ADVERTISEMENT

ಬೆಂಗಳೂರು | ಸರ್ಕಾರ, ದೂರಸಂಪರ್ಕ ಸಂಸ್ಥೆಗಳಿಗೆ ವಂಚನೆ: ಇಬ್ಬರ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 11:30 IST
Last Updated 5 ಆಗಸ್ಟ್ 2025, 11:30 IST
<div class="paragraphs"><p>ಎಂ.ಎ.ಫಯಾಜ್‌ ಮತ್ತು&nbsp;ಮಹಮದ್ ಸಫಾಫ್‌&nbsp;</p></div>

ಎಂ.ಎ.ಫಯಾಜ್‌ ಮತ್ತು ಮಹಮದ್ ಸಫಾಫ್‌ 

   

ಬೆಂಗಳೂರು: ಅನಧಿಕೃತವಾಗಿ ಟೆಲಿಫೋನ್ ಎಕ್ಸ್‌ಚೇಂಜ್ ವ್ಯವಸ್ಥೆಯ ಮೂಲಕ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ, ದೂರಸಂಪರ್ಕ ಇಲಾಖೆ, ಸರ್ಕಾರಕ್ಕೆ ವಂಚಿಸುತ್ತಿದ್ದ ಜಾಲದಲ್ಲಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಮಹಮದ್ ಸಫಾಫ್‌ (31) ಹಾಗೂ ಎಂ.ಎ.ಫಯಾಜ್‌ (30) ಬಂಧಿತರು.

ADVERTISEMENT

ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವೊಡಾಫೋನ್‌ ಸೇರಿದಂತೆ ವಿವಿಧ ಕಂಪನಿಗಳ 702 ಸಿಮ್‌ ಕಾರ್ಡ್‌ಗಳು, ಒಂಬತ್ತು ಸಿಮ್‌ ಬಾಕ್ಸ್‌ಗಳು, ಒಂದು ಮೊಬೈಲ್‌, ಆರು ರೌಟರ್‌ಗಳು, ಲ್ಯಾಪ್‌ಟಾಪ್‌ ಅನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹10 ಲಕ್ಷ ಎಂದು ಅಂದಾಜಿಸಿರುವುದಾಗಿ ಸಿಸಿಬಿ ಪೊಲೀಸರು ಹೇಳಿದರು.

ಜುಲೈ 30ರಂದು ಏರ್‌ಟೆಲ್‌ ಲಿಮಿಟೆಡ್‌ನ ನೋಡಲ್‌ ಅಧಿಕಾರಿಯೊಬ್ಬರು ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸಿಸಿಬಿ ಪೊಲೀಸರಿಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು. ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಹಾಗೂ ದೂರಸಂಪರ್ಕ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲಾಗುತ್ತಿದೆ. ಅಲ್ಲದೇ ಮಾನ್ಯತೆ ಇಲ್ಲದೇ ಟೆಲಿಫೋನ್‌ ಎಕ್ಸ್‌ಚೇಂಜ್‌ ನಡೆಸಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

‘ಇದುವರೆಗೆ ನಡೆದ ತನಿಖೆಯಲ್ಲಿ ಸರ್ಕಾರ ಹಾಗೂ ದೂರಸಂಪರ್ಕ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ನಡೆಸಿರುವುದು ಗೊತ್ತಾಗಿದೆ. ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ, ಯಾವುದಾದರೂ ಅಪರಾಧ ಕೃತ್ಯ ಎಸಗಿದ್ದಾರೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಇಮ್ಮಡಿಹಳ್ಳಿಯಲ್ಲಿ ಸಿಮ್‌ ಬಾಕ್ಸ್‌ ಸ್ಥಾಪನೆ: ಸ್ಥಳೀಯ ಕರೆಗಳಾಗಿ ಮಾರ್ಪಡಿಸಲು ಇಮ್ಮಡಿಹಳ್ಳಿಯಲ್ಲಿ ಆರೋಪಿಗಳು ಸಿಮ್‌ ಬಾಕ್ಸ್ ಸ್ಥಾಪಿಸಿದ್ದರು. ಒಬ್ಬ ಆರೋಪಿ ವಿದೇಶದಲ್ಲಿದ್ದರೆ, ಮತ್ತೊಬ್ಬ ಬೆಂಗಳೂರಿನಿಂದ ಕೃತ್ಯಕ್ಕೆ ನೆರವು ನೀಡುತ್ತಿದ್ದ. ವಿದೇಶದಿಂದ ಕೊರಿಯರ್‌ ಮೂಲಕ ಕಳುಹಿಸಲಾದ ಸಿಮ್‌ ಬಾಕ್ಸ್‌ಗಳನ್ನು ಬಳಸಿ ಕೃತ್ಯ ಎಸಗಲಾಗುತ್ತಿತ್ತು. ಇದರಿಂದ ಹವಾಲ ಮೂಲಕ ಬೆಂಗಳೂರಿನಲ್ಲಿದ್ದ ಆರೋಪಿಗೆ ಪ್ರತಿ ತಿಂಗಳು ₹5 ಲಕ್ಷ ಹಣ ಲಭಿಸುತ್ತಿತ್ತು ಎಂದು ಪೊಲೀಸರು ಹೇಳಿದರು.

