
ಬೆಂಗಳೂರು: ‘ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ತಂತ್ರಜ್ಞಾನ ಕಾಲಿಟ್ಟಿದೆ. ಆದ್ದರಿಂದ ರೈತರು ಕೂಡ ಆಧುನಿಕತೆಗೆ ತೆರೆದುಕೊಳ್ಳಬೇಕು’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಡಾ.ಎ.ಬಿ. ಪಾಟೀಲರ ಅಭಿನಂದನಾ ಸಮಿತಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕೃಷಿ ತಜ್ಞ ಎ.ಬಿ. ಪಾಟೀಲರ ಅಭಿನಂದನಾ ಗ್ರಂಥ ‘ಅಶೋಕವೃಕ್ಷ’ವನ್ನು ಜನಾರ್ಪಣೆ ಮಾಡಿ, ಮಾತನಾಡಿದರು.
‘ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರ ತನ್ನದೆಯಾದ ಕೊಡುಗೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಡುಗೆ ನೀಡಬೇಕಿದೆ. ಕೃಷಿ ಕ್ಷೇತ್ರವನ್ನು ಎಷ್ಟು ಅರಿತುಕೊಂಡರೂ ಸಾಲದು. ಈ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಬದಲಾವಣೆ ಆಗಬೇಕಿದೆ. ರೈತರು ಬದಲಾವಣೆಗೆ ಒಗ್ಗಿಕೊಂಡು ಕೃಷಿ ಕ್ಷೇತ್ರದ ಏಳ್ಗೆಗೆ ಶ್ರಮಿಸಬೇಕು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಾಡಿನ ಕೃಷಿ ತಂತ್ರಜ್ಞರೂ ಕೊಡುಗೆ ನೀಡುತ್ತಿದ್ದಾರೆ. ಅಂತಹವರ ಸಾಲಿನಲ್ಲಿ ಕೃಷಿ ತಜ್ಞ ಎ.ಬಿ.ಪಾಟೀಲ ಅವರು ಸೇರುತ್ತಾರೆ’ ಎಂದು ಶ್ಲಾಘಿಸಿದರು.
ಪುಸ್ತಕದ ಬಗ್ಗೆ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ‘ಎ.ಬಿ. ಪಾಟೀಲ ಅವರು ಕೃಷಿ ಪದವಿ ಪಡೆಯಲು ಅನುಭವಿಸಿದ ಸಂಕಷ್ಟದಿಂದ ಹಿಡಿದು, ಆ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಇಂತಹ ಕೃಷಿ ಸಾಧಕರ ಪುಸ್ತಕವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೇಸಾಯದ ಬದುಕು ಶೀರ್ಷಿಕೆಯಡಿ ಹೊರತರಲು ಯೋಜನೆ ರೂಪಿಸಿದೆ’ ಎಂದು ಹೇಳಿದರು.
ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.