ADVERTISEMENT

ಬಿಬಿಎಂಪಿ ಮೇಯರ್‌ ಗಾದಿ | ಇಂದು ಚುನಾವಣೆ: ಚುಕ್ಕಾಣಿ ಯಾರಿಗೆ?

ಅಭ್ಯರ್ಥಿ ಆಯ್ಕೆಗೆ ಬಿಎಸ್‌ವೈ–ಕಟೀಲ್‌ ಭಿನ್ನ ರಾಗ l ಗೆಲುವಿನ ದಡ ಸೇರುವುದೇ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 19:54 IST
Last Updated 30 ಸೆಪ್ಟೆಂಬರ್ 2019, 19:54 IST
   

ಬೆಂಗಳೂರು: ಪಾಲಿಕೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು (102) ಹೊಂದಿದ್ದರೂ ಸ್ವಯಂಕೃತ ತಪ್ಪುಗಳಿಂದಾಗಿ ನಾಲ್ಕು ಅವಧಿಯಲ್ಲಿ ಮೇಯರ್‌ ಗಾದಿಯಿಂದ ದೂರವೇ ಉಳಿದಿದ್ದ ಬಿಜೆಪಿ ಈ ಬಾರಿ ಗೆಲುವಿನ ದಡ ಸೇರುವ ತವಕದಲ್ಲಿದೆ.

ರಾಜ್ಯದಲ್ಲೂ ತಮ್ಮದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿರುವುದರ ಲಾಭ ಪಡೆದು ಬಿಬಿಎಂಪಿ ಚುಕ್ಕಾಣಿ ಹಿಡಿಯುವ ಆತ್ಮವಿಶ್ವಾಸದ ಅಲೆಯಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳು ತೇಲು ತ್ತಿದ್ದರು. ಆದರೆ, ಕೊನೆಕ್ಷಣದಲ್ಲಿ ನಡೆದಿರುವ ಕೆಲವು ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಆತಂಕದ ಛಾಯೆ ಮೂಡಿಸಿದೆ.

ಮೇಯರ್‌ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದರಿಂದ ಚುನಾವಣೆ ಮುಂದೂಡುವ ತಂತ್ರ ಅನುಸರಿಸುವ ಪರಿಸ್ಥಿತಿಗೆ ಪಕ್ಷವು ತಲುಪಿತ್ತು. ಈ ತಂತ್ರ ಫಲಿಸದ ಕಾರಣ ಅನಿವಾರ್ಯವಾಗಿ ಅ. 1ರಂದೇ ಚುನಾವಣೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಈಗಿನ ಸಂಖ್ಯಾಬಲದ ಪ್ರಕಾರ ಪಕ್ಷದ ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು, ವಿಧಾನಸಭಾ ಸದಸ್ಯರೆಲ್ಲರೂ ಸೇರಿದರೂ ಬಹುಮತ ಪಡೆಯುವಷ್ಟು ಮತಗಳು ಬಿಜೆಪಿ ಬಳಿ ಇಲ್ಲ. ಐದು ಮತಗಳ ಕೊರತೆ ಎದುರಿಸುತ್ತಿರುವ ಬಿಜೆಪಿ ಗದ್ದುಗೆ ಹಿಡಿಯಬೇಕಾದರೆ ಪಕ್ಷೇತರ ಸದಸ್ಯರು ಅಥವಾ ಅನರ್ಹ ಶಾಸಕರ ಬೆಂಬಲಿಗ ಕಾರ್ಪೊರೇಟರ್‌ಗಳ ಬೆಂಬಲ ಅಗತ್ಯ.

ಆದರೆ, ಮೇಯರ್‌ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನಡುವೆಯೂ ಈ ವಿಚಾರವಾಗಿ ಶೀತಲ ಸಮರ ನಡೆಯುತ್ತಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಏಳು ಮಂದಿ ಆಕಾಂಕ್ಷಿಗಳಿದ್ದರು. ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಐವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ಯಡಿಯೂರಪ್ಪ ರಚಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದ ನಳಿನ್ ಕುಮಾರ್ ಕಟೀಲ್, 'ಪಕ್ಷವು ಯಾವುದೇ ಸಮಿತಿಯನ್ನು ರಚಿಸಿಲ್ಲ' ಎಂದು ತಿಳಿಸಿದ್ದರು.

