ADVERTISEMENT

ಬಂಜಾರ ಸಿನಿಮಾಗಳಿಗೆ ಸಹಾಯಧನ ನೀಡಿ: ಎ.ಆರ್. ಗೋವಿಂದಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 16:15 IST
Last Updated 14 ಆಗಸ್ಟ್ 2025, 16:15 IST
ಕಾರ್ಯಕ್ರಮದಲ್ಲಿ ಎ.ಆರ್.ಗೋವಿಂದಸ್ವಾಮಿ ಮಾತನಾಡಿದರು. ಕೃಷ್ಣೇಗೌಡ, ಹೇಮಂತ್‌ ಕುಮಾರ್, ವಿಜೇತ ಕುಮಾರ್ ರಾಠೋಡ್, ಪಿ. ಉಮೇಶ್‌ ನಾಯ್ಕ್‌, ಕುಮಾರ ನಾಯ್ಕ್‌, ರವಿ ಲಮಾಣಿ, ಆರ್.ಬಿ. ನಾಯಕ್‌, ಉತ್ತಮ್‌ ಕೆ.ಎಚ್‌. ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಎ.ಆರ್.ಗೋವಿಂದಸ್ವಾಮಿ ಮಾತನಾಡಿದರು. ಕೃಷ್ಣೇಗೌಡ, ಹೇಮಂತ್‌ ಕುಮಾರ್, ವಿಜೇತ ಕುಮಾರ್ ರಾಠೋಡ್, ಪಿ. ಉಮೇಶ್‌ ನಾಯ್ಕ್‌, ಕುಮಾರ ನಾಯ್ಕ್‌, ರವಿ ಲಮಾಣಿ, ಆರ್.ಬಿ. ನಾಯಕ್‌, ಉತ್ತಮ್‌ ಕೆ.ಎಚ್‌. ಉಪಸ್ಥಿತರಿದ್ದರು   

ಬೆಂಗಳೂರು: ‘ರಾಜ್ಯ ಸರ್ಕಾರವು ಬಂಜಾರ ಸಂಸ್ಕೃತಿ ಮತ್ತು ಭಾಷೆಯ ಸಿನಿಮಾಗಳಿಗೆ ಪ್ರತ್ಯೇಕವಾಗಿ ಸಹಾಯಧನ ನೀಡಲು ಮುಂದಾಗಬೇಕು’ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್.ಗೋವಿಂದಸ್ವಾಮಿ ಆಗ್ರಹಿಸಿದರು.

ಅಕಾಡೆಮಿಯು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕಳತಾವೂರ್‌ ಮಳಾವ್‌’ (ಸಜ್ಜನರ ಸಲ್ಲಾಪ) ಬಂಜಾರ ಸಿನಿಮಾ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಬಂಜಾರ ಭಾಷೆಯ ಚಲನಚಿತ್ರ ಕಲಾವಿದರಿಗಾಗಿ ಸರ್ಕಾರವು ಒಂದು ಪ್ರಶಸ್ತಿಯನ್ನು ಸ್ಥಾಪಿಸಿ, ಬಂಜಾರ ಸಿನಿಮಾ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಬಂಜಾರ ಸಿನಿಮಾ ತಯಾರಿಕೆಗೆ ಸಂಬಂಧಿಸಿದಂತೆ ನಮ್ಮ ಅಕಾಡೆಮಿಯು ಕಥೆ, ನಿರ್ದೇಶನ, ಸಂಕಲನ, ವಸ್ತ್ರ ವಿನ್ಯಾಸ, ಪ್ರಸಾದನ ಮತ್ತು ನಟನೆ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಿದೆ’ ಎಂದು ಹೇಳಿದರು.

‘ಸಿನಿಮಾ ಕ್ಷೇತ್ರವನ್ನು ಬಂಜಾರ ಸಮುದಾಯವು ಸರಿಯಾಗಿ ಬಳಸಿಕೊಳ್ಳಬೇಕು. ಬಂಜಾರ, ತುಳು, ಕೊಂಕಣಿ, ಬ್ಯಾರಿ, ಅರೆಭಾಷೆಗಳ ಸಿನಿಮಾಗಳ ಉತ್ಸವಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ADVERTISEMENT

ಬಂಜಾರ ಚಲನಚಿತ್ರ ನಿರ್ದೇಶಕ ವಿಜೇತ ಕುಮಾರ್ ರಾಠೋಡ್, ‘ಬಂಜಾರ ಸಮುದಾಯದಲ್ಲಿ ಹುಟ್ಟಿರುವ ನನಗೆ, ಈ ಸಂಸ್ಕೃತಿಯನ್ನು ಇತರರಿಗೂ ತಿಳಿಸಬೇಕೆಂಬ ಬಯಕೆ ಚಿಕ್ಕಂದಿನಲ್ಲಿಯೇ ಚಿಗುರಿತು. ಆದ್ದರಿಂದ ಬಂಜಾರರ ಆಚಾರ-ವಿಚಾರಗಳನ್ನು ಒಳಗೊಂಡು ಕಸೂತಿ ಬಗ್ಗೆ ಸಾಕ್ಷ್ಯಚಿತ್ರ ನಿರ್ದೇಶಿಸಿದೆ’ ಎಂದು ಸ್ಮರಿಸಿಕೊಂಡರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಿರ್ದೇಶಕರಾದ ಹೇಮಂತ್‌ಕುಮಾರ್, ಪಿ. ಉಮೇಶ್‌ ನಾಯ್ಕ್‌, ಕುಮಾರ ನಾಯ್ಕ್‌, ಕಲಾವಿದ ರವಿ ಲಮಾಣಿ, ಅಕಾಡೆಮಿ ಸದಸ್ಯರಾದ ಆರ್.ಬಿ. ನಾಯಕ್‌, ಉತ್ತಮ್‌ ಕೆ.ಎಚ್‌. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.