ADVERTISEMENT

ಬೊಕ್ಕಸ ತುಂಬಿಕೊಳ್ಳಲು ಆಸ್ತಿ ಮೇಲೆ ಕಣ್ಣು: ಸರ್ಕಾರದ ನಡೆಗೆ ತೀವ್ರ ಆಕ್ಷೇಪ

₹ 5 ಸಾವಿರ ಕೋಟಿ ವರಮಾನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 20:34 IST
Last Updated 17 ಆಗಸ್ಟ್ 2020, 20:34 IST
   

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ರಾಜ್ಯ ಸರ್ಕಾರವು ಬೊಕ್ಕಸ ತುಂಬಿಕೊಳ್ಳಲು ನಗರ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ಜಮೀನುಗಳನ್ನು ಮಾರಾಟ ಮಾಡಲು ತೀರ್ಮಾನಿಸಿದೆ. ರಾಜ್ಯ ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಿಸುವ’ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಗುತ್ತಿಗೆ ನೀಡಿರುವ ಜಮೀನುಗಳ ಮಾರುವ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ’ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆಯಡಿ ಹಾಗೂ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಕಾಯ್ದೆಯಡಿ ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು ಮಾರಾಟ ಮಾಡುವ ಪ್ರಸ್ತಾವವನ್ನು ಸಂಸದೀಯ ವ್ಯವಹಾರ ಹಾಗೂ ಶಾಸನ ರಚನಾ ಇಲಾಖೆಗೆ ಸಲ್ಲಿಸಲಾಗಿದೆ. ಎರಡೂ ಪ್ರಸ್ತಾವನೆಗಳನ್ನು ಸಂಸದೀಯ ವ್ಯವಹಾರಗಳ ಇಲಾಖೆಯ ಪರಿಶೋಧನಾ ಸಮಿತಿಯ ಮುಂದೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪೌರಾಡಳಿತ ಇಲಾಖೆಯ ನಿರ್ದೇಶಕರು ಮಂಡಿಸಬೇಕು‘
ಎಂದು ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಬಿಬಿಎಂಪಿ, ಮಹಾನಗರಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪ‍ಂಚಾಯಿತಿಗಳ ವ್ಯಾಪ್ತಿಯಲ್ಲಿ ಗುತ್ತಿಗೆ ನೀಡಿರುವ ಜಮೀನುಗಳನ್ನು ಮಾರಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲೇ 4,780 ಆಸ್ತಿಗಳನ್ನು ಗುತ್ತಿಗೆಗೆ ನೀಡಲಾಗಿದೆ. ಇವುಗಳ ಮಾರಾಟದಿಂದ ಅಂದಾಜು ₹5 ಸಾವಿರ ಕೋಟಿ ವರಮಾನ ಬರಲಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

‘ಕೋವಿಡ್‌ ನೆಪದಲ್ಲಿ ಸರ್ಕಾರಿ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಬಳಿ ಜಾಗವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆಸ್ಪತ್ರೆಗಳು, ಶಾಲೆಗಳು, ಮೈದಾನಗಳ ನಿರ್ಮಾಣಕ್ಕೆ ಖಾಸಗಿಯವರ ಎದುರು ಕೈಚಾಚುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

’ರಾಜ್ಯದ ಅತ್ಯಂತ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಯೇ ಹೀಗೆ ಸ್ವಂತ ಆಸಕ್ತಿ ವಹಿಸಿ ಸಾರ್ವಜನಿಕ ಆಸ್ತಿಯನ್ನು ಪರಭಾರೆ ಮಾಡಿದರೆ ಯಾರ ಮೊರೆ ಹೋಗುವುದು‘ ಎಂದು ಬಿಬಿಎಂಪಿಯ ಹಿಂದಿನ ಆಯುಕ್ತರೊಬ್ಬರು ಪ್ರಶ್ನಿಸಿದರು.

’ಲಾಕ್‌ಡೌನ್‌ನಿಂದಾಗಿ ಹತ್ತಾರು ಸಾವಿರ ಕೋಟಿಯ ಕಾಮಗಾರಿಗಳು ಸ್ಥಗಿತಗೊಂಡಿವೆ. ಮತ್ತೊಂದೆಡೆ, ಈ ಸಂಕಷ್ಟದ ಕಾಲದಲ್ಲೂ ಸಾವಿರಾರು ಕೋಟಿಯ ನಿರುಪಯುಕ್ತ ಕಾಮಗಾರಿಗಳನ್ನು ಸರ್ಕಾರ ನಡೆಸುತ್ತಿದೆ. ಈ ಯೋಜನೆಗಳನ್ನು ರದ್ದುಪಡಿಸಿದರೆ ಬೊಕ್ಕಸದಲ್ಲಿ ಸಾಕಷ್ಟು ಹಣ ಇರುತ್ತಿತ್ತು‘ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಕಿಡಿಕಾರಿದರು.

‘ಗುತ್ತಿಗೆ ಜಮೀನುಗಳ ಬಾಡಿಗೆ ಹೆಚ್ಚಿಸಿದರೆ ಸಾಕಿತ್ತು’
‘ಬಿಬಿಎಂಪಿಯು ಗುತ್ತಿಗೆ ನೀಡಿರುವ ಜಮೀನುಗಳನ್ನು ಮಾರಾಟ ಮಾಡುವ ಅವಶ್ಯಕತೆ ಇಲ್ಲ. ಇವುಗಳ ಬಾಡಿಗೆ ಹೆಚ್ಚಿಸಿದರೆ ನೂರಾರು ಕೋಟಿ ವರಮಾನ ಬರುತ್ತದೆ’ ಎಂದು ಪಾಲಿಕೆಯ ಬಿಜೆಪಿ ಸದಸ್ಯ ಬಿ.ಎಸ್‌.ಸತ್ಯನಾರಾಯಣ ಪ್ರತಿಪಾದಿಸಿದರು.

‘ಪಾಲಿಕೆ ಆಸ್ತಿಗಳನ್ನು ಈ ಹಿಂದೆ ಚಿಕ್ಕಾಸಿಗೆ ಬಾಡಿಗೆಗೆ ನೀಡಲಾಗಿದೆ. ಬಾಡಿಗೆ ಪರಿಷ್ಕರಣೆ ಮಾಡುವ ಬಗ್ಗೆ 2011–12ರಲ್ಲಿ ಪಾಲಿಕೆ ಸದಸ್ಯರ ಸಮಿತಿ ರಚನೆ ಮಾಡಿದ್ದೆವು. ಬಾಡಿಗೆ ಜಾಸ್ತಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಆದರೆ, ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕೌನ್ಸಿಲ್‌ ಒಪ್ಪಿಗೆ ಪಡೆಯದೆಯೇ ರಾಜ್ಯ ಸರ್ಕಾರ ಆಸ್ತಿಗಳ ಮಾರಾಟ ಮಾಡಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.