ಒಂದು ವೇಳೆ ಸಮಿತಿ ಅಂತಿಮಗೊಳಿಸಿದ ಅಭ್ಯರ್ಥಿಗೆ ಪಕ್ಷವು ಟಿಕೆಟ್ ನೀಡದೇ ಇದ್ದಲ್ಲಿ ಪಕ್ಷದ ನಿರ್ಧಾರದ ವಿರುದ್ಧ ಸೆಡ್ಡು ಹೊಡೆಯಲು ಬಿಜೆಪಿಯ ಶಾಸಕರು ಹಾಗೂ ಕಾರ್ಪೊರೇಟರ್‌ಗಳ ಒಂದು ಬಣ ಸಜ್ಜಾಗಿತ್ತು. ಮೇಯರ್ ಸ್ಥಾನವು ಈ ಬಾರಿಯೂ ಬಿಜೆಪಿಯಿಂದ ಕೈತಪ್ಪಿ ಹೋದರೆ ಪಕ್ಷವು ಭಾರಿ ಮುಜುಗರಕ್ಕೆ ಒಳಪಡಬೇಕಾಗುತ್ತದೆ. ಹಾಗಾಗಿ, ಅಕ್ಟೋಬರ್ 1ರಂದು ನಿಗದಿಯಾಗಿದ್ದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯನ್ನೇ ಮುಂದೂಡುವಂತೆ ಕೆಲವು ಶಾಸಕರು ಹಾಗೂ ಬಿಜೆಪಿಯ ಪಾಲಿಕೆ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ಆದರೆ, ಆ ತಂತ್ರ ಫಲಿಸಿಲ್ಲ. ಸೋಮವಾರ ರಾತ್ರಿ ಸಭೆ ನಡೆಸಿದ ಪಕ್ಷದ ವರಿಷ್ಠರು ಭಿನ್ನಮತ ಶಮನಗೊಳಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಸರತ್ತು ನಡೆಸಿದ್ದರು. ಆದರೆ, ಪಕ್ಷದ ಈ ನಿರ್ಧಾರದಿಂದ ಬೇಸರಗೊಂಡ ಕಾರ್ಪೊರೇಟರ್‌ಗಳು ಮತ್ತು ಶಾಸಕರು ಮತದಾನದಿಂದ ದೂರ ಉಳಿಯುತ್ತಾರೊ, ಅಥವಾ ವರಿಷ್ಠರು ಸೂಚಿಸಿದ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೋ ಎಂದು ಕಾದು ನೊಡಬೇಕಿದೆ.

ಬಿಎಸ್‌ವೈ ಸೂಚನೆಗೂ ಸೊಪ್ಪು ಹಾಕದ ಚುನಾವಣಾಧಿಕಾರಿ ಹರ್ಷಗುಪ್ತ

ಅ. 1ರಂದು ನಿಗದಿಯಾಗಿದ್ದ ಮೇಯರ್‌ ಮತ್ತು ಉಪಮೇಯರ್ ಚುನಾವಣೆಯನ್ನು ಮುಂದೂಡಬೇಕು ಹಾಗೂ ಎಲ್ಲ ಸ್ಥಾಯಿ ಸಮಿತಿಗಳಿಗೂ ಮೇಯರ್‌ ಚುನಾವಣೆಯಂದೇ ಚುನಾವಣೆ ನಡೆಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಅವರು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅವರಿಗೆ ಸೋಮವಾರ ಬೆಳಿಗ್ಗೆ ಪತ್ರ ಬರೆದಿದ್ದರು. ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣೆ ಮುಂದೂಡುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಪ್ರಾದೇಶಿಕ ಆಯುಕ್ತರು ನಿಗದಿಯಾದ ಚುನಾವಣೆಯನ್ನು ಮತ್ತೆ ಮುಂದೂಡಲು ಒಪ್ಪಲಿಲ್ಲ.

