ಸವದತ್ತಿ ತಾಲ್ಲೂಕಿನ ನವಿಲುತೀರ್ಥ (ಇಂದಿರಾ ಅಣೆಕಟ್ಟೆ) ಜಯಾಶಯ
ಪ್ರಜಾವಾಣಿ ಚಿತ್ರ
ಸವದತ್ತಿ (ಬೆಳಗಾವಿ ಜಿಲ್ಲೆ): ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾದ ಪರಿಣಾಮ, ಇಲ್ಲಿನ ನವಿಲುತೀರ್ಥ ಜಲಾಶಯ (ಇಂದಿರಾ ಅಣೆಕಟ್ಟೆ) ಅವಧಿಗೂ ಮುನ್ನ ಭರ್ತಿಯಾಗುವ ಹಂತದಲ್ಲಿದೆ. ಗರಿಷ್ಠ 2079.50 ಅಡಿ ಸಾಮರ್ಥ್ಯವಿದ್ದು, ಇನ್ನು 4.7 ಅಡಿ ಮಾತ್ರ ಬಾಕಿ ಇದೆ.
ಬುಧವಾರ ಬೆಳಿಗ್ಗೆ 2074.80 ಅಡಿ ನೀರು ಸಂಗ್ರಹವಾಗಿದ್ದು, ಒಳಹರಿವು 7,286 ಕ್ಯೂಸೆಕ್ ಕಂಡಿದೆ. ಕಳೆದೆರಡು ವಾರಗಳಿಂದ 2,894 ಕ್ಯೂಸೆಕ್ ನೀರನ್ನು ಮುಂಜಾಗೃತಾ ಕ್ರಮವಾಗಿ ನದಿಗೆ ಹರಿಸಲಾಗುತ್ತಿದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಜಲಾಶಯ ಭರ್ತಿಯಾಗುತ್ತಿತ್ತು ಎಂದು ಜಲಾಶಯದ ಎಂಜಿನಿಯರ್‌ಗಳು ತಿಳಿಸಿದ್ದಾರೆ.
1974ರಲ್ಲಿ ನಿರ್ಮಿಸಿದ ಈ ಜಲಾಶಯ 11ನೇ ಬಾರಿಗೆ ಭರ್ತಿಯಾಗುತ್ತಿದೆ. ವಾಡಿಕೆಯಂತೆ ಆಗಸ್ಟ್ 15ರ ನಂತರ ಅಣೆಕಟ್ಟು ಭರ್ತಿಯಾಗಬೇಕಿತ್ತು. ಈ ಬಾರಿ 15 ದಿನ ಮೊದಲೇ ಕಾಲ ಕೂಡಿಬಂದಿದೆ.
ತಾಲ್ಲೂಕಿನ ಮುನವಳ್ಳಿ, ಶಿಂಧೋಗಿ, ಹಿರೂರು, ಹಳ್ಳೂರ, ಬಂಡಾರಹಳ್ಳಿ, ತೆರೆದಕೊಪ್ಪ, ಅರಟಗಲ್ಲ, ಬಸರಗಿ, ಕಿಟದಾಳ, ಜಕಬಾಳ, ತೆಗ್ಗೀಹಾಳ ಹಾಗೂ ರಾಮದುರ್ಗ ತಾಲ್ಲೂಕಿನ ನದಿ ತೀರದ ಗ್ರಾಮಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಅವಧಿಗೂ ಮುನ್ನ ಅಣೆಕಟ್ಟೆ ಭರ್ತಿಯಾಗುವ ಕಾರಣ ತಾಲ್ಲೂಕು ಆಡಳಿತ ಮುಂಜಾಗೃತಾ ಕ್ರಮಕ್ಕೆ ಮುಂದಾಗಿದೆ.
