ADVERTISEMENT

ಬೆಂಗಳೂರು: ತೆರಿಗೆ ಪಾವತಿಸದ 2.75 ಲಕ್ಷ ಆಸ್ತಿದಾರರು

ಮೂರು ತಿಂಗಳಲ್ಲಿ ಕುಂಠಿತವಾದ ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 0:30 IST
Last Updated 2 ಸೆಪ್ಟೆಂಬರ್ 2025, 0:30 IST
ತೆರಿಗೆ
ತೆರಿಗೆ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 2.75 ಲಕ್ಷ ಆಸ್ತಿಗಳಿಗೆ ಹಲವು ವರ್ಷಗಳಿಂದ ತೆರಿಗೆ ಪಾವತಿಯಾಗಿಲ್ಲ. ಇದರ ಮೊತ್ತ ₹786 ಕೋಟಿಯಾಗಿದ್ದು, ಎಲ್ಲರಿಗೂ ನೋಟಿಸ್‌ ಜಾರಿ ಮಾಡಲಾಗಿದೆ.

‘ಹಲವು ವರ್ಷಗಳಿಂದ ತೆರಿಗೆಯನ್ನೇ ಪಾವತಿಸದ ಸುಸ್ತಿದಾರರಿಗೆ ‘ಎಲೆಕ್ಟ್ರಾನಿಕ್‌ ಡಿಮ್ಯಾಂಡ್‌ ನೋಟಿಸ್‌ ಜಾರಿ ಮಾಡಲಾಗಿದೆ. ಅವರೆಲ್ಲ BBMPtax.karnataka.gov.in ನಲ್ಲಿ  ತೆರಿಗೆ ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು. ಚರ ಮತ್ತು ಸ್ಥಿರ ಆಸ್ತಿಗಳ ತುರ್ತು ಮಾರಾಟ ಸೇರಿದಂತೆ ವಸೂಲಿ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ತೆರಿಗೆ ಸುಸ್ತಿದಾರರು ಕಾರಣಗಳೊಂದಿಗೆ (https://BBMPeNyaya.karnataka.gov.in) ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಎಂದರು.

ಮಹದೇವಪುರ ವಲಯದಲ್ಲಿ 65 ಸಾವಿರ, ಬೊಮ್ಮನಹಳ್ಳಿ ವಲಯದಲ್ಲಿ 45 ಸಾವಿರ, ರಾಜರಾಜೇಶ್ವರಿ ನಗರ ವಲಯದಲ್ಲಿ 38 ಸಾವಿರ, ಪೂರ್ವ ವಲಯದಲ್ಲಿ37 ಸಾವಿರ, ಯಲಹಂಕದಲ್ಲಿ 28 ಸಾವಿರ, ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ತಲಾ 25 ಸಾವಿರ, ದಾಸರಹಳ್ಳಿ ವಲಯದಲ್ಲಿ 11 ಸಾವಿರ ಸುಸ್ತಿದಾರರಿದ್ದಾರೆ.

ತೆರಿಗೆ ಸಂಗ್ರಹ ಕುಂಠಿತ: ಪ್ರಸಕ್ತ ಆರ್ಥಿಕ ವರ್ಷದ (2025–26) ಮೊದಲ ಎರಡು ತಿಂಗಳಲ್ಲಿ ಬಿಬಿಎಂಪಿ ₹2,424.93 ಕೋಟಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಿತ್ತು. ಆದರೆ, ಜೂನ್‌, ಜುಲೈ, ಆಗಸ್ಟ್‌ನಲ್ಲಿ ₹786 ಕೋಟಿಯಷ್ಟೇ ಸಂಗ್ರಹವಾಗಿದೆ.

‘ಬಿಬಿಎಂಪಿಯಿಂದ ಜಿಬಿಎ ಹಾಗೂ ಐದು ನಗರ ಪಾಲಿಕೆಗಳ ರಚನೆ ಹಾಗೂ ಇ–ಖಾತಾ ಪಡೆದವರ ಆಸ್ತಿ ತೆರಿಗೆ ಪರಿಶೀಲನೆ, ಷೋಕಾಸ್‌ ನೋಟಿಸ್‌ ನೀಡುವ ಪ್ರಕ್ರಿಯೆಗಳಿಂದ ಸಾಮಾನ್ಯ ಆಸ್ತಿ ತೆರಿಗೆ ಸಂಗ್ರಹ ಪ್ರಕ್ರಿಯೆಗೆ ಹಿನ್ನಡೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.