‘ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ ಅ.1 ರಂದೇ ಚುನಾವಣೆ ನಡೆಯಲಿದೆ. ಇದರ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಯೂ ನಡೆಯಲಿದೆ’ ಎಂದು ಚುನಾವಣಾಧಿಕಾರಿ ಹರ್ಷ ಗುಪ್ತ ಸ್ಪಷ್ಟಪಡಿಸಿದರು.

ಇನ್ನುಳಿದ 8 ಸ್ಥಾಯಿಸಮಿತಿಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಮೊದಲು, ಸೆಪ್ಟೆಂಬರ್ 27 ರಂದು ಚುನಾವಣೆ ನಿಗದಿಯಾಗಿತ್ತು. ಸ್ಥಾಯಿ ಸಮಿತಿಗಳಿಗೂ ಮೇಯರ್ ಚುನಾವಣೆಯ ದಿನದಂದೇ ಮತದಾನ ನಡೆಸುವ ವಿಚಾರದಲ್ಲಿ ಗೊಂದಲ ಉಂಟಾದ ಕಾರಣ ಮೇಯರ್ ಚುನಾವಣೆಯನ್ನು ಅ.1ಕ್ಕೆ ಮುಂದೂಡಲಾಗಿತ್ತು. ಬಳಿಕ 8 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹೈಕೋರ್ಟ್ ಮೊರೆ ಹೋಗಿದ್ದರು. ಸ್ಥಾಯಿ ಸಮಿತಿಗಳ ಅಧಿಕಾರ ಅವಧಿ ಇನ್ನೂ ಎರಡು ತಿಂಗಳು ಇರುವುದರಿಂದ ಈಗಲೇ ಚುನಾವಣೆ ನಡೆಸದಂತೆ ಹೈಕೋರ್ಟ್ ಆದೇಶ ನೀಡಿತ್ತು.

ಸತ್ಯನಾರಾಯಣ ಕಾಂಗ್ರೆಸ್‌ ಅಭ್ಯರ್ಥಿ

ಕಾಂಗ್ರೆಸ್‌ ಈ ಬಾರಿಯೂ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಿದೆ. ಮೈತ್ರಿಕೂಟದಿಂದ ಆರ್‌.ಎಸ್‌.ಸತ್ಯನಾರಾಯಣ ಅವರನ್ನು ಮೇಯರ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ.

ಬಿಜೆಪಿಯಲ್ಲಿರುವ ಭಿನ್ನಮತದ ಲಾಭ ಪಡೆದು ಸತತ ಐದನೇ ಬಾರಿಗೆ ಗದ್ದುಗೆ ಏರುವ ಪ್ರಯತ್ನವನ್ನು ಮೇಯರ್‌ ಚುನಾವಣೆಯ ಮುನ್ನಾದಿನದವರೆಗೂ ಮುಂದುವರಿಸಿದ್ದ ಕಾಂಗ್ರೆಸ್‌ ಪಾಳಯದಲ್ಲಿ ಚುಕ್ಕಾಣಿ ಹಿಡಿಯುವ ಬಗ್ಗೆ ಆತ್ಮವಿಶ್ವಾಸವಿಲ್ಲ. ಮೇಯರ್‌ ಸ್ಥಾನದ ಅಭ್ಯರ್ಥಿಯ ಆಯ್ಕೆ ಸಲುವಾಗಿ ಸೋಮವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಕಾರ್ಪೊರೇಟರ್‌ಗಳ ಸಭೆ ಕರೆಯಲಾಗಿತ್ತು. ಆದರೆ, ಮಂಗಳವಾರ ಚುನಾವಣೆ ನಡೆಯುತ್ತದೋ ಇಲ್ಲವೋ ಎಂಬ ಬಗ್ಗೆಯೇ ಗೊಂದಲವಿದ್ದುದರಿಂದ ಬಹುತೇಕಕಾರ್ಪೊರೇಟರ್‌ಗಳು ಸಭೆಗೆ ಹಾಜರಾಗಿಲ್ಲ. ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ನಾಮಕಾವಾಸ್ಥೆಗೆ ಸಭೆ ನಡೆಸಿದರು.