ವಿದೇಶದಲ್ಲಿ ನೆಲಸಿದ್ದ ಆರೋಪಿ, ಅಲ್ಲಿನ ಕಾರ್ಮಿಕರನ್ನು ಪತ್ತೆಹಚ್ಚುತ್ತಿದ್ದ. ತಮ್ಮ ಕುಟುಂಬದೊಂದಿಗೆ ಮಾತನಾಡಲು ಅಂತರರಾಷ್ಟ್ರೀಯ ಕರೆಗಳಿಗೆ ವೆಚ್ಚ ಹೆಚ್ಚಾಗುತ್ತದೆ ಎಂದು ಅವರಿಗೆ ಹೇಳುತ್ತಿದ್ದ. ಕಡಿಮೆ ದರದಲ್ಲಿ ಕರೆ ಮಾಡಲು ನೆರವು ನೀಡುವುದಾಗಿ ಹೇಳುತ್ತಿದ್ದ ಎಂದು ಪೊಲೀಸರು ಹೇಳಿದರು.

ಹವಾಲ ಮಾರ್ಗದಿಂದ ಹಣ

‘ಐಎಸ್‌ಡಿ ಕರೆಗಳನ್ನು ಸ್ಥಳೀಯ ಕರೆಯಾಗಿ ಪರಿವರ್ತಿಸುವುದು ಅಪರಾಧ. ಬೇರೆ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿರುವ ಭಾರತೀಯರು ತಮ್ಮ ಕುಟುಂಬದವರ ಜತೆಗೆ ಮಾತನಾಡಲು ಐಎಸ್‌ಡಿ ಕರೆಗಳನ್ನು ಬಳಸಬೇಕು. ಈ ಕರೆಗಳ ದರ ಸ್ಥಳೀಯ ಕರೆಗಳಿಗಿಂತ ದುಬಾರಿ. ಕರೆಗಳನ್ನು ಪರಿವರ್ತಿಸುವುದರಿಂದ ಸ್ಥಳೀಯ ಕರೆಗಳ ದರದಲ್ಲೇ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಎರಡೂ ದೇಶಗಳಲ್ಲಿ ಒಂದೇ ತಂತ್ರಜ್ಞಾನ ಬಳಸಿದಾಗ ಮಾತ್ರ ಇದು ಸಾಧ್ಯ. ಈ ಉದ್ದೇಶದಿಂದ ಆರೋಪಿಗಳು ದುಬಾರಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾಯಿಸುತ್ತಿದ್ದರು. ಕೃತ್ಯಕ್ಕೆ ಸಹಕಾರ ನೀಡಿದ ಸ್ಥಳೀಯರಿಗೆ ಹವಾಲದ ಮೂಲಕ ಹಣ ಸಂದಾಯ ಮಾಡುತ್ತಿದ್ದರು’ ಎಂದೂ ಪೊಲೀಸರು ಹೇಳಿದರು. ‘ಸಿಮ್‌ ಬಾಕ್ಸ್‌ ಪಿಆರ್‌ಐ ಮತ್ತು ಎಸ್‌ಐಪಿ ಟ್ರಂಕ್ ಕಾಲ್ ಸಾಧನಗಳನ್ನು ಬಳಸಿ ಸ್ಥಳೀಯ ಕರೆಗಳನ್ನಾಗಿ ವಂಚಕರು ಪರಿವರ್ತಿಸುತ್ತಿದ್ದರು. ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಕಲಿ ಐ.ಪಿ ವಿಳಾಸದ ಸಾಧನಗಳನ್ನು ಬಳಸುತ್ತಿದ್ದರು. ಕರೆಗಳು ಎಲ್ಲಿಂದ ಬರುತ್ತವೆ ಎಂಬುದನ್ನು ಗುರುತಿಸಲು ಸಾಧ್ಯ ಆಗುತ್ತಿರಲಿಲ್ಲ. ಆರೋಪಿಗಳು ವಿವಿಧ ರಾಜ್ಯಗಳಿಂದ ಬಿಎಸ್‌ಎನ್‌ಎಲ್‌ ಸಿಮ್‌ಕಾರ್ಡ್‌ ಖರೀದಿಸುತ್ತಿದ್ದರು. ಸಿಮ್‌ ಬಾಕ್ಸ್ ಉಪಕರಣಗಳಿಗೆ ಅವುಗಳನ್ನು ಅಳವಡಿಸಿ ಬೇರೊಂದು ಕಂಪನಿಯ ಇಂಟರ್‌ನೆಟ್‌ ಬಳಸಿ ವಿದೇಶಿ ಕರೆಗಳನ್ನು ಪರಿವರ್ತನೆ ಮಾಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.

ಆರೋಪಿಗಳಿಂದ ವಶಪಡಿಸಿಕೊಂಡಿರುವ ಸಿಮ್‌ ಕಾರ್ಡ್‌ಗಳನ್ನು ಸೈಬರ್ ಅಪರಾಧಕ್ಕೆ ಬಳಸಿರುವ ಶಂಕೆಯಿದೆ. ಸರ್ಕಾರ ದೂರ ಸಂಪರ್ಕ ಕಂಪನಿಗಳಿಗೆ ಆಗಿರುವ ನಷ್ಟದ ಮೊತ್ತವನ್ನು ಅಂದಾಜಿಸಲಾಗುತ್ತಿದೆ.
–ಸೀಮಂತ್‌ ಕುಮಾರ್ ಸಿಂಗ್‌, ನಗರ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.