ADVERTISEMENT

ಗ್ರೂಪ್‌ ಎ: ಮುಂಬಡ್ತಿ, ವರ್ಗಾವಣೆ ಅಧಿಕಾರ ಬಿಬಿಎಂಪಿ ಆಯುಕ್ತರಿಗೆ

ಸರ್ಕಾರಕ್ಕೆ ಕೋರಲು ಪಾಲಿಕೆ ಸಭೆಯಲ್ಲಿ ಸರ್ವಾನುಮತದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 19:23 IST
Last Updated 7 ಸೆಪ್ಟೆಂಬರ್ 2020, 19:23 IST
   

ಬೆಂಗಳೂರು: ’ಬಿಬಿಎಂಪಿಯ ಗ್ರೂಪ್‌ ‘ಎ’ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ವಿಷಯಗಳು, ಸೇವಾ ಸೌಲಭ್ಯಗಳು ಹಾಗೂ ಶಿಸ್ತುಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಪಾಲಿಕೆ ಆಯುಕ್ತರಿಗೆ ನೀಡಬೇಕು. ಈ ಬಗ್ಗೆ ಪಾಲಿಕೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು‘ ಎಂದು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪಾಲಿಕೆಯಲ್ಲಿ ಇತ್ತೀಚೆಗೆ ನಡೆದ ಕೌನ್ಸಿಲ್ ಸಭೆಯಲ್ಲಿ ಈ ಸಂಬಂಧ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.

ಈ ಹಿಂದೆ ಬಿಬಿಎಂಪಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಧಿಕಾರ ಆಯುಕ್ತರಿಗೆ ಮಾತ್ರ ಇತ್ತು. ಕರ್ನಾಟಕ ಸರ್ಕಾರಿ ಸೇವಾ ನಿಯಮ, ಹುದ್ದೆ ವರ್ಗೀಕರಣ ಹಾಗೂ ನಡತೆ ನಿಯಮಗಳು ಬಿಬಿಎಂಪಿಗೆ ಅನ್ವಯವಾಗುತ್ತಿರಲಿಲ್ಲ. ಬಿಬಿಎಂಪಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ– 2020 ಮಾರ್ಚ್‌ನಲ್ಲಿ ಜಾರಿಗೆ ಬಂದ ಬಳಿಕ ಪಾಲಿಕೆ ಆಯುಕ್ತರ ಕೆಲವೊಂದು ಅಧಿಕಾರಗಳಿಗೆ ಕತ್ತರಿ ಹಾಕಲಾಗಿದೆ.

ADVERTISEMENT

ನೂತನ ನಿಯಮಗಳ ಪ್ರಕಾರ ನಗರಾಭಿವೃದ್ಧಿ ಇಲಾಖೆಯು ಗ್ರೂಪ್‌ ‘ಎ’ ವೃಂದದ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಪ್ರಾಧಿಕಾರ ಹಾಗೂ ಶಿಸ್ತು ಮತ್ತು ಅಪೀಲು ಪ್ರಾಧಿಕಾರವಾಗಿರುತ್ತದೆ. ಹೊಸ ನಿಯಮ ಜಾರಿಗೆ ಬಂದ ಬಳಿಕವೂ ಬಿಬಿಎಂಪಿ ಆಯುಕ್ತರು ಮುಖ್ಯ ಎಂಜಿನಿಯರ್‌ ಒಬ್ಬರಿಗೆ ಮುಂಬಡ್ತಿ ನೀಡಿದ್ದಕ್ಕೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಅವರು ಆಕ್ಷೇಪ ವ್ಯಕ್ತಪಡಿಸಿ ಮೇ ತಿಂಗಳಲ್ಲಿ ಪತ್ರ ಬರೆದಿದ್ದರು.

‘ಆಡಳಿತಾತ್ಮಕ ಹಾಗೂ ಅಧಿಕಾರಿಗಳ ಶಿಸ್ತುಕ್ರಮ, ವರ್ಗಾವಣೆ ಸಂಬಂಧಿಸಿದ ವಿಚಾರದಲ್ಲಿ ಪಾಲಿಕೆಯು ಸೂಕ್ತ ತೀರ್ಮಾನ ಕೈಗೊಳ್ಳಲು ಹೊಸ ನಿಯಮದಿಂದಾಗಿ ಅನನುಕೂಲವಾಗಿದೆ. ಈ ಅಧಿಕಾರವನ್ನು ಪಾಲಿಕೆ ಆಯುಕ್ತರಿಗೆ ನೀಡದಿದ್ದಲ್ಲಿ ಆಡಳಿತ ನಿರ್ವಹಣೆ ಕುಸಿಯಬಹುದು’ ಎಂದು ಪಾಲಿಕೆ ಆಯುಕ್ತರಾಗಿದ್ದ ಬಿ.ಎಚ್‌.ಅನಿಲ್‌ ಕುಮಾರ್‌ ಜೂನ್‌ ತಿಂಗಳಲ್ಲಿ ಪತ್ರ ಬರೆದಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್‌.ಅಮರೇಶ್‌ ಅವರು ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದರು.

‘ಬಿಬಿಎಂಪಿಯ ವೃಂದ ಮತ್ತು ನೇಮಕಾತಿ ನಿಯಮಗಳ ಸಂಬಂಧ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು ರಾಜ್ಯಪಾಲರ ಅಂಕಿತದೊಂದಿಗೆ ಆದೇಶ ಜಾರಿಯಾಗಿವೆ. ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.