ ಜಂಟಿ ಪರಿಶೀಲನಾ ಸಮಿತಿ ಸದಸ್ಯರು ಭೇಟಿ ನೀಡಿದ್ದ ಚಿತ್ರ   

ಬೆಳಗಾವಿ: ‘ಮಹದಾಯಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ನೀಡಿದ್ದ ಆದೇಶದ ಅನ್ವಯ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನೀರಾವರಿ ಇಲಾಖೆಗಳ ಅಧಿಕಾರಿಗಳ ತ್ರಿಸದಸ್ಯ ಜಂಟಿ ಪರಿಶೀಲನಾ ಸಮಿತಿಯು ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿರುವ ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದಾಗ, ನಡೆದ ಘಟನೆಗಳು ಗೋವಾದ ದುರುದ್ದೇಶವನ್ನು ಬಟಾಬಯಲುಗೊಳಿಸಿವೆ. ಇದನ್ನು ಸರ್ಕಾರವು ನ್ಯಾಯಾಲಯದ ಗಮನಕ್ಕೆ ತರಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ರಾಕೇಶ್ ಸಿಂಗ್ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

‘ಯೋಜನಾ ಪ್ರದೇಶದಲ್ಲಿ ನಿರ್ಮಿಸಿದ ತಡೆಗೋಡೆಯಲ್ಲಿ ಈ ಹಿಂದೆ ಉಂಟಾಗಿದ್ದ ಬಿರುಕುಗಳನ್ನು ಮುಚ್ಚಲಾಗಿತ್ತು. ಈ ಬಿರುಕುಗಳು ಮತ್ತೆ ತೆರೆದುಕೊಂಡಿವೆಯೇ ಹೇಗೆ ಎನ್ನುವುದನ್ನು ಪರಿಶೀಲಿಸಲು ನ್ಯಾಯಾಲಯವು ಆದೇಶಿಸಿತ್ತು. ಆ ಪ್ರಕಾರ ಮೂರೂ ರಾಜ್ಯಗಳ ಅಧಿಕಾರಿಗಳ ಸಮಿತಿಯು ಭೇಟಿ ನೀಡಿದ ಕಾಲಕ್ಕೆ ಗೋವಾದ ಅಧಿಕಾರಿಗಳು ಪರಿಸರವಾದಿಗಳು ಮತ್ತು ಆ ರಾಜ್ಯದ ಪತ್ರಕರ್ತರನ್ನು ಕರೆತಂದಿದ್ದರು. ಉದ್ದೇಶಪೂರ್ವಕವಾಗಿಯೇ ಕರ್ನಾಟಕ ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಅಂದು ರಾತ್ರಿ 9ರವರೆಗೂ ಕರ್ನಾಟಕದ ಅಧಿಕಾರಿಗಳ ಜೊತೆಗೂ ವಾದ ನಡೆಸಿದ್ದಲ್ಲದೇ, ವಾಸ್ತವತೆಯ ಆಧಾರದ ಮೇಲೆ ವರದಿ ತಯಾರಿಸಲೂ ಸಿದ್ಧರಾಗಲಿಲ್ಲ ಎಂದು ತಿಳಿದುಬಂದಿದೆ’ ಎಂದು ದೂರಿದ್ದಾರೆ.

ADVERTISEMENT

‘ಸುಪ್ರೀಂ ಕೋರ್ಟ್‌ ಆದೇಶದ ಅನ್ವಯವೆ ನಿರ್ಮಿಸಲಾದ ತಡೆಗೋಡೆಯು ಭದ್ರವಾಗಿಯೆ ಇದೆ ಎಂಬ ವಾಸ್ತವವನ್ನು ಕಂಡರೂ ಅದನ್ನು ವರದಿಯಲ್ಲಿ ಪ್ರಸ್ತಾಪಿಸಲು ಗೋವಾ ಅಧಿಕಾರಿಗಳು ಸಿದ್ಧರಾಗಲಿಲ್ಲ ಎಂದು ಗೊತ್ತಾಗಿದೆ. ಹಾಗೆಯೇ ತಮ್ಮ ರಾಜ್ಯಕ್ಕೆ ಮರಳಿ ಹೋದರಲ್ಲದೇ ಅಲ್ಲಿಯ ಮಾಧ್ಯಮಗಳಲ್ಲಿ ಕರ್ನಾಟಕದ ಅಧಿಕಾರಿಗಳ ವಿರುದ್ಧ ವರದಿಗಳು ಪ್ರಕಟವಾಗಲು ಕಾರಣರಾದರು’ ಎಂದು ಆರೋಪಿಸಿದ್ದಾರೆ.

