ಬೆಂಗಳೂರು: ಪುಕ್ಕಟ್ಟೆಯಾಗಿ ಸಿಗರೇಟ್ ಕೊಡಲಿಲ್ಲ ಎನ್ನುವ ವಿಚಾರಕ್ಕೆ ರೌಡಿಯೊಬ್ಬ ಬೇಕರಿಗೆ ನುಗ್ಗಿ ಗಲಾಟೆ ನಡೆಸಿದ್ದು, ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಾವರೆಕೆರೆ ಮುಖ್ಯರಸ್ತೆಯ ಕೃಷ್ಣಮೂರ್ತಿ ಲೇಔಟ್‍ನಲ್ಲಿ ಈ ಘಟನೆ ನಡೆದಿದೆ.
ರೌಡಿ ಅಪ್ಪಿ ಎಂಬಾತ ನಾಲ್ಕು ದಿನಗಳ ಹಿಂದೆ ಕೃಷ್ಣಮೂರ್ತಿ ಲೇಔಟ್‍ನ ರಮ್ಜಿದ್ ಸೈಫುಲ್ಲಾ ಎಂಬುವರ ಬೇಕರಿಗೆ ಹೋಗಿ ಪುಕ್ಕಟೆಯಾಗಿ ಸಿಗರೇಟ್ ಕೊಡುವಂತೆ ಕೇಳಿದ್ದ. ಆಗ ರಮ್ಜಿದ್ ಸೈಫುಲ್ಲಾ ಅವರು ಸಿಗರೇಟ್ ಕೊಟ್ಟಿಲ್ಲ. ಇದರಿಂದ ಕೆರಳಿದ ಅಪ್ಪಿ, ಬೇಕರಿಯೊಳಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಹೊರಕ್ಕೆ ಎಸೆದು ಗಲಾಟೆ ಮಾಡಿದ್ದಾನೆ. ಸೈಫುಲ್ಲಾ ಅವರು ದೂರು ಕೊಟ್ಟಿದ್ದು, ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಅಪ್ಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೌಡಿ ಅಪ್ಪಿ ಮದ್ಯದ ಅಮಲಿನಲ್ಲಿ ಗಲಾಟೆ ನಡೆಸಿದ್ದಾನೆ ಎಂದು ಗೊತ್ತಾಗಿದೆ. ಈ ಹಿಂದೆಯೂ ರಮ್ಜಿದ್ ಸೈಫುಲ್ಲಾರ ಬೇಕರಿಯಲ್ಲಿ ಸಿಗರೇಟ್ ತೆಗೆದುಕೊಂಡು ಹಣ ಕೊಡದೆ ಗಲಾಟೆ ಮಾಡಿದ್ದ. ಅದೇ ರೀತಿ ನಾಲ್ಕು ದಿನಗಳ ಹಿಂದೆ ಬೇಕರಿಗೆ ಹೋಗಿ ಗಲಾಟೆ ಮಾಡಿ ಪರಾರಿಯಾಗಿದ್ದಾನೆ. ಆತನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.