ADVERTISEMENT

ಬೆಳಗಾವಿ: ಇರುವ ಬೆಳೆಗೆ ಹಾನಿ, ಹಿಂಗಾರಿಗೆ ಪೂರಕ!

ಸತತ ಮಳೆಯಿಂದಾಗಿ ಸೋಯಾಬೀನ್, ಕಬ್ಬು, ಜೋಳಕ್ಕೆ ತೊಂದರೆ

ಎಂ.ಮಹೇಶ
Published 13 ಅಕ್ಟೋಬರ್ 2020, 19:30 IST
Last Updated 13 ಅಕ್ಟೋಬರ್ 2020, 19:30 IST
ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿಯ ರೈತ ಲಗಮಣ್ಣ ರಾಮಗೋನಟ್ಟಿ ಅವರ ಹೊಲದಲ್ಲಿ ಬೆಳೆದ ಕಬ್ಬು ಭಾರಿ ಮಳೆಯಿಂದ ನೆಲಕಚ್ಚಿದೆಪ್ರಜಾವಾಣಿ ಚಿತ್ರ
ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿಯ ರೈತ ಲಗಮಣ್ಣ ರಾಮಗೋನಟ್ಟಿ ಅವರ ಹೊಲದಲ್ಲಿ ಬೆಳೆದ ಕಬ್ಬು ಭಾರಿ ಮಳೆಯಿಂದ ನೆಲಕಚ್ಚಿದೆಪ್ರಜಾವಾಣಿ ಚಿತ್ರ   

ಬೆಳಗಾವಿ: ಈ ತಿಂಗಳಲ್ಲಿ ಜಿಲ್ಲೆಯ ಹಲವೆಡೆ ಬಿಟ್ಟೂ ಬಿಟ್ಟು ಮಳೆ ಸುರಿಯುತ್ತಿರುವುದು ಕಟಾವಿಗೆ ಬಂದಿರುವ ಕೆಲವು ಬೆಳೆಗಳಿಗೆ ತೀವ್ರ ಹಾನಿ ಉಂಟು ಮಾಡಿದ್ದರೆ, ಹಿಂಗಾರು ಹಂಗಾಮಿಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟಿದೆ.

ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಸೋಯಾಬೀನ್, ಹೆಸರು ಕಾಳು ಕಟಾವಿನ ಹಂತಕ್ಕೆ ಬಂದಿತ್ತು. ಆಗಾಗ ಮಳೆ ಬೀಳುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಯಲ್ಲಿ ರೈತರಿದ್ದಾರೆ. ಆಳೆತ್ತರಕ್ಕೆ ಬೆಳೆದಿದ್ದ ಕಬ್ಬು ಸಂಪೂರ್ಣ ನೆಲಕಚ್ಚಿದೆ. ಅಲ್ಲಲ್ಲಿ ಮೆಕ್ಕೆಜೋಳ, ತೊಗರಿ ಬೆಳೆಗಳು ಜಲಾವೃತವಾಗಿರುವುದು, ರೈತರನ್ನು ಚಿಂತೆಗೆ ನೂಕಿದೆ. ಮಳೆಯು ಮುಂದುವರಿಯುವ ಸಾಧ್ಯತೆಯೂ ಇರುವುದರಿಂದ ಅವರು ಕಂಗಾಲಾಗಿದ್ದಾರೆ.

ಆಗಸ್ಟ್‌, ಸೆಪ್ಟೆಂಬರ್‌ ಆರಂಭದಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 96ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾನಿಗೀಡಾಗಿವೆ ಎಂದು ಕೃಷಿ ಇಲಾಖೆ ಅಂದಾಜಿಸಿತ್ತು. ಮಳೆ ಮುಂದುವರಿದಿದ್ದರಿಂದ ಹೆಚ್ಚುವರಿಯಾಗಿ 33ಸಾವಿರ ಹೆಕ್ಟೇರ್‌ ಬೆಳೆಗಳು ಹಾನಿಗೆ ಒಳಗಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಅಕ್ಟೋಬರ್‌ನಲ್ಲಿ ಕೆಲವು ದಿನಗಳಿಂದ ಆಗಾಗ ವರ್ಷಧಾರೆ ಆಗುತ್ತಿರುವುದರಿಂದ ಮತ್ತಷ್ಟು ಕಡೆಗಳಲ್ಲಿ ಬೆಳೆಗಳು ನೀರಿನಲ್ಲಿ ನಿಂತಿವೆ.

