
ಬೆಂಗಳೂರು: ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿ ನಿವಾಸಿ ಮೊಹಮದ್ ರಾಖೀಬ್, ಕೆ.ಜಿ.ಹಳ್ಳಿಯ ರಫೀಕ್ ಬಾಷ ಹಾಗೂ ಪೀಣ್ಯ ನಿವಾಸಿ ಮೊಹಮದ್ ಅಸ್ಗರ್ ಎಂಬುವರನ್ನು ಬಂಧಿಸಿ, ₹5.50 ಲಕ್ಷ ಮೌಲ್ಯದ ಹತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಠಾಣಾ ವ್ಯಾಪ್ತಿಯ ಲಿಂಗರಾಜಪುರದ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡರು.
ಸಿ.ಸಿ.ಟಿ.ವಿ. ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ಹಾಗೂ ಬಾತ್ಮೀದಾರರ ಮಾಹಿತಿ ಆಧರಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಾಹನಗಳನ್ನು ಕಳವು ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದರು.
ವಿವಿಧ ಕಂಪನಿಯ ಹತ್ತು ದ್ವಿಚಕ್ರ ವಾಹನಗಳನ್ನು ಶಾಂಪುರ ಎಂಬ ಸ್ಥಳದಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು.
ಆರೋಪಿಗಳ ಬಂಧನದಿಂದ ಬಾಣಸವಾಡಿ ಪೊಲೀಸ್ ಠಾಣೆಯ ಎರಡು, ಡಿ.ಜೆ.ಹಳ್ಳಿ ಪೊಲೀಸ್ ಠಾಣೆ, ಗೋವಿಂದಪುರ, ರಾಜರಾಜೇಶ್ವರಿ, ಉಪ್ಪಾರಪೇಟೆ, ನೆಲಮಂಗಲ ಪೊಲೀಸ್ ಠಾಣೆಯ ತಲಾ ಒಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.