ಹದಗೆಟ್ಟ ಕಾಲುವೆಗಳು:
ಸುಮಾರು 2 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಈ ಅಣೆಕಟ್ಟೆಗೆ 150 ಕಿ.ಮೀ ಉದ್ದದ ಎಡದಂಡೆ ಹಾಗೂ 142 ಕಿ.ಮೀ ಉದ್ದದ ಬಲದಂಡೆ ಕಾಲುವೆಗಳಿವೆ. ಬಹುತೇಕ ಕಾಲುವೆಗಳು ಹದಗೆಟ್ಟಿವೆ. ಜಲಾಶಯ ಭರ್ತಿಯಾದರೂ ಕೊನೆಯ ಹಂತದ ರೈತರಿಗೆ ನೀರು ಸಿಗುತ್ತಿಲ್ಲ. ಕಾಲುವೆಗಳಿಗೆ ಹೆಚ್ಚಿನ ನೀರು ಹರಿಸಿದರೂ ಹರಿದುಹೋಗಲು ಸಾಧ್ಯವಾಗದ ಸ್ಥಿತಿ ಇದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಬೇಸಿಗೆಯಲ್ಲಿ ಹೂಳೆತ್ತದಿರುವುದೇ ಇದಕ್ಕೆ ಕಾರಣ ಎಂಬುದು ರೈತರ ಆರೋಪ.
ಮಲಪ್ರಭಾ ನದಿ ನೀರು ನಿರ್ವಹಣಾ ಸಲಹಾ ಸಮಿತಿ ಅಧ್ಯಕ್ಷರೂ ಆದ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಈಚೆಗೆ ನಡೆಸಿದ ಸಮಿತಿ ಸಭೆಯಲ್ಲೂ ಈ ದೂರು ಕೇಳಿಬಂದಿತ್ತು.ಸುರೇಶ ಸಂಪಗಾಂವಿ ರೈತ ಸವದತ್ತಿ
ಉತ್ತಮ ಮಳೆಯಾಗುತ್ತಿದ್ದು ಮಲಪ್ರಭೆ ಭರ್ತಿ ಆಗುವುದನ್ನೇ ಕಾಯುತ್ತಿದ್ದೇವೆ. ಇದರಿಂದ ಮುಂದಿನ ವರ್ಷ ಕೂಡ ರೈತರಿಗೆ ನೀರಿನ ಸಮಸ್ಯೆ ಆಗುವುದಿಲ್ಲ– ವಿಶ್ವಾಸ ವೈದ್ಯ, ಶಾಸಕ ಸವದತ್ತಿ ಯಲ್ಲಮ್ಮ ಕ್ಷೇತ್ರ
ಅಣೆಕಟ್ಟೆ ಭರ್ತಿಯಾಗಿ ಕೆಲವೇ ದಿನ ಬಾಕಿ ಇವೆ. ನದಿ ತೀರದ ಗ್ರಾಮಗಳಲ್ಲಿ ಪರಿಶೀಲಿಸಲಾಗಿದೆ. ಜನರಿಗೆ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ– ಎಂ.ಎನ್. ಹೆಗ್ಗಣ್ಣವರ, ತಹಶೀಲ್ದಾರ್ ಸವದತ್ತಿ
ಬಾಳೆಕುಂದ್ರಿ ಕಾಲುವೆಗೆ 800 ಕ್ಯೂಸೆಕ್ ಬಲದಂಡೆ ಕಾಲುವೆಗೆ 200 ಕ್ಯೂಸೆಕ್ ನರಗುಂದ ಶಾಖಾ ಕಾಲುವೆಗೆ 200 ಕ್ಯೂಸೆಕ್ ಕುಡಿಯಲು 194 ಕ್ಯೂಸೆಕ್ ನೀರು ಬಿಡಲಾಗುತ್ತಿದೆ– ವಿವೇಕ ಮುದಿಗೌಡ್ರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರೇಣುಕಾಸಾಗರ ಜಲಾಶಯ
ಹಿಟ್ಟಣಗಿ ಸುತಗಟ್ಟಿ ಅಸುಂಡಿ ಏಣಗಿ ಮುಗಳಿ ಗೋವನಕೊಪ್ಪ ಗ್ರಾಮಗಳ ಜಮೀನುಗಳಿಗೆ ಕಾಲುವೆಗಳಿದ್ದರೂ ನೀರು ಹರಿಯುವುದಿಲ್ಲ. ಈಗ ಹರಿಸುತ್ತಿರುವ ನೀರು ವ್ಯರ್ಥ.– ಸುರೇಶ ಸಂಪಗಾಂವಿ, ರೈತ, ಸವದತ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.