ADVERTISEMENT

ನೆಲಕ್ಕುರುಳಿದೆ: ಕಡಬಿ, ಶಿವಾಪೂರ, ಮಾಡಮಗೇರಿ, ಕೋಟೂರ, ಯರಗಣವಿಯಲ್ಲಿ ಹತ್ತಿ, ಗೋವಿನಜೋಳ, ತೊಗರಿ ಮೊದಲಾದ ಬೆಳೆಗಳು ಜಲಾವೃತವಾಗಿವೆ. ಹಲವು ಕಡೆಗಳಲ್ಲಿ ಒಡ್ಡುಗಳೇ ಕೊಚ್ಚಿ ಹೋಗಿವೆ. ಇದನ್ನು ದುರಸ್ತಿಪಡಿಸಿಕೊಳ್ಳಲು ಹರಸಾಹಸ ಪಡಬೇಕಾದ ಸಂಕಷ್ಟದ ಸ್ಥಿತಿ ರೈತರದಾಗಿದೆ. ಮೆಕ್ಕೆಜೋಳದ ತೆನೆಗಳು ನೀರಲ್ಲಿ ಬಿದ್ದು ಮೊಳಕೆ ಬರುತ್ತಿವೆ. ಜಮೀನುಗಳಲ್ಲಿ ಸಂಗ್ರಹವಾಗಿರುವ ನೀರನ್ನು ಹೊರ ಹಾಕುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.

‘ಅಥಣಿ ತಾಲ್ಲೂಕಿನ ಐಗಳಿ ಸುತ್ತಮುತ್ತ ರೈತರು ದ್ರಾಕ್ಷಿ ಹಾಕಿದ್ದಾರೆ. ಇತ್ತೀಚೆಗೆ ದ್ರಾಕ್ಷಿ ಕಡ್ಡಿ ಕಟಾವು ಪ್ರಾರಂಭಿಸಿದ್ದಾರೆ. ನಿತ್ಯ ಮಳೆಯಿಂದಾಗಿ ಹಾಗೂಹವಾಮಾನ ವಿಪರೀತ್ಯದಿಂದಾಗಿ ದ್ರಾಕ್ಷಿ ಬೆಳೆಯಲ್ಲಿ ರೋಗಗಳು ಕಾಣಿಸಿಕೊಂಡಿವೆ. ಪರಿಣಾಮ ಈ ವರ್ಷ ಆದಾಯ ಕಡಿಮೆಯಾಗಿದೆ’ ಎಂದು ಬೆಳೆಗಾರ ನೂರಅಹ್ಮದ ಡೊಂಗರಗಾಂವ ತಿಳಿಸಿದರು.

‘ತೆಲಸಂಗ ಭಾಗದಲ್ಲಿ ಕಟಾವಿಗೆ ಬಂದಿದ್ದ ಕಬ್ಬು ನೆಲ ಕಚ್ಚಿರುವುದರಿಂದ ಹಾನಿ ಉಂಟಾಗಿದೆ. ಹಲವು ದಿನಗಳಿಂದ ತಂಪಾದ ಹವಾಮಾನದಿಂದಾಗಿ ತೊಗರಿ ಬೆಳೆಗೂ ರೋಗ ಕಾಣಿಸಿಕೊಂಡಿದೆಯಲ್ಲದೇ, ನೀರು ನಿಂತು ತೊಗರಿ ಗಿಡಗಳು ಜಲಾವೃತವಾಗಿವೆ. ಇದರಿಂದ ತೊಂದರೆಗೆ ಸಿಲುಕಿದ್ದೇವೆ. ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿದ ರೈತರ ಕೈ ಹಿಡಿಯಬೇಕು’ ಎಂದು ಅಲ್ಲಿನ ರೈತರಾದ ಸಿ.ಸಿ. ಪಾಟೀಲ, ರಾಮು ನಿಡೋಣಿ, ಸಿದ್ದಪ್ಪ ನಿಡೋಣಿ ಒತ್ತಾಯಿಸಿದ್ದಾರೆ.

