ADVERTISEMENT

ರೈಲು ವಿದ್ಯುದ್ದೀಕರಣ: ಶೇ 100 ಸಾಧನೆ

ಬೆಂಗಳೂರು ರೈಲ್ವೆ ವಿಭಾಗ: ಉಗಿಬಂಡಿ, ಡೀಸೆಲ್‌ ಬಂಡಿಗಳು ಈಗ ವಿದ್ಯುತ್‌ ಬಂಡಿಗಳಾಗಿ ಪರಿವರ್ತನೆ

ಬಾಲಕೃಷ್ಣ ಪಿ.ಎಚ್‌
Published 13 ಮಾರ್ಚ್ 2025, 23:30 IST
Last Updated 13 ಮಾರ್ಚ್ 2025, 23:30 IST
<div class="paragraphs"><p>ವಿದ್ಯುತ್‌ ಆಧಾರದಲ್ಲಿ ಸಂಚರಿಸಿದ ರೈಲಿನ ನೂರು ವರ್ಷದ ಸಂಭ್ರಮದಲ್ಲಿ ಕೆಎಸ್‌ಆರ್‌ ಬೆಂಗಳೂರು –ಮೈಸೂರು ರಾಜ್ಯ ರಾಣಿ ಎಕ್ಸ್‌ಪ್ರೆಸ್‌ ರೈಲನ್ನು ಮಹಿಳೆಯರೇ&nbsp;ಇತ್ತೀಚೆಗೆ ನಿರ್ವಹಿಸಿದ್ದರು. </p></div>

ವಿದ್ಯುತ್‌ ಆಧಾರದಲ್ಲಿ ಸಂಚರಿಸಿದ ರೈಲಿನ ನೂರು ವರ್ಷದ ಸಂಭ್ರಮದಲ್ಲಿ ಕೆಎಸ್‌ಆರ್‌ ಬೆಂಗಳೂರು –ಮೈಸೂರು ರಾಜ್ಯ ರಾಣಿ ಎಕ್ಸ್‌ಪ್ರೆಸ್‌ ರೈಲನ್ನು ಮಹಿಳೆಯರೇ ಇತ್ತೀಚೆಗೆ ನಿರ್ವಹಿಸಿದ್ದರು.

   

ಸಂಗ್ರಹ ಚಿತ್ರ

ಬೆಂಗಳೂರು: ದೇಶದಲ್ಲಿ ವಿದ್ಯುಚ್ಛಕ್ತಿ ಬಳಸಿ ಮೊದಲ ರೈಲು ಸಂಚರಿಸಿ ನೂರು ವರ್ಷ ತುಂಬಿದ ಸಂಭ್ರಮದ ಹೊತ್ತಿಗೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ತನ್ನ ಎಲ್ಲ ರೈಲುಗಳು ವಿದ್ಯುದ್ದೀಕರಣಗೊಂಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ADVERTISEMENT

ಆರಂಭದಲ್ಲಿ ಇದ್ದಿಲು, ಕಟ್ಟಿಗೆಗಳನ್ನು ಉರಿಸಿ ಅದರ ಉಗಿಯಿಂದ ಉತ್ಪಾದನೆಯಾಗುವ ಶಕ್ತಿಯಿಂದ ರೈಲು ಸಂಚರಿಸುತ್ತಿತ್ತು. ಬಳಿಕ ಡೀಸೆಲ್‌ ಎಂಜಿನ್‌ಗಳು ಬಂದವು. ಈಗ ಹಳಿ ಮಾರ್ಗಗಳ ಉದ್ದಕ್ಕೂ (ಟ್ರ್ಯಾಕ್ಸನ್‌) ವಿದ್ಯುತ್‌ ತಂತಿಗಳನ್ನು ಅಳವಡಿಸಿದ್ದು, ಅವುಗಳ ಮೂಲಕ ರೈಲು ಸಂಚರಿಸುವ ತಂತ್ರಜ್ಞಾನ ಬಳಕೆಗೆ ಬಂದಿದೆ. 

1925ರ ಫೆಬ್ರುವರಿ 3ರಂದು ಮೊದಲ ಬಾರಿಗೆ ಭಾರತೀಯ ರೈಲ್ವೆಯಲ್ಲಿ ವಿದ್ಯುದ್ದೀಕರಣ ಅಳವಡಿಸಲಾಗಿತ್ತು. ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನಿಂದ ಕುರ್ಲಾ ನಡುವೆ ಮೊದಲ ವಿದ್ಯುತ್‌ಚಾಲಿತ ರೈಲು ಸಂಚರಿಸಿತ್ತು. ಆನಂತರ ಒಂದೊಂದೇ ಟ್ರ್ಯಾಕ್ಷನ್‌ ವಿದ್ಯುದ್ದೀಕರಣಗೊಳ್ಳುತ್ತಾ ಬಂದಿತ್ತು. 

