ADVERTISEMENT

CM ಬದಲಾವಣೆ ವಿಚಾರ; ಡಿ.ಕೆ.ಶಿವಕುಮಾರ್‌ ಕೋರಿಕೆ ಹೈಕಮಾಂಡ್ ಒಪ್ಪಿಲ್ಲ: ಯತೀಂದ್ರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 22:46 IST
Last Updated 8 ಡಿಸೆಂಬರ್ 2025, 22:46 IST
ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ   

ಬೆಳಗಾವಿ: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮಗೂ ಅವಕಾಶ ಕೊಡಿ ಎಂದು ಕೋರಿದ್ದು ನಿಜ. ಆದರೆ, ಹೈಕಮಾಂಡ್‌ ಒಪ್ಪಿಲ್ಲ. ಈಗ ನಾಯಕತ್ವ ಬದಲಾವಣೆಯ ಪರಿಸ್ಥಿತಿ ಇಲ್ಲ ಎಂದು ಹೇಳಿದೆ. ಹೀಗಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಪೂರೈಸುತ್ತಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸುವರ್ಣ ವಿಧಾನಸೌಧದ ಎದುರು ಸೋಮವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನಾಯಕತ್ವ ಬದಲಾವಣೆ ಎಂಬುದು ಈಗ ಮುಗಿದ ಅಧ್ಯಾಯ. ಮುಂದಿನ ಜನವರಿಯಲ್ಲಿ ಪದವಿ ಬದಲಾವಣೆ ಆಗಲಿದೆ ಎಂಬುದು ಸುಳ್ಳು’ ಎಂದರು.

‘ನಾಯಕತ್ವ ವಿಷಯದಲ್ಲಿ ಎದ್ದ ಗೊಂದಲಕ್ಕೆ ತೆರೆ ಎಳೆಯುವ ಸಂಬಂಧ ಉಪಾಹಾರ ಕೂಟ ಮಾಡಿದ್ದರು. ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧ ಎಂದು ಇಬ್ಬರೂ ನಾಯಕರು ಹೇಳಿದ್ದಾರೆ. ಒಗ್ಗಟ್ಟು ಪ್ರದರ್ಶಿಸಿದ್ದಾರೆ’ ಎಂದೂ ಅವರು ಹೇಳಿದರು. 

ADVERTISEMENT

‘ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯಾ ಪಕ್ಷದ ನಾಯಕರನ್ನು ಇಷ್ಟು ವರ್ಷಕ್ಕೆ ಸೀಮಿತ ಎಂದು ಆಯ್ಕೆ ಮಾಡುವುದಿಲ್ಲ. ಶಾಸಕರು ಐದು ವರ್ಷ ಆಯ್ಕೆಯಾದ ರೀತಿಯಲ್ಲೇ ಶಾಸಕಾಂಗ ಪಕ್ಷದ ನಾಯಕರೂ ಐದು ವರ್ಷಕ್ಕೆ ಆಯ್ಕೆ ಆಗಿರುತ್ತಾರೆ’ ಎಂದರು. 

ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಅವರು, ‘ಸದನದಲ್ಲಿ ಅವಿಶ್ವಾಸ ಮಂಡನೆ ಮಾಡುವುದಾಗಿ ಬಿಜೆಪಿಯ ಕೆಲ ನಾಯಕರು ಹೇಳುತ್ತಿದ್ದಾರೆ. ಆ ಪ್ರಯತ್ನಕ್ಕೆ ಕೈ ಹಾಕಿದರೆ ಮುಖಭಂಗ ಎದುರಿಸುತ್ತಾರೆ. ಆ ಸಾಮರ್ಥ್ಯ ಅವರಿಗೆಲ್ಲಿದೆ’ ಎಂದರು.

‘ಅಧಿವೇಶನದಲ್ಲಿ ಜನರ ವಿಷಯ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಿ. ಅದನ್ನು ಬಿಟ್ಟು ರಾಜಕೀಯ ಮಾಡಿದರೆ ಅನಗತ್ಯ ಖರ್ಚು ಮತ್ತು ಸಮಯ ವ್ಯರ್ಥವಾಗುತ್ತದೆ’ ಎಂದರು.

