
ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ನೌಕರರು ಸಿಐಟಿಯು ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ಸೋಮವಾರ ಆರಂಭಿಸಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘34 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವೆ. ನಮ್ಮ ಅಂಗನವಾಡಿಯಲ್ಲಿ ಕಲಿತ ಎಷ್ಟೋ ಮಕ್ಕಳು ಬಳಿಕ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ನಾವು ಮಾತ್ರ ತಿಂಗಳಿಗೆ ₹12 ಸಾವಿರ ಪಡೆಯಲು ಕಷ್ಟ ಪಡುತ್ತಿದ್ದೇವೆ. ಖರ್ಚುಗಳು ಹೆಚ್ಚಾಗಿವೆ. ಕಡಿಮೆ ಸಂಬಳದಲ್ಲಿ ಹೇಗೆ ಬದುಕುವುದು ಹೇಳಿ, ಮೋದಿ ಅವರು ನಮ್ಮ ಸಂಬಳ ಜಾಸ್ತಿ ಮಾಡಲಿ. . .’
ಇದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆರಂಭಗೊಂಡಿರುವ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಭಾಗಿಯಾಗಿರುವ ಹೊಸಕೋಟೆ ತಾಲ್ಲೂಕು ಆಲಪ್ಪನಹಳ್ಳಿ ಗ್ರಾಮದ ಅಂಗನವಾಡಿ ನೌಕರರಾದ ಖದೀರಮ್ಮ ಅವರ ನುಡಿ.
‘ನಮಗೆ ಕನಿಷ್ಠ ವೇತನವನ್ನಾದರೂ ನೀಡಿ ಎಂದು ಹೋರಾಟ ಮಾಡಿದಾಗ ರಾಜ್ಯ ಸರ್ಕಾರ ₹1 ಸಾವಿರ ಏರಿಕೆ ಮಾಡಿದರೂ ನಮ್ಮ ಪೂರ್ಣ ಬೇಡಿಕೆ ಈಡೇರಿಲ್ಲ. ಕೇಂದ್ರ ಸರ್ಕಾರವಂತೂ 2018 ನಂತರ ವೇತನ ಏರಿಕೆ ಮಾಡಿಯೇ ಇಲ್ಲ. ಎಷ್ಟು ದಿನ ಅಂತಲೇ ಕೇಳುತ್ತಿರಬೇಕು. ನಮ್ಮ ಕಷ್ಟವನ್ನು ಜನಪ್ರತಿನಿಧಿಗಳು ಆಲಿಸಿ ಕೇಂದ್ರಕ್ಕೆ ಮುಟ್ಟಿಸಲಿ’ ಎಂದವರು ಅದೇ ಗ್ರಾಮದ ಶಾರದಾ.
‘ನಮಗೆ ನಾಲ್ಕೈದು ಕೆಲಸ ವಹಿಸಿದ್ಧಾರೆ. ಮೊಬೈಲ್‌ನಲ್ಲಿಯೇ ಎಲ್ಲವನ್ನೂ ದಾಖಲಿಸಬೇಕು. ಚೆನ್ನಾಗಿರುವ ಮೊಬೈಲ್ ಕೊಟ್ಟಿಲ್ಲ. ನೆಟ್‌ವರ್ಕ್ ಕೂಡ ಸಿಗುವುದಿಲ್ಲ. ಮುಖ ಆಧರಿತ ದಾಖಲು ವ್ಯವಸ್ಥೆ ರದ್ದು ಮಾಡಿ ಇಲ್ಲವೇ ಸರಿಯಾದ ಮೊಬೈಲ್ ಕೊಡಿ’ ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದ ಗಿರಿಜಾ ಅವರ ಬೇಡಿಕೆ.