**
ಮಾರಕವೂ, ಪೂರಕವೂ...
‘ಕೆಲವು ದಿನಗಳಿಂದ ಬಿಟ್ಟೂ ಬಿಟ್ಟು ಮಳೆಯಾಗುತ್ತಿರುವುದು ಮಾರಕವೂ ಆಗಿದೆ. ಪೂರಕವೂ ಆಗಿದೆ. ಕಟಾವಿನ ಹಂತಕ್ಕೆ ಬಂದಿದ್ದ ಸೋಯಾಬೀನ್‌ಗೆ ಹೆಚ್ಚು ಹೊಡೆತ ಬಿದ್ದಿದೆ. ಅಲ್ಲಲ್ಲಿ ಹೆಸರು, ಗೋವಿನಜೋಳ ಹಾಗೂ ಕಬ್ಬಿಗೂ ಹಾನಿಯಾಗಿದೆ. ಬೆಳೆ ಹಾಳಾಗಿರುವ ಕುರಿತು ರೈತರಿಂದಲೂ ಮಾಹಿತಿ ಬರುತ್ತಿದೆ. ಹಿಂಗಾರು ಹಂಗಾಮಿನ ಬಿತ್ತನೆಗೆ ಇದು ಸಕಾಲವಾಗಿದೆ. ಹೆಚ್ಚು ಮಳೆಯಾಗಿರುವ ಪ್ರದೇಶದಲ್ಲಿ ಕೆಲವು ದಿನಗಳ ನಂತರ ಬಿತ್ತನೆ ಮಾಡಿದರೆ ಚಳಿಗಾಲದಲ್ಲಿ ತಂಪಾದ ವಾತಾವರಣ ಅವುಗಳಿಗೆ ಪೂರಕವಾಗಲಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

***

₹ 30ಸಾವಿರ ಸಾಲ ಪಡೆದು ಹೊಲ ಹದಗೊಳಿಸಿ ಗೋವಿನ ಜೋಳ ಹಾಗೂ ಹತ್ತಿ ಬಿತ್ತನೆ ಮಾಡಿದ್ದೆ. ಧಾರಾಕಾರ ಮಳೆಯಿಂದ ಬೆಳೆ ಹಾನಿಯಾಗಿದೆ. ಒಡ್ಡುಗಳು ಒಡೆದು ಹೋಗಿವೆ. ಸರ್ಕಾರ ಈ ನಷ್ಟ ತುಂಬಿಕೊಡಬೇಕು.
-ಶಿವಪ್ಪ ಶಿದ್ದನ್ನವರ, ರೈತ, ಯರಗಣವಿ

***
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 3.50 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಕಡಲೆ, ಜೋಳ, ಗೋಧಿ ಬಿತ್ತನೆ ಬೀಜಗಳ ವಿತರಣೆ ಆರಂಭಿಸಲಾಗಿದೆ.
-ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

***

ಹಿಂಗಾರಿಗೆ ಬಿತ್ತನೆ ಬೀಜ ವಿತರಣೆ ಗುರಿ (ಕ್ವಿಂಟಲ್‌ಗಳಲ್ಲಿ)

21,000: ಕಡಲೆ

4,800: ಜೋಳ

1,500: ಗೋಧಿ

500: ಸೂರ್ಯಕಾಂತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.