ಬೆಂಗಳೂರು: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1) ಯೋಜನೆಗೆ ಭೂಮಿ ನೀಡಲು ಬಹುತೇಕ ರೈತರು ವಿರೋಧ ವ್ಯಕ್ತಪಡಿಸಿದ್ದು, ಶೇಕಡ 10ರಷ್ಟು ರೈತರು ಮಾತ್ರ ಒಪ್ಪಿಗೆ ಸೂಚಿಸಿದ್ದಾರೆ. ಬಿಬಿಸಿ ಯೋಜನೆಗೆ ಅಧಿಸೂಚನೆ ಹೊರಡಿಸಿ ಎರಡು ದಶಕವಾದರೂ ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿರುವ ಭೂಮಿಗೆ ಪರಿಹಾರ ನಿಗದಿ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸಾಧ್ಯವಾಗಿಲ್ಲ.
ಭೂ ಸ್ವಾಧೀನ ಕಾಯ್ದೆ 1894ರ ಅನ್ವಯ ಸಂಧಾನ ಸೂತ್ರದಡಿ ಪರಿಹಾರ ನೀಡುವುದಾಗಿ ಬಿಡಿಎ ಹೇಳಿದರೆ, ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ಮಾಡಬೇಕು ಹಾಗೂ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಭೂಮಿಗೆ ಯೋಗ್ಯ ದರ ನೀಡಲು ಸಾಧ್ಯವಾಗದಿದ್ದರೆ ಅಧಿಸೂಚನೆ ರದ್ದುಗೊಳಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ಯೋಜನೆಗಾಗಿ ಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ರೈತರೊಂದಿಗೆ ಚರ್ಚಿಸಿ ದರ ನಿಗದಿ ಮಾಡಲು ಎಂಟು ಮಂದಿ ವಿಶೇಷ ಭೂಸ್ವಾಧೀನಾಧಿಕಾರಿಗಳ ತಂಡವನ್ನು ಪ್ರಾಧಿಕಾರ ರಚಿಸಿತ್ತು. 66 ಗ್ರಾಮಗಳ ವ್ಯಾಪ್ತಿಯ ಜಮೀನು ಮಾಲೀಕರ ಅಹವಾಲು ಆಲಿಸಿದ್ದು, ಹುಸ್ಕೂರು ಸೇರಿ ಎರಡು ಗ್ರಾಮಗಳ ರೈತರು ಬಿಡಿಎ ಸಂಧಾನ ಸೂತ್ರ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಒಂದು, ಎರಡು ಹಾಗೂ ಐದು ಗುಂಟೆ ಭೂಮಿ ಹೊಂದಿರುವವರು ಮಾತ್ರ ಸಂಧಾನ ಸೂತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.
‘ಬೈರತಿ ಗ್ರಾಮ ಸಮೀಪದ ಜಾರಕಬಂಡೆ ಕಾವಲ್ ಬಳಿ ಮರ ತೆರವಿಗೆ ಅಧಿಕಾರಿಗಳು ಮುಂದಾದಾಗ ಅಡ್ಡಿಪಡಿಸಿ, ವಾಪಸ್ ಕಳುಹಿಸಲಾಗಿತ್ತು. ಆದಾದ ಬಳಿಕ ಯೋಜನೆಗೆ ಸಂಬಂಧಿಸಿ ಕಾಮಗಾರಿಗಳು ಆರಂಭಗೊಂಡಿಲ್ಲ. ಯೋಜನೆ ವ್ಯಾಪ್ತಿಯ ಹಳ್ಳಿಗಳ ರೈತರ ಮನವೊಲಿಸಲು ಹಲವು ಬಾರಿ ಅಧಿಕಾರಿಗಳು ಸಂಧಾನ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ತೋಟದ ಗುಡ್ಡದ ಹಳ್ಳಿ, ಕುದರಗೆರೆ, ಹನುಮಸಾಗರ, ಮಾವಳ್ಳಿಪುರ ರೈತರು ಹೇಳಿದರು.
‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗೆ ಜಮೀನು ನೀಡುವವರಿಗೆ ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ಮಾಡಬೇಕು. ಈ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕು. ಈ ವಿಚಾರವನ್ನು ಸ್ಪಷ್ಟವಾಗಿ ಬಿಡಿಎ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಭಾಗದಲ್ಲಿಎಕರೆ ಜಮೀನಿಗೆ ₹ 10 ಕೋಟಿವರೆಗೂ ಬೆಲೆ ಇದೆ’ ಎಂದು ಸೂಲಿಕುಂಟೆ ರೈತ ಶ್ರೀಧರ್ ಹೇಳಿದರು.