‘ಬೆಳಿಗ್ಗೆ 8 ರಿಂದ ಸಂಜೆ 4ರವರೆಗೂ ಕೆಲಸ ಮಾಡಿದರೂ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಕೇಳಿದರೆ ಕಾರಣ ಹೇಳಲಾಗುತ್ತದೆ. ಮೂರ್ನಾಲ್ಕು ತಿಂಗಳಿಗೊಮ್ಮೆ ಸಂಬಳ ಬಂದರೆ ನಾವು ಹೇಗೆ ಬದುಕುವುದು ಹೇಳಿ’ ಎಂದು ಪ್ರಶ್ನಿಸಿದರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಪಗಡದಿನ್ನಿಯ ಬಿಸಿಯೂಟ ಕಾರ್ಯಕರ್ತೆ ರೇಣಮ್ಮ.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿರುವ 10 ಸಾವಿರದಷ್ಟು ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು. ವೇತನ ಹೆಚ್ಚಳ, ಆರೋಗ್ಯ ವಿಮೆ, ನಿವೃತ್ತಿ ವೇತನ ಸೇರಿದಂತೆ 20ಕ್ಕೂ ಹೆಚ್ಚು ಬೇಡಿಕೆಗಳನ್ನು ಮಂಡಿಸಿದರು.
‘ಸಂಸದರು, ಶಾಸಕರು ಯಾವುದೇ ಚರ್ಚೆಯಿಲ್ಲದೇ ತಮ್ಮ ವೇತನ ಹಾಗೂ ಸೌಲಭ್ಯಗಳನ್ನು ಏರಿಸಿಕೊಳ್ಳುತ್ತಾರೆ. ದಿನವಿಡೀ ದುಡಿಯುವ ನಮ್ಮ ಬೇಡಿಕೆಗಳು ಅವರಿಗೆ ಏಕೆ ಕಾಣುತ್ತಿಲ್ಲ. ಕೆಲವೇ ಉದ್ಯಮಿಗಳ ₹18 ಲಕ್ಷ ಕೋಟಿ ಕಾರ್ಪೊರೇಟ್ ಸಾಲ ಮನ್ನಾ ಮಾಡಲಾಗಿದೆ. ಅದರ ಬದಲು ನಮಗೆ ನೆರವಾದರೆ 56 ಲಕ್ಷ ಕುಟುಂಬಗಳಿಗೆ ಒಳಿತಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.
‘ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು. ಅವರಿಂದ ಸೂಕ್ತ ಭರವಸೆ ಸಿಗುವವರೆಗೂ ಈ ಬಾರಿ ಧರಣಿ ನಿಲ್ಲುವುದಿಲ್ಲ. ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರು ನಮ್ಮ ಪರವಾಗಿ ಗಟ್ಟಿ ದನಿ ತೋರಬೇಕು’ ಎಂದು ಪ್ರಮುಖರು ಹೇಳಿದರು.
ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಸಚಿವರ ಕಚೇರಿಗಳ ಎದುರು ಪ್ರತಿಭಟನೆ ನಡೆದಿದೆ. ಲೋಕಸಭೆಯಲ್ಲಿ ಚರ್ಚಿಸಿ ಮುಂದಿನ ಬಜೆಟ್‌ನಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಹೋರಾಟ ನಿಲ್ಲದು.ಎಸ್.ವರಲಕ್ಷ್ಮಿ ಅಧ್ಯಕ್ಷೆ ಸಿಐಟಿಯು ಕರ್ನಾಟಕ
ಕೇಂದ್ರ ಸರ್ಕಾರ ಕನಿಷ್ಠ ₹21 ಸಾವಿರ ವೇತನ ನೀಡಲಿ
56 ಲಕ್ಷ ಸ್ಕೀಮ್ ಕಾರ್ಮಿಕರ ಸೇವಾ ಷರತ್ತು ಸುಧಾರಣೆಗೆ ವೇತನ ಆಯೋಗ ರಚಿಸಿ
ಅಂಗನವಾಡಿಗಳಲ್ಲಿ ಎಫ್‌ಆರ್‌ಎಸ್ ರದ್ದು ಮಾಡಿ ಇಲ್ಲವೇ ವೈಫೈ ವ್ಯವಸ್ಥೆ ಕೊಡಿ
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಿ
ಅಂಗನವಾಡಿಗಳಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸಿ
ನಮಗೂ ಹೆರಿಗೆ ಮುಟ್ಟಿನ ರಜೆ ವಿಸ್ತರಿಸಿ
ಬಿಸಿಯೂಟ ನೌಕರರಿಗೆ ಕೆಲಸದ ಭದ್ರತೆ ನೀಡಿ
ಆಶಾ ಕಾರ್ಯಕರ್ತರಿಗೂ ನಿಯಮಿತವಾಗಿ ತರಬೇತಿ ಆಯೋಜಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.