ADVERTISEMENT

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಗ್ರಾ.ಪಂ ಅಧ್ಯಕ್ಷರ ಮೊಬೈಲ್‌ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 11:24 IST
Last Updated 30 ಏಪ್ರಿಲ್ 2022, 11:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ಮುಂದುವರಿಸಿರುವ ಉಡುಪಿ ಪೊಲೀಸರು, ಶುಕ್ರವಾರ ಇಲ್ಲಿಗೆ ಮತ್ತೆ ಭೇಟಿ ನೀಡಿದ್ದರು.

ಇನ್‌ಸ್ಪೆಕ್ಟರ್‌ ಶರಣಗೌಡ ಪಾಟೀಲ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿದ್ದು, ಹಿಂಡಲಗಾ ಗ್ರಾಮ ಪಂಚಾಯಿತಿಅಧ್ಯಕ್ಷ ನಾಗೇಶ ಮನ್ನೋಳಕರ ಅವರ ಮೊಬೈಲ್ ಫೋನ್‌ ಅನ್ನು ಪರಿಶೀಲನೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂತೋಷ್ ಅವರ ಮನೆಯನ್ನು ನಾಗೇಶ ಮತ್ತು ಗ್ರಾಮ ಪಂಚಾಯಿತಿಸದಸ್ಯ ಎನ್.ಎಸ್. ಪಾಟೀಲ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಜಿಪಿಎ ಮಾಡಿಸಿಕೊಂಡಿದ್ದು ಏಕೆ, ಅವರಿಗೆ ಎಷ್ಟು ಹಣ ನೀಡಿದ್ದಿರಿ. 108 ಕಾಮಗಾರಿ ನಡೆಸುವಂತೆ ಹೇಳಿದ್ದು ಯಾರು ಎಂಬಿತ್ಯಾದಿ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ADVERTISEMENT

ಹಿಂಡಲಗಾ ಗ್ರಾ‌.ಪಂನ ಎಲ್ಲ 35 ಸದಸ್ಯರಿಗೂ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದ ಪೊಲೀಸರು, ಅವರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ. ನಿಮ್ಮ ವಾರ್ಡ್‌ನಲ್ಲಿ ಸಂತೋಷ್‌ ಏನೇನು ಕಾಮಗಾರಿ ಮಾಡಿದ್ದರು, ಎಷ್ಟು ವೆಚ್ಚ ಆಗಿರಬಹುದು, ಯಾವ ಯೋಜನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು, ಉಪ ಗುತ್ತಿಗೆದಾರರಿಗೆ ಕೊಟ್ಟಿದ್ದರೋ ಅಥವಾ ಅವರೇ ನಿರ್ವಹಿಸಿದ್ದರೋ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದಸ್ಯೆಯರ ವಿಚಾರಣೆಗೆ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಬಳಸಿದರು. ಸಂತೋಷ್‌ ಅವರು ಉಪ ಗುತ್ತಿಗೆ ನೀಡಿದ್ದರು ಎನ್ನಲಾದ 12 ಮಂದಿಯಿಂದಲೂ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮಾಡಿದ ವೆಚ್ಚ ಹಾಗೂ ಸಾಮಗ್ರಿ ಖರೀದಿಸಿದ್ದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.