‘ಚುನಾವಣೆಯಲ್ಲಿ ಏನೂ ಬೇಕಾದರೂ ಆಗಬಹುದು. ನಮ್ಮ ಪ್ರಯತ್ನ ಕೈಬಿಟ್ಟಿಲ್ಲ. ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡರೆ ಖಂಡಿತಾ ಅದರ ಲಾಭ ಪಡೆಯುತ್ತೇವೆ’ ಎಂದು ಪಾಲಿಕೆಯಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಉಪ‍ಮೇಯರ್‌: ಗಂಗಮ್ಮ ಜೆಡಿಎಸ್‌ ಅಭ್ಯರ್ಥಿ

ಸತತ ಐದನೇ ವರ್ಷವೂ ಕಾಂಗ್ರೆಸ್‌ ಜೊತೆ ಮೈತ್ರಿ ಮುಂದುವರಿಸಲು ಜೆಡಿಎಸ್‌ ತೀರ್ಮಾನಿಸಿದೆ.

‘ಮೇಯರ್‌ ಚುನಾವಣೆ ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ. ನಾವು ಉಪ ಮೇಯರ್‌ ಸ್ಥಾನಕ್ಕೆ ನಮ್ಮ ಪಕ್ಷದಿಂದ ಶಕ್ತಿ ಗಣಪತಿನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಗಂಗಮ್ಮ ಅವರನ್ನು ಕಣಕ್ಕಿಳಿಸಲಿದ್ದೇವೆ’ ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

4 ಸ್ಥಾಯಿ ಸಮಿತಿಗಳ ಚುನಾವಣೆಗೆ ಆಕ್ಷೇಪ

ಪಾಲಿಕೆಯ ಎಲ್ಲ ಸ್ಥಾಯಿ ಸಮಿತಿಗಳ ಅಧಿಕಾರಾವಧಿ ಡಿ 4ರಂದು ಕೊನೆಗೊಳ್ಳಲಿದೆ. ಆದರೂ, ಸ್ಥಾಯಿ ಸಮಿತಿಗಳಿಗೂ ಅ.1ರಂದೇ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿ ಎಂಟು ಸ್ಥಾಯಿಸಮಿತಿಗಳ ಅಧ್ಯಕ್ಷರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ತಡೆಯಾ‌ಜ್ಞೆ ನೀಡಿದ್ದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು.

ಹೈಕೋರ್ಟ್‌ ಮೊರೆ ಹೋಗದ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅ.1ರಂದೇ ಚುನಾವಣೆ ನಡೆಸಲಾಗುತ್ತಿದೆ. ಆದರೆ, ಈ ನಿರ್ಧಾರವನ್ನು ಈ ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರಶ್ನಿಸಿದ್ದಾರೆ.

‘ನಮ್ಮ ಸಮಿತಿಯ ಅವಧಿಯೂ ಡಿ.4ರಂದು ಕೊನೆಗೊಳ್ಳುತ್ತದೆ. ಹೈಕೋರ್ಟ್‌ ಮೊರೆ ಹೋಗಲಿಲ್ಲ ಎಂಬ ಮಾತ್ರಕ್ಕೆ ನಾಲ್ಕು ಸಮಿತಿಗಳಿಗೆ ಚುನಾವಣೆ ನಡೆಸುವುದು ಎಷ್ಟು ಸರಿ. ಉಳಿದ ಸಮಿತಿಗಳಿಗೊಂದು ನ್ಯಾಯ ನಮಗೊಂದು ನ್ಯಾಯವೇ? ಹೈಕೋರ್ಟ್‌ ಮೊರೆ ಹೋಗದವರಿಗೆ ಅನ್ಯಾಯ ಮಾಡಬಹುದು ಎಂಬುದು ಇದರರ್ಥವೇ? ಸಂವಿಧಾನ ಪ್ರಕಾರ ನಡೆದುಕೊಳ್ಳಬೇಕಾದ ಅಧಿಕಾರಿಗಳು ಸರ್ಕಾರ ಕೈಗೊಂಬೆಯಂತೆ ನಡೆದುಕೊಳ್ಳುವುದು ಏಕೆ’ ಎಂದು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೇಲು ನಾಯ್ಕರ್‌ ಪ್ರಶ್ನಿಸಿದರು.