ನೈರುತ್ಯ ರೈಲ್ವೆ ವಲಯದಲ್ಲಿ ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗಗಳಿವೆ. ಜೊತೆಗೆ ಕಲಬುರಗಿ ವಿಭಾಗದ ರಚನೆ ಪ್ರಕ್ರಿಯೆ ನಡೆಯುತ್ತಿದೆ. ಇವುಗಳಲ್ಲಿ ಬೆಂಗಳೂರು ವಲಯ ಮಾತ್ರ ಶೇ 100ರಷ್ಟು ವಿದ್ಯುತ್‌ ಟ್ರ್ಯಾಕ್ಷನ್‌ ಸಾಧಿಸಿದೆ.

‘ಎ–1’ ದರ್ಜೆಯ ಕೆಎಸ್‌ಆರ್‌ ಬೆಂಗಳೂರು, ಯಶವಂತಪುರ ಜಂಕ್ಷನ್‌ ಮತ್ತು ಎಸ್‌ಎಂವಿಟಿ ನಿಲ್ದಾಣಗಳು, ‘ಎ’ ದರ್ಜೆಯ ಬಂಗಾರ್‌ಪೇಟೆ ಜಂಕ್ಷನ್‌, ಬೆಂಗಳೂರು ಕಂಟೋನ್ಮೆಂಟ್‌, ವೈಟ್‌ಫೀಲ್ಡ್‌, ಕೆಂಗೇರಿ, ಕೃಷ್ಣರಾಜಪುರ, ಕುಪ್ಪಂ, ಮಾಳೂರು, ಬಾಣಸವಾಡಿ, ಗೌರಿಬಿದನೂರು, ಯಲಹಂಕ ಜಂಕ್ಷನ್‌ ನಿಲ್ದಾಣಗಳು ಹಾಗೂ ‘ಬಿ’ ದರ್ಜೆಯ ಸತ್ಯ ಸಾಯಿ ಪ್ರಶಾಂತಿ ನಿಲಯ, ಧರ್ಮಪುರಿ ಮತ್ತು ಹೊಸೂರು ಸೇರಿ ಒಟ್ಟು 20 ನಿಲ್ದಾಣಗಳು ಬೆಂಗಳೂರು ವಲಯ ವ್ಯಾಪ್ತಿಯಲ್ಲಿವೆ. ಈ ನಿಲ್ದಾಣಗಳಿಂದ ಹೊರಡುವ ರೈಲುಗಳು ವಿದ್ಯುತ್‌ ಟ್ರ್ಯಾಕ್ಸನ್‌ನಲ್ಲಿ ಸಂಚರಿಸುತ್ತವೆ.

‘ವಿದ್ಯುತ್‌ ಬಳಸಿಕೊಂಡು ಚಲಿಸುವ ಎಂಜಿನ್‌ಗಳನ್ನು ಬೆಂಗಳೂರು ವಿಭಾಗದ ಎಲ್ಲ ರೈಲುಗಳು ಹೊಂದಿವೆ. ಜೊತೆಗೆ ಎಲ್ಲ ಎಂಜಿನ್‌ಗಳು ಡೀಸೆಲ್ ಮೂಲಕವೂ ಚಲಿಸುವ ವ್ಯವಸ್ಥೆಯನ್ನು ಹೊಂದಿವೆ. ಆಕಸ್ಮಿಕವಾಗಿ ಇಲ್ಲವೇ ಮಳೆ–ಗಾಳಿಗೆ ವಿದ್ಯುತ್‌ ಕೈ ಕೊಟ್ಟರೆ, ವಿದ್ಯುತ್‌ ಲೈನ್‌ಗಳು ಮುರಿದು ಬಿದ್ದರೆ ರೈಲು ಸ್ಥಗಿತಗೊಳ್ಳಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಇದೆ’ ಎಂದು ರೈಲ್ವೆ ತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿದರು.

ಉಗಿ-ಚಾಲಿತ ಎಂಜಿನ್‌ಗಳಿಂದ ಆಧುನಿಕ ಪರಿಸರಸ್ನೇಹಿ ವಿದ್ಯುದ್ದೀಕರಣ ವ್ಯವಸ್ಥೆಗೆ ಪರಿವರ್ತನೆಗೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ವಲಯ ಮಹತ್ವದ ಮೈಲಿಗಲ್ಲು ಸಾಧಿಸಿದೆ.
- ಅಶುತೋಷ್ ಮಾಥುರ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.