ADVERTISEMENT

ಮಗಳ ಕೊಂದು ತಾಯಿ ಆತ್ಮಹತ್ಯೆ? ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 16:10 IST
Last Updated 8 ಆಗಸ್ಟ್ 2022, 16:10 IST
ಮಗಳು ಆರಾಧನಾ ಜೊತೆ ಶೈಮಾ
ಮಗಳು ಆರಾಧನಾ ಜೊತೆ ಶೈಮಾ   

ಬೆಂಗಳೂರು: ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ತಾಯಿ–ಮಗಳ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಾಯಿಯೇ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

‘ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ದಂತವೈದ್ಯೆ ಶೈಮಾ (39) ಹಾಗೂ ಮಗಳು ಆರಾಧನಾ (9) ಇಬ್ಬರ ಮೃತದೇಹಗಳು ಆಗಸ್ಟ್ 6ರಂದು ಮಧ್ಯಾಹ್ನ ಪತ್ತೆಯಾಗಿವೆ. ಇವರಿಬ್ಬರ ಸಾವಿನಲ್ಲಿ ಅನುಮಾನವಿರುವ ಬಗ್ಗೆ ಶೈಮಾ ಸಹೋದರ ಶರತ್ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೊಡಗಿನ ವಿರಾಜಪೇಟೆಯ ಶೈಮಾ, ಕೋಲಾರದ ನಾರಾಯಣ್ ಅವರನ್ನು ಪ್ರೀತಿಸಿ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮಗಳು ಆರಾಧನಾ ಜೊತೆ ದಂಪತಿ ವಾಸವಿದ್ದರು. ನಾರಾಯಣ್ ಸಹ ವೈದ್ಯರಾಗಿದ್ದು, ಮನೆಯ ಸಮೀಪದಲ್ಲಿ ಕ್ಲಿನಿಕ್‌ ನಡೆಸುತ್ತಿದ್ದರು. ಶೈಮಾ ಅವರಿಗೆ ಸಹಾಯ ಮಾಡುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಾರಣ ನಿಗೂಢ: ‘ನಾರಾಯಣ್ ಅವರು ಆಗಸ್ಟ್ 6ರಂದು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ಈ ವೇಳೆ ಶೈಮಾ ಹಾಗೂ ಆರಾಧನಾ ಮಾತ್ರ ಮನೆಯಲ್ಲಿದ್ದರು. ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡಿದ್ದರು. ಮಧ್ಯಾಹ್ನವಾದರೂ ಅವರಿಬ್ಬರು ಬಾಗಿಲು ತೆರೆದು ಹೊರಗೆ ಬಂದಿರಲಿಲ್ಲ. ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ಮೃತದೇಹಗಳು ಕಂಡಿದ್ದವು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇವರಿಬ್ಬರ ಸಾವಿನಲ್ಲಿ ಅನುಮಾನ ಇರುವುದಾಗಿ ಶೈಮಾ ಕುಟುಂಬದವರು ತಿಳಿಸಿದ್ದರು. ಹೀಗಾಗಿ, ತಕ್ಷಣ ದೂರು ದಾಖಲಿಸಿಕೊಂಡಿರಲಿಲ್ಲ. ಆಸ್ಟ್ರೇಲಿಯಾದಲ್ಲಿದ್ದ ಸಹೋದರ ಶರತ್, ಸೋಮವಾರ ನಗರಕ್ಕೆ ಬಂದು ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ.’

‘ಆರಾಧನಾ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿದ ಬಳಿಕ ಶೈಮಾ ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸ್ಥಳದಲ್ಲಿ ಯಾವುದೇ ಮರಣಪತ್ರ ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪತಿ ನಾರಾಯಣ್ ಹಾಗೂ ಇತರರನ್ನೂ ವಿಚಾರಣೆ ನಡೆಸಲಾಗುವುದು’ ಎಂದೂ ಮೂಲಗಳು ತಿಳಿಸಿವೆ.

ಸಂಪಂಗಿರಾಮನಗರ ಠಾಣೆ ವ್ಯಾಪ್ತಿಯಲ್ಲೂ ಆಗಸ್ಟ್ 4ರಂದು ತಾಯಿ ಸುಷ್ಮಾ (34) ಎಂಬುವರು ತಮ್ಮ ನಾಲ್ಕು ವರ್ಷದ ಮಗಳು ದ್ವಿತಿಯನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ದರು. ಆರೋಪಿ ಸುಷ್ಮಾ ಸಹ ದಂತವೈದ್ಯೆ. ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ಮಗಳನ್ನು ಕೊಂದಿರುವುದಾಗಿ ಹೇಳಿಕೆ ನೀಡಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.