ಬಿಜೆಪಿ ಸಂಸ್ಕೃತಿ: ‘ಹಣ ಪಡೆದು ಸಿ.ಎಂ ಪದವಿ ಕೊಡುವ ಸಂಸ್ಕೃತಿ ಬಿಜೆಪಿಯಲ್ಲಿದೆ ಹೊರತು ನಮ್ಮಲ್ಲಿ ಇಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. 

‘₹500 ಕೋಟಿ‌‌ ಕೊಟ್ಟರೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಮಾಡುತ್ತಾರೆ’ ಎಂಬ ಮಾಜಿ ಸಚಿವೆ ನವಜೋತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನವಜೋತ್ ಅವರು ಕರ್ನಾಟಕದವರೇ? ಅವರು ಹೇಳಿದ್ದಾರೆ ಎಂದು ಬಿಜೆಪಿಯವರು ಏಕೆ ಮೈ ಉರಿ ಮಾಡಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

‘ಉಪಾಹಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು  ಇಡ್ಲಿ ತಿಂದರೋ ನಾಟಿಕೋಳಿ ತಿಂದರೋ ಎಂಬುದು ಬೇಕಾಗಿಲ್ಲ. ಬಿಜೆಪಿ ಸದನದಲ್ಲಿ ಪ್ರಶ್ನೆಗಳನ್ನು ಕೇಳಲಿ. ಉತ್ತರಿಸಲು ನಾವು ಸಿದ್ಧರಿದ್ದೇವೆ’ ಎಂದರು.

ನಮ್ಮ ತಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಬಿಜೆಪಿಯವರು ನಾಯಕತ್ವ ಬದಲಾವಣೆಯ ಮಾತು ಆಡುತ್ತಲೇ ಇದ್ದಾರೆ. ಈಗ ಅದಕ್ಕೆಲ್ಲ ಅರ್ಥವಿಲ್ಲ. ಅದು ಅವರ ಕನಸು ಮಾತ್ರ
ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಸದಸ್ಯ

‘ಕೇಂದ್ರದತ್ತ ಬೊಟ್ಟು ಮಾಡುವುದೇ ಸಿ.ಎಂ ಕೆಲಸವೇ?’

‘ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಅದೇ ಕುರ್ಚಿ ಕಬಳಿಸುವಲ್ಲಿ ಡಿ.ಕೆ.ಶಿವಕುಮಾರ್ ಕಾಲ ಕಳೆಯುತ್ತಿದ್ದಾರೆ. ಪ್ರತಿಪಕ್ಷದವರು ಏನೇ ಪ್ರಶ್ನಿಸಿದರೂ ಕೇಂದ್ರದತ್ತ ಬೊಟ್ಟು ಮಾಡುತ್ತಾರೆ. ಇದಕ್ಕಾಗಿಯೇ ಸಿ.ಎಂ ಆಗಿದ್ದಾರೆಯೇ?’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಶ್ನಿಸಿದರು.

‘ಸಿಎಂ ಮತ್ತು ಡಿಸಿಎಂ ಇಬ್ಬರೂ ರಾಜ್ಯದ ಜನರ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮಂಗಳವಾರ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಿ.ಎಂ ಬದಲಾವಣೆ ಕುರಿತು ನಾನು ಮಾತನಾಡುವುದಿಲ್ಲ. ನನಗೆ ನೋಟಿಸ್‌ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅನ್ಯೋನ್ಯವಾಗಿದ್ದಾರೆ. ಯತೀಂದ್ರ ಚಿಂತನೆ ಮಾಡಿಯೇ ಮಾತಾಡಿದ್ದಾರೆ
ಎಚ್.ಡಿ.ರಂಗನಾಥ್, ಶಾಸಕ, ಕುಣಿಗಲ್‌

ಜ. 8, 9ರವರೆಗೆ ಕಾಯಿರಿ: ಇಕ್ಬಾಲ್‌

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗೇ ಆಗುತ್ತಾರೆ. ಜನವರಿ 8 ಅಥವಾ 9ರವರೆಗೆ ಕಾಯಿರಿ’ ಎಂದು ಡಿ.ಕೆ. ಶಿವಕುಮಾರ್‌ ಅವರ ಆಪ್ತ, ಶಾಸಕ ಇಕ್ಬಾಲ್ ಹುಸೇನ್‌ ಹೇಳಿದರು.