‘ಕಳಸಾ ಬಂಡೂರಿ ಯೋಜನೆಯ ಅನುಷ್ಠಾನ ತಡೆಯುವ ಪ್ರಯತ್ನವಾಗಿ ವಿಳಂಬ ತಂತ್ರ ಅನುಸರಿಸುತ್ತಿರುವ ಗೋವಾ ತನ್ನ ತಂತ್ರಕ್ಕಾಗಿ ಸುಪ್ರೀಂ ಕೋರ್ಟ್‌ನ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದೆ. ಈ ವಿಷಯವನ್ನು ಸರ್ಕಾರ ಏಪ್ರಿಲ್‌ ಮೊದಲ ವಾರ ನಡೆಯುವ ವಿಚಾರಣೆ ಕಾಲದಲ್ಲಿ ನ್ಯಾಯಾಲಯದ ಗಮನಕ್ಕೆ ತರಬೇಕು’ ಎಂದು ಒತ್ತಾಯಿಸಿದ್ದಾರೆ.

‘ಜಂಟಿ ಪರಿಶೀಲನಾ ಸಮಿತಿಯು ವಾಸ್ತವ ಪರಿಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತರಲು ವಿಫಲವಾದರೆ, ಸುಪ್ರೀಂ ಕೋರ್ಟ್‌ ತನ್ನದೇ ಆದ ಅಧಿಕಾರಿಗಳನ್ನು ಯೋಜನಾ ಪ್ರದೇಶಕ್ಕೆ ಕಳುಹಿಸುವಂತೆ ಸರ್ಕಾರ ಮನವಿ ಮಾಡಿಕೊಳ್ಳಬಹುದಾಗಿದೆ’ ಎಂದು ಸಲಹೆ ನೀಡಿದ್ದಾರೆ.

‘2010ರಿಂದ 2018ರವರೆಗೆ ಮಹದಾಯಿ ನ್ಯಾಯಮಂಡಳಿಯ ವಿಚಾರಣೆ ಕಾಲಕ್ಕೂ ಇದೇ ರೀತಿ ವಿಳಂಬ ತಂತ್ರ ಅನುಸರಿಸಿದ್ದ ಗೋವಾ ಈಗ ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರ್ಕಾರದ ವೇದಿಕೆಗಳನ್ನು ಬಳಸಿಕೊಂಡು ಯೋಜನೆಯ ಅನುಷ್ಠಾನವನ್ನು ತಡೆಯಲು ಯತ್ನಿಸುತ್ತಿದೆ’ ಎಂದು ದೂರಿದ್ದಾರೆ.

‌‘2018ರ ಆ.14ರಂದು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ ನೇತೃತ್ವದ ನ್ಯಾಯಮಂಡಳಿ ನೀಡಿದ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್‌ 2020ರ ಫೆ.20ರಂದು ಆದೇಶಿಸಿತು. ಅದರಂತೆ ಕೇಂದ್ರವು ವಾರದಲ್ಲೇ ಅಂದರೆ ಫೆ. 27ರಂದು ಗೆಜೆಟ್‌ನಲ್ಲಿ ಪ್ರಕಟಿಸಿತು. ರಾಜ್ಯ ಸರ್ಕಾರವು ಯೋಜನೆಯ ಅನುಷ್ಠಾನಕ್ಕಾಗಿ ₹ 1,677 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿರಿಸಿದೆ. ಈ ಪ್ರಗತಿ ಸಹಿಸಲಾಗದ ಗೋವಾ ವಿಳಂಬ ತಂತ್ರಕ್ಕೆ ಮೊರೆ ಹೋಗಿದೆ. ಆ ಕುತಂತ್ರವನ್ನು ಸರ್ಕಾರ ಬಯಲಿಗೆ ಎಳೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.