ADVERTISEMENT

ಖಾನಾಪುರ: ‘ಕಾಡಿನ ಕೂಸು’ಗಳಿಗೂ ತಪ್ಪದ ನೀರಿನ ಬವಣೆ

ಖಾನಾಪುರ ತಾಲ್ಲೂಕಿನಲ್ಲಿ ಒನಗಿದ ಜಲಮೂಲಗಳು, ಪಟ್ಟಣ– ಹಳ್ಳಿಗಳಿಗೆ ಬೋರ್‌ವೆಲ್ಲೇ ಗತಿ

ಪ್ರಸನ್ನ ಕುಲಕರ್ಣಿ
Published 15 ಮಾರ್ಚ್ 2024, 4:40 IST
Last Updated 15 ಮಾರ್ಚ್ 2024, 4:40 IST
ಖಾನಾಪುರ ತಾಲ್ಲೂಕು ಮಳವ ಗ್ರಾಮದಲ್ಲಿ ಕೊಳವೆಬಾವಿಯಿಂದ ಪೈಲ್‌ಲೈನ್ ಮೂಲಕ ಹರಿಸಿದ ನೀರನ್ನು ಸಂಗ್ರಹಿಸಲು ಚಿಣ್ಣರು ಹರಸಾಹಸ ಪಟ್ಟಿದ್ದು ಹೀಗೆ – ಪ್ರಜಾವಾಣಿ ಚಿತ್ರ: ಪ್ರಸನ್ನ ಕುಲಕರ್ಣಿ
ಖಾನಾಪುರ ತಾಲ್ಲೂಕು ಮಳವ ಗ್ರಾಮದಲ್ಲಿ ಕೊಳವೆಬಾವಿಯಿಂದ ಪೈಲ್‌ಲೈನ್ ಮೂಲಕ ಹರಿಸಿದ ನೀರನ್ನು ಸಂಗ್ರಹಿಸಲು ಚಿಣ್ಣರು ಹರಸಾಹಸ ಪಟ್ಟಿದ್ದು ಹೀಗೆ – ಪ್ರಜಾವಾಣಿ ಚಿತ್ರ: ಪ್ರಸನ್ನ ಕುಲಕರ್ಣಿ   

ಖಾನಾಪುರ: ಈಚಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಕಾರಣ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಪ್ರಮುಖ ಜಲಮೂಲಗಳಾದ ಮಲಪ್ರಭಾ, ಪಾಂಡರಿ ನದಿಗಳು, ಕೆರೆಗಳು ಮತ್ತು ಹಳ್ಳಕೊಳ್ಳಗಳು ಸಂಪೂರ್ಣ ಬತ್ತಿವೆ. ಇದು ಸದ್ಯದ ಬರದ ಪರಿಸ್ಥಿತಿಗೆ ಜ್ವಲಂತ ಸಾಕ್ಷಿ. ತಾಲ್ಲೂಕಿನ ಪ್ರಮುಖ ಜಲಮೂಲಗಳು ಬತ್ತಿರುವ ಕಾರಣ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಅವಲಂಬಿಸಬೇಕಾಗಿದೆ.

ದಟ್ಟ ಅರಣ್ಯವನ್ನು ಸುತ್ತುವರಿದ ತಾಲ್ಲೂಕಿನ ಪಶ್ಚಿಮ ಭಾಗದ ಕರ್ನಾಟಕ– ಗೋವಾ ಗಡಿಯಲ್ಲಿರುವ 20ಕ್ಕೂ ಹೆಚ್ಚು ಗ್ರಾಮಗಳು ಈ ಸಲದ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಿಸುತ್ತಿವೆ. ಕಣಕುಂಬಿ, ಅಮಟೆ, ಗೋಲ್ಯಾಳಿ, ಜಾಂಬೋಟಿ, ಬೈಲೂರು, ನೀಲಾವಡೆ ಮತ್ತು ಪಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮತ್ತು ಲಿಂಗನಮಠ, ಬಾಳಗುಂದ, ಸುರಾಪುರ, ಲಕ್ಕೇಬೈಲ, ಲೋಕೊಳಿ, ದೇವಲತ್ತಿ, ಕಾರಲಗಾ, ಗೋದಗೇರಿ, ಪ್ರಭುನಗರ ಮತ್ತು ಭುರಣಕಿ ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

ADVERTISEMENT

ಗ್ರಾಮ ಪಂಚಾಯಿತಿ ವತಿಯಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಅಕ್ಕ–ಪಕ್ಕದ ಖಾಸಗಿ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲಾಗಿದೆ. ಇದಕ್ಕಾಗಿ ಈಗಾಗಲೇ ಖಾಸಗಿ ಕೊಳವೆಬಾವಿಗಳ ಮಾಲೀಕರಿಂದ ಬಾಡಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಖಾಸಗಿ ಕೊಳವೆಬಾವಿಗಳ ನೀರಿನ ಪ‍್ರಮಾಣ ಮತ್ತು ಬೇಡಿಕೆ ಆಧಾರದ ಮೇಲೆ ಸರ್ಕಾರ ನಿಗದಿಪಡಿಸಿದ ಬಾಡಿಗೆ ನೀಡುವ ಒಪ್ಪಂದ ಮೇರೆಗೆ ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಈಚೆಗೆ ನೀರಿನ ಸಮಸ್ಯೆ ಉದ್ಭವಿಸಿದ್ದ ಕರೀಕಟ್ಟಿ, ಪೂರ, ಗುಂಡೊಳ್ಳಿ, ಕುಪ್ಪಟಗಿರಿ, ಹಲಕರ್ಣಿ, ವಡಗಾಂವ, ಚುಂಚವಾಡ, ಚಿಕಲೆ ಗ್ರಾಮಗಳಲ್ಲಿ ಮತ್ತು ಖಾನಾಪುರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪೌರಾಡಳಿತ ಇಲಾಖೆಯ ವತಿಯಿಂದ ಕೊಳವೆಬಾವಿಗಳನ್ನು ಕೊರೆಸಲಾಗಿದೆ.

