ADVERTISEMENT

ಆಟೊ: ಇವಿಗೆ ಬದಲಾದರೆ ಪ್ರೋತ್ಸಾಹಧನ

ಪ್ರಸ್ತಾವ ಸಲ್ಲಿಸಿರುವ ಸಾರಿಗೆ ಇಲಾಖೆ l ಆಟೊ ಚಾಲಕರಿಂದ ನಿರಾಸಕ್ತಿ l ಎಲೆಕ್ಟ್ರಿಕ್‌ ಆಟೊದಿಂದ ಭಾರಿ ಉಳಿತಾಯ

ಬಾಲಕೃಷ್ಣ ಪಿ.ಎಚ್‌
Published 15 ಜನವರಿ 2025, 0:25 IST
Last Updated 15 ಜನವರಿ 2025, 0:25 IST
<div class="paragraphs"><p>ಹೊಗೆ ಉಗುಳುತ್ತಿರುವ ಆಟೊ </p></div>

ಹೊಗೆ ಉಗುಳುತ್ತಿರುವ ಆಟೊ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಹಳೇ ಆಟೊ ರಿಕ್ಷಾಗಳನ್ನು ಗುಜರಿಗೆ ಹಾಕಿ ಹೊಸ ವಿದ್ಯುತ್‌ಚಾಲಿತ (ಇವಿ) ಆಟೊ ತೆಗೆದುಕೊಳ್ಳುವವರಿಗೆ ಮತ್ತು ಆಟೊಗಳ ಎಂಜಿನ್‌ಗಳನ್ನು ಇವಿಗೆ ಬದಲಾಯಿಸುವವರಿಗೆ ₹ 60 ಸಾವಿರ ಪ್ರೋತ್ಸಾಹಧನ ನೀಡಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. 

ADVERTISEMENT

ವಾಯುಮಾಲಿನ್ಯ ಕಡಿಮೆ ಮಾಡಲು ಕ್ರಿಯಾಯೋಜನೆ ತಯಾರಿಸಲು ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ. ಆಟೊ ಚಾಲಕ–ಮಾಲೀಕರ ಕುರಿತು ಅಧ್ಯಯನ ನಡೆಸಿ ಅದರ ವರದಿಯೊಂದಿಗೆ, ಇವಿ ಆಟೊ ಖರೀದಿಗೆ ಪ್ರೋತ್ಸಾಹಧನ ನೀಡುವ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಸಲ್ಲಿಸಲು ಇಲಾಖೆ ಮುಂದಾಗಿದೆ.

ಎರಡು ಸ್ಟ್ರೋಕ್ ವಾಹನಗಳಿಗೆ:

‘ಎರಡು ಸ್ಟ್ರೋಕ್ ಆಟೊಗಳ ನೋಂದಣಿ ನಿಂತು ಎರಡು ದಶಕ ಕಳೆದಿದ್ದರೂ ಈಗಲೂ ಅಂಥ ಆಟೊಗಳನ್ನು ಓಡಿಸುತ್ತಿದ್ದಾರೆ. ಗುಜರಿಗೆ ಹಾಕಿ ಅಂದರೂ ಕೇಳುತ್ತಿಲ್ಲ. ಒಳ ರಸ್ತೆಗಳಲ್ಲಿ ಸಂಚರಿಸುತ್ತಿರುತ್ತವೆ. ಅಂಥ ಆಟೊಗಳು ಬೆಂಗಳೂರು ನಗರದಲ್ಲಿ ಸುಮಾರು 10 ಸಾವಿರ ಇವೆ. ವಾಹನ ಹಳತಾದಾಗ ಹೊಗೆಯೊಂದಿಗೆ ಆಯಿಲ್‌ ಸೇರಿಕೊಂಡು ಹೊರ ಬರುವುದರಿಂದ ಮಾಲಿನ್ಯ ಹೆಚ್ಚಾಗುತ್ತದೆ. ಇದನ್ನು ತಡೆಯುವುದಕ್ಕಾಗಿ, ಆಟೊ ಮಾಲೀಕರನ್ನು ಪ್ರೋತ್ಸಾಹಿಸುವುದಕ್ಕಾಗಿ ಈ ಯೋಜನೆ ರೂಪಿಸಲಾಗುತ್ತಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

‘ಪೆಟ್ರೊಲ್ ಆಧಾರಿತ ಎಂಜಿನ್ ಹೊಂದಿರುವ ಆಟೊಗೆ ಇಂಧನಕ್ಕೆ ಆಗುವ ವೆಚ್ಚಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್‌ ಆಟೊಗಳಲ್ಲಿ ಶೇ 20ರಷ್ಟು ವೆಚ್ಚದಲ್ಲಿ ಅಷ್ಟೇ ಕಿಲೋಮೀಟರ್‌ ಓಡಿಸಲು ಸಾಧ್ಯ ಆಗುತ್ತದೆ. ಉದಾಹರಣೆಗೆ ₹ 200ರ ಪೆಟ್ರೊಲ್‌ ಹಾಕಿದರೆ ಆಟೊ ಎಷ್ಟು ಸಂಚರಿಸುತ್ತದೋ ಅಷ್ಟು ದೂರವನ್ನು ಎಲೆಕ್ಟ್ರಿಕ್‌ ಆಟೊ ₹ 30–₹ 40 ವೆಚ್ಚದಲ್ಲಿ ಕ್ರಮಿಸುತ್ತದೆ. ಇದರಿಂದ ಆಟೊವನ್ನು ನಂಬಿ ಜೀವಿಸುವವರಿಗೆ ಎಲೆಕ್ಟ್ರಿಕ್‌ ಆಟೊ
ಗಳಿಂದ ಭಾರಿ ಉಳಿತಾಯವಾಗಲಿದೆ’ ಎಂಬುದು ಅವರ ವಿವರವಾಗಿದೆ.