ಅ.1ರಂದು ಚುನಾವಣೆ ನಡೆಯುವ ಸ್ಥಾಯಿ ಸಮಿತಿಗಳು

* ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ

* ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ

* ಲೆಕ್ಕಪತ್ರ ಸ್ಥಾಯಿ ಸಮಿತಿ

* ಮಾರುಕಟ್ಟೆ ಸ್ಥಾಯಿಸಮಿತಿ

‘ನಿಮ್ಮ ಮೇಯರ್‌ ಅಭ್ಯರ್ಥಿ ಬೆಂಬಲಿಸುವುದಿಲ್ಲ’: ಬಿಜೆಪಿಗೆ ಶಾಕ್‌ ನೀಡಿದ ಅನರ್ಹರು

‘ನಿಮ್ಮಿಂದ ನೋವು ಅನುಭವಿಸಿದ್ದು ಸಾಕು. ಬಿಬಿಎಂಪಿ ಮೇಯರ್‌ ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿಗೆ ಬೆಂಬಲ ನೀಡಲು ಸಾಧ್ಯವಿಲ್ಲ’ ಎಂದು ಬೆಂಗಳೂರಿನ ಅನರ್ಹ ಶಾಸಕರು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರಿಗೆ ಖಡಕ್‌ ಮಾತುಗಳಲ್ಲಿ ಹೇಳಿದ್ದಾರೆ.

‘ಬಿಬಿಎಂಪಿಯಲ್ಲಿ ಇರುವ ನಮ್ಮ ಬೆಂಬಲಿಗ ಸದಸ್ಯರಿಗೂ ಬಿಜೆಪಿ ಮೇಯರ್‌ ಅಭ್ಯರ್ಥಿಯನ್ನು ಬೆಂಬಲಿಸಬೇಡಿ ಎಂದು ಹೇಳಿದ್ದೇವೆ’ ಎಂದು ನಗರದ ಅನರ್ಹ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೇಯರ್‌ ಚುನಾವಣೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಡ್ಡು ಹೊಡೆದ ಬೆನ್ನಲ್ಲೇ, ಅನರ್ಹರ ಈ ನಡೆ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ಧಾವಂತದಲ್ಲಿರುವವರಿಗೆ ಆಘಾತ ನೀಡಿದೆ.

‘ಮೇಯರ್‌ ಚುನಾವಣೆಯಲ್ಲಿ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ ಎಂಬುದಾಗಿ ಸ್ಪಷ್ಟ ಮಾತುಗಳಲ್ಲಿ ಅಶ್ವತ್ಥನಾರಾಯಣ ಅವರಿಗೆ ಹೇಳಿದ್ದೇವೆ’ ಎಂದರು.

ಅಲ್ಲದೆ, ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಮತ್ತು ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲ ಅವರ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹೂಡಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆಯೂ ಸೂಚಿಸಿದ್ದೇವೆ ಎಂದರು.

ಅಕ್ಟೋಬರ್‌ 22 ರಂದು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬರುವುದರಿಂದ ಅದರ ಬಗ್ಗೆ ಚರ್ಚೆ ನಡೆಸಿದೆವು. ಉಪಚುನಾವಣೆಯಲ್ಲಿ ಟಿಕೆಟ್‌ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಅದಕ್ಕೆ ಮೊದಲು ನ್ಯಾಯಾಲಯದಲ್ಲಿ ಪ್ರಕರಣ ಏನಾಗುತ್ತದೆ ಎಂಬುದನ್ನು ನೋಡಬೇಕು. ಬಳಿಕ ಅದರ ಬಗ್ಗೆ ಯೋಚಿಸುತ್ತೇವೆ ಎಂದು ಅವರು ಹೇಳಿದರು.

ಈ ಸಭೆಯಲ್ಲಿ ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಬೈರತಿ ಬಸರಾಜ್‌, ಆರ್‌.ರೋಷನ್‌ ಬೇಗ್‌, ಕೆ.ಗೋಪಾಲಯ್ಯ ಇದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.