‘ಬಿಡಿಎ ನೀಡುವ ಅಲ್ಪ ಪರಿಹಾರ ತೆಗೆದುಕೊಂಡು ಎಲ್ಲಿಗೆ ಹೋಗುವುದು? ಬಿಡಿಎ ಕಾಯ್ದೆ ಪ್ರಕಾರ ಐದು ವರ್ಷವಾದರೂ ಯೋಜನೆ ಆರಂಭವಾಗದಿದ್ದರೆ ಅಧಿಸೂಚನೆ ರದ್ದುಗೊಳಿಸಿ, ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಬೇಕು. ಯೋಜನೆಗೆ ಹುಡ್ಕೊ ಸಾಲ ನೀಡಲಿದೆ ಎಂದಿದ್ದರು. ಆದರೆ, ಈವರೆಗೂ ಸಾಲ ನೀಡಿಲ್ಲ ಹಾಗೂ ಅಂತಿಮ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಹ ತಯಾರಾಗಿಲ್ಲ’ ಎಂದು ಚೊಕ್ಕಸಂದ್ರ ರೈತ ಗೋಪಾಲರೆಡ್ಡಿ, ಮುಲ್ಲೂರು ಕೃಷ್ಣ ಬೇಸರ ವ್ಯಕ್ತಪಡಿಸಿದರು.
‘ಭೂ ಸ್ವಾಧೀನ ಪಡಿಸಿಕೊಳ್ಳಲು ಗುರುತಿಸಿರುವ 66 ಗ್ರಾಮಗಳ ವ್ಯಾಪ್ತಿಯ ಜಮೀನು ಮಾಲೀಕರ ಅಹವಾಲು ಅಲಿಸಲಾಗಿದೆ. ಒಂದೆರೆಡು ಗ್ರಾಮಗಳ ರೈತರು (ಶೇಕಡ 10ರಷ್ಟು) ಸಂಧಾನ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಬಹುತೇಕ ಮಂದಿ ಕೇಂದ್ರ ಸರ್ಕಾರದ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕು. ಯೋಜನೆ ವಿಳಂಬ ಆಗಿರುವ ಕಾರಣ ಅಧಿಸೂಚನೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಭೆಯ ಮಾಹಿತಿಯನ್ನು ಅಧ್ಯಕ್ಷರ ಗಮನಕ್ಕೆ ತರಲಾಗಿದೆ ’ ಎಂದು ಬಿಡಿಎ ವಿಶೇಷ ಭೂ ಸ್ವಾಧೀನಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ರಸ್ತೆ ನಿರ್ಮಾಣಕ್ಕೆ ಅಡ್ಡಿ ಪಡಿಸುವುದಿಲ್ಲ. ಆದರೆ, ದೇಶದ ಕಾನೂನು ಪ್ರಕಾರ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಯೋಗ್ಯ ಬೆಲೆ ನೀಡಬೇಕು. ಬ್ರಿಟಿಷ್ ಕಾಲದ ಕಾಯ್ದೆ ಅಡಿಯ ಪರಿಹಾರ ಯಾರಿಗೆ ಬೇಕು?. ಯೋಜನೆಗೆ ಅಧಿಸೂಚನೆ ಹೊರಡಿಸಿ ಸೆಪ್ಟೆಂಬರ್ 23ಕ್ಕೆ ಎರಡು ದಶಕ ಆಗಲಿದೆ. ಬಿಡಿಎ ನಿರ್ಮಿಸಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ 30X40 ಚದರ ಅಡಿ ಅಳತೆಯ ನಿವೇಶನದ ದರ ಅಂದಾಜು ₹60 ರಿಂದ ₹70 ಲಕ್ಷ. ವೆಂಕಟಾಲ ಗ್ರಾಮದಲ್ಲಿ ಎಕರೆ ಜಮೀನು ₹56 ಕೋಟಿಗೆ ಮಾರಾಟವಾಗಿದೆ. ಇದು ಉದಾಹರಣೆಯಷ್ಟೇ. ರೈತರ ಜಮೀನಿಗೆ ಬೆಲೆ ಇಲ್ಲವೇ? ಜಮೀನು ಕೊಟ್ಟು ಎಲ್ಲಿಗೆ ಹೋಗಬೇಕು’ ಎಂದು ಪಿಆರ್‌ಆರ್ ರೈತ ಹಾಗೂ ನಿವೇಶನದಾರರ ಸಂಘದ ಅಧ್ಯಕ್ಷ ಮಾವಳ್ಳಿಪುರ ಶ್ರೀನಿವಾಸ್ ಪ್ರಶ್ನಿಸಿದರು.