‘ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ’ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಶಾಸಕರಿಗೆ ವರಿಷ್ಠರ ಬಗ್ಗೆ ನಂಬಿಕೆ ಇಡಬೇಕು. ವರಿಷ್ಠರ ತೀರ್ಮಾನಕ್ಕೆ ಕಾಯಬೇಕು’ ಎಂದರು.

‘ನಾನು ಜನವರಿಗಾಗಿ ಕಾಯುತ್ತಿದ್ದೇನೆ. ಹಿಟ್‌ ಆ್ಯಂಡ್ ರನ್ ಮಾಡುವುದಿಲ್ಲ. ಜನವರಿ 2ರಂದು ಬಂದು ಮಾತನಾಡುವೆ’ ಎಂದು ಶಿವಕುಮಾರ್‌ ಅವರ ಮತ್ತೊಬ್ಬ ಆಪ್ತ ಶಾಸಕ ಬಸವರಾಜ ಶಿವಗಂಗಾ ಹೇಳಿದರು.

ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರು, ‘ಯತೀಂದ್ರ ಏನು ಹೇಳಿದ್ದಾರೆ ಎಂದು ಗೊತ್ತಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೆ ಅವರ ಸಂಪುಟದಲ್ಲಿ ಸಚಿವನಾಗುವುದಿಲ್ಲ ಎಂದು ಕೆ.ಎನ್‌. ರಾಜಣ್ಣ ಹೇಳಿದ್ಧಾರೆ. ಹಾಗಾದರೆ ಮುಖ್ಯಮಂತ್ರಿ ಆಗುತ್ತಾರೆ ಎಂದರ್ಥವಲ್ಲವೇ?’ ಎಂದರು.

ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗುವುದು ಯತೀಂದ್ರ ಕೈಯಲ್ಲಿಲ್ಲ. ಶಾಸಕಾಂಗ ಪಕ್ಷದ ತೀರ್ಮಾನವೇ ಬೇರೆ, ಹೈಕಮಾಂಡ್ ತೀರ್ಮಾನವೇ ಬೇರೆ
ಬಾಲಕೃಷ್ಣ, ಶಾಸಕ, ಮಾಗಡಿ

‘ನಿಮ್ಮ ತಟ್ಟೆಯಲ್ಲಿ ಸತ್ತುಬಿದ್ದ ಕತ್ತೆ ತೆಗೆಯಿರಿ’

‘ಬಿಜೆಪಿಯವರ ತಟ್ಟೆಯಲ್ಲಿ ಕತ್ತೆ ಸತ್ತುಬಿದ್ದಿದೆ. ಅದನ್ನು ಸ್ವಚ್ಛ ಮಾಡುವುದು ಬಿಟ್ಟು ಮತ್ತೊಬ್ಬರ ತಟ್ಟೆಯಲ್ಲಿ‌ ನೊಣ ಹುಡುಕುತ್ತಿದ್ದಾರೆ’ ಎಂದು ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದರು.

‘ಕುರ್ಚಿ ಕದನ’ ವಿಷಯದ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಬೇರೆ ಏನೂ ಇಲ್ಲವೆಂದು ಬಿಜೆಪಿಯವರು ಉತ್ತರ ಕರ್ನಾಟಕ ವಿಷಯ, ಉಪಾಹಾರದ ವಿಷಯ ತೆಗೆಯುತ್ತಿದ್ದಾರೆ‌. ನಮಗೆ ಏನು ಇಷ್ಟವೋ ಅದನ್ನು ನಾವು ತಿನ್ನುತ್ತೇವೆ. ಆಡಿಕೊಳ್ಳಲು ಇವರ್‍ಯಾರು’ ಎಂದೂ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.