ಲೋಂಡಾ, ಕಣಕುಂಬಿ ಹಾಗೂ ಭೀಮಗಡ ಅರಣ್ಯ ವಲಯದ 65 ಗ್ರಾಮಗಳಲ್ಲಿ ವಾಸಿಸುವ ಜನರು ಅರಣ್ಯದಿಂದ ನೈಸರ್ಗಿಕವಾಗಿ ಹರಿದುಬರುವ ನೀರನ್ನೇ ಬಳಸುತ್ತಿದ್ದಾರೆ. ಖಾನಾಪುರ ಪಟ್ಟಣ ಸೇರಿದಂತೆ ತಾಲ್ಲೂಕಿನ ಇನ್ನುಳಿದ 180 ಗ್ರಾಮಗಳೂ ಸಂಪೂರ್ಣವಾಗಿ ಕೊಳವೆ ಬಾವಿಗಳನ್ನು ಅವಲಂಬಿಸಿವೆ. ಇಲ್ಲಿ ಮಹಾದಾಯಿ, ಪಾಂಡರಿ, ಮಾರ್ಕಂಡೇಯ, ಮಲಪ್ರಭಾ ನದಿಗಳು ಸೇರಿದಂತೆ ಕಳಸಾ, ಭಂಡೂರಿ, ಪಣಸೂರಿ, ಕೋಟ್ನಿ, ತಟ್ಟಿ, ಮಂಗೇತ್ರಿ, ಬೈಲ್, ಕುಂಬಾರ ಮತ್ತಿತರ ಹಳ್ಳಗಳು ಮಳೆಗಾಲದಲ್ಲಿ ಪ್ರವಾಹೋಪಾದಿಯಲ್ಲಿ ಹರಿಯುತ್ತವೆ. ಆದರೆ ಬೇಸಿಗೆಯಲ್ಲಿ ಖಾಲಿಯಾಗುತ್ತವೆ.

ಮಹದಾಯಿ ನದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಇದುವರೆಗೂ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳ ಅನಿಸಿಕೆ.

ತಾಲ್ಲೂಕಿನಲ್ಲಿ ಒಟ್ಟು 221 ಹೆಚ್ಚು ಕೆರೆ, 39 ಚೆಕ್ ಡ್ಯಾಮ್‌ ಇವೆ. ಆದರೆ ಬಹುತೇಕ ಕೆರೆಗಳು ಮತ್ತು ಚೆಕ್ ಡ್ಯಾಮ್‌ಗಳು ಈ ಬೇಸಿಗೆಯಲ್ಲಿ ಬರದ ಕಾರಣ ನೀರಿಲ್ಲದೇ ಭಣಗುಡುತ್ತಿವೆ. ತಾಲ್ಲೂಕಿನಾದ್ಯಂತ ಇರುವ 193 ಶುದ್ಧ ಕುಡಿಯುವ ನೀರು ಘಟಕಗಳ ಪೈಕಿ ಶೇ 50ರಷ್ಟು ಘಟಕಗಳು ಮಾತ್ರ ಚಾಲ್ತಿಯಲ್ಲಿವೆ. 44 ಗ್ರಾಮಗಳಲ್ಲಿ ಪ್ರಸ್ತುತ ಕಿರು ನೀರು ಸರಬರಾಜು ಯೋಜನೆಗಳು ಚಾಲನೆಯಲ್ಲಿವೆ ಎಂದು ತಹಶೀಲ್ದಾರ್ ಕಚೇರಿಯ ಮೂಲಗಳು ತಿಳಿಸಿವೆ.

ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳನ್ನು ನಡೆಸಲಾಗಿದೆ. ಹಳ್ಳಿಗಳಿಗೆ ಅಗತ್ಯ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
-ಪ್ರಕಾಶ ಗಾಯಕವಾಡ, ತಹಶೀಲ್ದಾರ್
ಬರ ಪರಿಹಾರ ಕಾಮಗಾರಿಗೆ ಅನುದಾನ ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಸಲಾಗಿದೆ. ಅನುದಾನ ಬಂದರೆ ನೀರಿನ ಸಮಸ್ಯೆ ಇದ್ದ ಕಡೆಗಳಲ್ಲಿ ಕೊಳವೆಬಾವಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗುವುದು.
-ವಿಠ್ಠಲ ಹಲಗೇಕರ, ಶಾಸಕ
250 ಗ್ರಾಮಗಳ ಪೈಕಿ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಬೋರ್‌ವೆಲ್‌ ನೀರನ್ನೇ ಬಳಸಲಾಗುತ್ತಿದೆ. ಅಂತರ್ಜಲ ಹೆಚ್ಚಿಸುವುದೇ ಶಾಶ್ವತ ಪರಿಹಾರವಾಗಿದೆ.
-ವಿಠ್ಠಲ ಹಿಂಡಲಕರ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.