‘ಸದ್ಯ ಬೆಂಗಳೂರು ನಗರವನ್ನು ಕೇಂದ್ರೀಕರಿಸಿಕೊಂಡು ಯೋಜನೆ ರೂಪಿಸಲಾಗಿದೆ. ಎರಡು ಸ್ಟ್ರೋಕ್‌ ಎಂಜಿನ್‌ ಆಟೊಗಳ ಸಂಚಾರ ಪೂರ್ಣವಾಗಿ ನಿಲ್ಲುವಂತಾಗಬೇಕು. ವಾಯುಮಾಲಿನ್ಯ ಕಡಿಮೆ ಮಾಡಬೇಕು’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್‌ ಮಾಹಿತಿ ನೀಡಿದರು.

ಆಟೊಗಳನ್ನು ಗುಜರಿಗೆ ಹಾಕಲು ಮನಸ್ಸು ಇಲ್ಲದೇ ಇದ್ದರೆ ರಿಟ್ರೊ ಫಿಟ್‌ಮೆಂಟ್‌ ಮೂಲಕ ಎಂಜಿನ್‌ ಬದಲಾಯಿಸಿಕೊಂಡರೂ ಅವರಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿದೆ. ಹೊಸ ಆಟೊ ಖರೀದಿಸುವಾಗ ಪೆಟ್ರೊಲ್‌ ಎಂಜಿನ್‌ ಆಟೊಗಳಿಗಿಂತ ಇವಿ ಆಟೊಗಳ ಬೆಲೆ ಸುಮಾರು ₹ 1 ಲಕ್ಷ ಹೆಚ್ಚಿರುತ್ತದೆ. ಇವಿ ಆಟೊಗಳಿಗೆ ₹ 3.50 ಲಕ್ಷದಿಂದ ₹ 3.80 ಲಕ್ಷದವರೆಗೆ ನೀಡಬೇಕಾಗುತ್ತದೆ ಎಂಬುದು ಆಟೊ ಮಾಲೀಕರ ದೂರು. ₹ 1 ಲಕ್ಷದಲ್ಲಿ ₹ 60 ಸಾವಿರ ಪ್ರೋತ್ಸಾಹಧನದ ಮೂಲಕ ಬರುತ್ತದೆ. ಇವಿ ಆಟೊ ನಿರ್ವಹಣೆ ವೆಚ್ಚ ಬಹಳ ಕಡಿಮೆ ಆಗಿರುವುದರಿಂದ ಉಳಿದ ₹ 40 ಸಾವಿರ ಕೆಲವೇ ತಿಂಗಳಲ್ಲಿ ಸರಿದೂಗುತ್ತದೆ. ಆನಂತರ ಲಾಭದಾಯಕವಾಗಿರುತ್ತದೆ ಎಂದರು.

₹ 1.5 ಕೋಟಿ ಮೀಸಲು

‘ಗ್ರೀನ್‌ ಟ್ಯಾಕ್ಸ್‌ ಯೋಜನೆಯಡಿ ಬೇರೆ ಬೇರೆ ಯೋಜನೆಗಳನ್ನು ರೂಪಿಸಲಾಗಿದೆ. ಅದರಲ್ಲಿ ಇವಿ ಆಟೊ ಖರೀದಿಸುವ ಆಟೊ ಮಾಲೀಕರಿಗೆ ಪ್ರೋತ್ಸಾಹಧನ ನೀಡುವುದೂ ಸೇರಿದೆ. ಈ ವರ್ಷ ₹ 1.5 ಕೋಟಿ ಮೀಸಲಿರಿಸಲಾಗಿದೆ. ಆಟೊ ಚಾಲಕರು ಇವಿಗೆ ಎಂಜಿನ್‌ ಬದಲಾಯಿಸಲು ಇಲ್ಲವೇ ಇವಿ ಅಟೊ ಖರೀದಿಸಲು ತಯಾರಿದ್ದರೆ ನಾವು ಸರ್ಕಾರದಿಂದ ಅನುಮತಿ ಪಡೆದು ಯೋಜನೆ ಜಾರಿ ಮಾಡುತ್ತೇವೆ. ಆದರೆ, ಆಟೊ ಚಾಲಕ, ಮಾಲೀಕರಿಗೆ ಮಾಹಿತಿ ನೀಡಿದ್ದರೂ ಸ್ಪಂದನೆ ನೀರಸವಾಗಿದೆ.  ಎರಡು ಸ್ಟ್ರೋಕ್‌ ಆಟೊ ಓಡಿಸುವುದು ಅವರ ಆರೋಗ್ಯಕ್ಕೂ, ಸಾರ್ವಜನಿಕರ ಆರೋಗ್ಯಕ್ಕೂ ಒಳ್ಳೆಯದಲ್ಲ. ಈ ಸೌಲಭ್ಯವನ್ನು ಅವರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಸಾರಿಗೆ ಆಯುಕ್ತ ಎ.ಎಂ. ಯೋಗೀಶ್‌ ತಿಳಿಸಿದರು.

ಬೆಂಗಳೂರಿನ ಆಟೊಗಳ ಸಂಖ್ಯೆ

2.55 ಲಕ್ಷ: ಸದ್ಯ ಇರುವ ಆಟೊಗಳ ಸಂಖ್ಯೆ

25 ಸಾವಿರ: ಪ್ರತಿವರ್ಷ ಹೆಚ್ಚಳವಾಗಲಿರುವ ಆಟೊಗಳ ಸಂಖ್ಯೆ

10 ಸಾವಿರ: ಎರಡು ಸ್ಟ್ರೋಕ್‌ ಆಟೊಗಳ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.