‘ಯೋಜನೆಗೆ ಭೂಮಿ ನೀಡಲು ಶೇಕಡ 90ರಷ್ಟು ರೈತರ ವಿರೋಧ ಇದೆ. ಒಂದು, ಎರಡು, ಐದು ಗುಂಟೆ ಇರುವವರು ಭೂಮಿ ನೀಡಲು ಒಪ್ಪಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಏಜೆಂಟ್‌ಗಳು ಹಾಗೂ ಮಧ್ಯವರ್ತಿಗಳು ಹಣದ ಆಸೆ ತೋರಿಸಿ ಒಪ್ಪಿಸಿದ್ದಾರೆ. ಸರ್ಕಾರದ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಕಾನೂನು ಹೋರಾಟ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ರೈತರ ಸಭೆ ಕರೆದ ಬಿಡಿಎ
ಪಿಆರ್‌ಆರ್–1 ಯೋಜನೆಗೆ ಸಂಬಂಧಿಸಿದಂತೆ ಈವರೆಗೂ ಆಗಿರುವ ಪ್ರಗತಿ ಕುರಿತು ಮಾಹಿತಿ ನೀಡಲು ಸೆಪ್ಟೆಂಬರ್ 25ರಂದು ಕಚೇರಿ ಸಭಾಂಗಣದಲ್ಲಿ ಪಿಆರ್‌ಆರ್ ರೈತ ಸಂಘ ಹಾಗೂ ಭೂ ಮಾಲೀಕರ ಸಭೆಯನ್ನು ಬಿಡಿಎ ಕರೆದಿದೆ. ಅಧ್ಯಕ್ಷ ಎನ್.ಎ.ಹ್ಯಾರಿಸ್ ಹಾಗೂ ಆಯುಕ್ತ ಪಿ.ಮಣಿವಣ್ಣನ್ ಅವರು ರೈತರು ನಿವೇಶನದಾರರ ಸಂಘದ ಪದಾಧಿಕಾರಿಗಳು ಹಾಗೂ ಭೂಮಾಲೀಕರಿಗೆ ಮಾಹಿತಿ ನೀಡಲಿದ್ದಾರೆ.
ಬ್ಯುಸಿನೆಸ್ ಕಾರಿಡಾರ್ ಮಾರ್ಗ
ತುಮಕೂರು ರಸ್ತೆಯ ಮಾದನಾಯಕಹಳ್ಳಿ ಬಳಿಯ ನೈಸ್ ಜಂಕ್ಷನ್ ಸಮೀಪದಿಂದ ಆರಂಭವಾಗುವ ಬ್ಯುಸಿನೆಸ್ ಕಾರಿಡಾರ್ ಹೆಸರುಘಟ್ಟ ರಸ್ತೆ ದೊಡ್ಡಬಳ್ಳಾಪುರ ರಸ್ತೆ ಬಳ್ಳಾರಿ ರಸ್ತೆ ಹೆಣ್ಣೂರು ಹಳೇ ಮದ್ರಾಸ್ ರಸ್ತೆ ವೈಟ್‌ಫೀಲ್ಡ್ ಚನ್ನಸಂದ್ರ ಸರ್ಜಾಪುರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ತಲುಪಲಿದೆ. ಹೆಸರಘಟ್ಟ ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರ ವೈಟ್‌ಫೀಲ್ಡ್ ಹೊಸೂರು ರಸ್ತೆಗಳಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಹಾಗೂ 395 ಸಣ್ಣ ಜಂಕ್ಷನ್‌ಗಳ ಮೇಲೆ ಪಿಆರ್‌ಆರ್ ಹಾದು ಹೋಗಲಿದೆ. ಜಾರಕಬಂಡೆ ಕೆರೆ ತಿರುಮೇನಹಳ್ಳಿ ಕೆರೆ ಚಿನ್ನಗಾನಹಳ್ಳಿ ಕೆರೆ ಗುಂಜೂರು ಕೆರೆ ಚಿಕ್ಕತೋಗೂರು ಕೆರೆಗಳ ಮೇಲೆ ಸೇರಿದಂತೆ ಒಟ್ಟು 16 ಮೇಲ್ಸೇತುವೆಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.