ADVERTISEMENT

ಎಟಿಎಂ ಕಳವಿಗೆ ಯತ್ನ: ಆರೋಪಿ ಸೆರೆ

ಗ್ಯಾಸ್ ಸಿಲಿಂಡರ್, ಚಾಕು ಸೇರಿದಂತೆ ಇತರ ವಸ್ತುಗಳ ಜಪ್ತಿ, ಇತರೆಡೆಗಳಲ್ಲೂ ಕೃತ್ಯ ಎಸಗಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 19:32 IST
Last Updated 17 ಜೂನ್ 2022, 19:32 IST
ಆರೋಪಿಯಿಂದ ಜಪ್ತಿ ಮಾಡಲಾದ ಗ್ಯಾಸ್‌ ಸಿಲಿಂಡರ್, ಕಟರ್ ಹಾಗೂ ಇತರೆ ವಸ್ತುಗಳು
ಆರೋಪಿಯಿಂದ ಜಪ್ತಿ ಮಾಡಲಾದ ಗ್ಯಾಸ್‌ ಸಿಲಿಂಡರ್, ಕಟರ್ ಹಾಗೂ ಇತರೆ ವಸ್ತುಗಳು   

ಬೆಂಗಳೂರು: ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಚಿಕ್ಕಸಂದ್ರದ ಕೆನರಾ ಬ್ಯಾಂಕ್ ಶಾಖೆ ಎಟಿಎಂ ಘಟಕದಲ್ಲಿ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಸಮರ್ಜೋತ್ ಸಿಂಗ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

‘ಪಂಜಾಬ್‌ನ ಆರೋಪಿ ಸಮರ್ಜೋತ್ ಸಿಂಗ್‌, ಕಳ್ಳತನ ಮಾಡುವ ಉದ್ದೇಶದಿಂದ ಸಹಚರರ ಜೊತೆ ನಗರಕ್ಕೆ ಬಂದಿದ್ದ. ಸದ್ಯ ಈತನಷ್ಟೇ ಸಿಕ್ಕಿಬಿದ್ದಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ. ಬಂಧಿತನಿಂದ ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟರ್,ಚಾಕು ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎಟಿಎಂ ಘಟಕಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು, ಯಾರಾದರೂ ತಡೆಯಲು ಬಂದರೆ ಕೊಲೆಗೂ ಯತ್ನಿಸುತ್ತಿದ್ದರು. ಇದಕ್ಕಾಗಿ ಚಾಕು ಹಾಗೂ ಕತ್ತಿ ಬಳಸುತ್ತಿದ್ದರು’ ಎಂದೂ ತಿಳಿಸಿದರು.

ADVERTISEMENT

ಕಳ್ಳತನಕ್ಕೂ ಮುನ್ನ ಪರೀಕ್ಷೆ: ‘ಭದ್ರತೆ ಇಲ್ಲದ ಹಾಗೂ ಹೆಚ್ಚು ಜನರು ಓಡಾಡದ ಸ್ಥಳದಲ್ಲಿರುವ ಎಟಿಎಂ ಘಟಕಗಳನ್ನು ಆರೋಪಿಗಳು ಗುರುತಿಸುತ್ತಿದ್ದರು. ಕಳ್ಳತನಕ್ಕೂ ಮುನ್ನ ಎಟಿಎಂ ಘಟಕ ಬಳಿ ಸುತ್ತಾಡಿ, ಕಳ್ಳತನ ಹೇಗೆ ಮಾಡುವುದೆಂದು ಪರೀಕ್ಷಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಚಿಕ್ಕಸಂದ್ರದ ಕೆನರಾ ಬ್ಯಾಂಕ್ ಶಾಖೆ ಎಟಿಎಂ ಘಟಕ ಗುರುತಿಸಿದ್ದ ಆರೋಪಿ, ರಾತ್ರಿ ಸ್ಥಳಕ್ಕೆ ಹೋಗಿ ಶೆಟರ್ ಮುಚ್ಚಿಬರುತ್ತಿದ್ದ. ನಂತರ, ಬೆಳಿಗ್ಗೆ ಹೋಗಿ ಶೆಟರ್‌ ತೆಗೆಯುತ್ತಿದ್ದ. ಎಟಿಎಂ ಯಂತ್ರದ ಕೇಬಲ್ ಸಹ ಕತ್ತರಿಸುತ್ತಿದ್ದ. ಇದನ್ನು ಯಾರಾದರೂ ಪ್ರಶ್ನಿಸುತ್ತಾರೆಯೇ ಎಂಬುದನ್ನು ಪರೀಕ್ಷಿಸುತ್ತಿದ್ದ. ಇದೇ ರೀತಿಯಲ್ಲೇ ಮೂರು–ನಾಲ್ಕು ದಿನ ಮಾಡಿ, ನಂತರ ಕಳ್ಳತನ ಮಾಡುವುದು ಆರೋಪಿ ಉದ್ದೇಶವಾಗಿತ್ತು’ ಎಂದೂ ತಿಳಿಸಿದರು.

ಏಜೆನ್ಸಿ ಸಿಬ್ಬಂದಿಗೆ ಅನುಮಾನ: ‘ಆರೋಪಿ ಕೇಬಲ್‌ ಕತ್ತರಿಸಿದ್ದರಿಂದ ಎಟಿಎಂ ಯಂತ್ರ ಕೆಲಸ ನಿರ್ವಹಿಸುತ್ತಿರಲಿಲ್ಲ. ಈ ಬಗ್ಗೆ ದೂರು ಬರುತ್ತಿದ್ದಂತೆ ಘಟಕದ ನಿರ್ವಹಣಾ ಏಜೆನ್ಸಿ ಸಿಬ್ಬಂದಿ ಕೇಬಲ್ ದುರಸ್ತಿ ಗೊಳಿಸಿದ್ದರು. ಕೇಬಲ್‌ ಕತ್ತರಿಸಿದವರು ಯಾರೆಂದು ತಿಳಿಯಲು ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿ ಸುಳಿವು ಸಿಕ್ಕಿತ್ತು. ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಬಂಧನಕ್ಕಾಗಿ ಎಟಿಎಂ ಸುತ್ತಮುತ್ತ ಪೊಲೀಸರು ಕಾದು ಕುಳಿತಿದ್ದರು. ಜೂನ್ 9ರಂದು ರಾತ್ರಿ 11 ಗಂಟೆ ಸುಮಾರಿಗೆ ಆರೋಪಿ, ಎಟಿಎಂ ಘಟಕದ ಶೆಟರ್‌ ಮುಚ್ಚಲು ಬಂದಿದ್ದ. ಅದೇ ಸಂದರ್ಭದಲ್ಲೇ ಆತನನ್ನು ಹಿಡಿದುಕೊಂಡರು’ ಎಂದೂ ವಿವರಿಸಿದರು.

‘ಪರಪ್ಪನ ಅಗ್ರಹಾರ, ಜಾಲಹಳ್ಳಿ, ಸುಬ್ರಮಣ್ಯಪುರ, ಮೈಕೊ ಲೇಔಟ್, ಚನ್ನಮ್ಮನಕೆರೆ ಅಚ್ಚುಕಟ್ಟು, ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿರುವುದು ಗೊತ್ತಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.