ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಹೊಸಕೆರೆಹಳ್ಳಿ ಬಳಿಯ ಈಶ್ವರಿನಗರದಲ್ಲಿ ಮಹಿಳೆಯರಿಬ್ಬರನ್ನು ಮಾರಕಾಸ್ತ್ರಗಳಿಂದ ಬೆದರಿಸಿ, 54 ಗ್ರಾಂ ಚಿನ್ನದ ಆಭರಣ ದೋಚಿ ಪರಾರಿಯಾಗಿದ್ದ ಆರೋಪಿಗಳ ಪೈಕಿ, ಪ್ರವೀಣ್ (28) ಎಂಬಾತನನ್ನು ಗಿರಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಯೋಗಾನಂದ್ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಗೆ ಮಾರಕಾಸ್ತ್ರವಿಟ್ಟು ಆರೋಪಿಗಳು, ಸರಣಿ ಸರ ಕಳ್ಳತನ ಮಾಡಿದ್ದರು. ಆರೋಪಿಗಳಿಂದ 80 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ರಾಮನಗರ ಜಿಲ್ಲೆಯ ಪ್ರವೀಣ್ ಹಾಗೂ ಯೋಗಾನಂದ್ ಇಬ್ಬರೂ ಒಂದೇ ಬೈಕ್‌ನಲ್ಲಿ ತೆರಳಿ ಕಳ್ಳತನ ಮಾಡುತ್ತಿದ್ದರು. ಅಪರಾಧ ಹಿನ್ನೆಲೆಯುಳ್ಳ ಯೋಗಾನಂದ್, ಈ ಹಿಂದೆ ದರೋಡೆ ಪ್ರಕರಣದಲ್ಲಿ ಬಂಧಿತನಾಗಿ ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದ. ಪ್ರವೀಣ್ ಸಹ ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿ ಅದೇ ಜೈಲಿಗೆ ಹೋಗಿದ್ದ. ಆಗ ಅವರಿಬ್ಬರೂ ಪರಿಚಯವಾಗಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಆರೋಪಿಗಳು ಸರಗಳವು ಕೃತ್ಯಕ್ಕೆ ಇಳಿದಿದ್ದರು ಎಂದು ಪೊಲೀಸರು ಹೇಳಿದರು.
ಯೋಗಾನಂದ್ ಮತ್ತು ಪ್ರವೀಣ್, ಸೆ.13ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಾ ಗಿರಿನಗರ, ಹನುಮಂತನಗರ, ಕೋಣನಕುಂಟೆ, ಕೊತ್ತನೂರು, ಇಂದಿರಾನಗರ ಠಾಣೆ ವ್ಯಾಪ್ತಿಯ ವಿವಿಧೆಡೆ ಕೆಲವೇ ತಾಸುಗಳ ಅಂತರದಲ್ಲಿ ಐವರು ಮಹಿಳೆಯರ ಸರಗಳನ್ನು ದೋಚಿದ್ದರು ಎಂದು ಪೊಲೀಸರು ಹೇಳಿದರು.
ಸೆ.13ರಂದು ವರಲಕ್ಷ್ಮಿ ಹಾಗೂ ಅವರ ಸ್ನೇಹಿತೆ ಬಿ.ಎಂ.ಉಷಾ ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಋಷಿಕೇಶ ನಗರದ ನಿವಾಸಿಗಳಾದ ಉಷಾ ಮತ್ತು ವರಲಕ್ಷ್ಮಿ ಅವರು ಈಶ್ವರಿನಗರದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದ ಸ್ಥಳದಲ್ಲಿ ನಡೆಯುತ್ತಿದ್ದ ರಸಮಂಜರಿ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದರು. ಆಗ ಇಬ್ಬರು ಆರೋಪಿಗಳು, ಇಬ್ಬರು ಮಹಿಳೆಯರನ್ನು ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ, ಲಾಂಗ್‍ನಿಂದ ಬೆದರಿಸಿ ಉಷಾ ಅವರ 9 ಗ್ರಾಂ ಚಿನ್ನದ ಸರ ಕಿತ್ತುಕೊಂಡಿದ್ದರು. ನಂತರ, ವರಲಕ್ಷ್ಮಿ ಅವರ ಸರ ಕಿತ್ತುಕೊಳ್ಳಲು ಯತ್ನಿಸಿದ್ದರು. ಇದಕ್ಕೆ ವರಲಕ್ಷ್ಮಿಅವರು ಪ್ರತಿರೋಧ ತೋರಿದಾಗ ದುಷ್ಕರ್ಮಿಗಳು ಅವರ ಬಲಗೈಗೆ ಮಾರಕಾಸ್ತ್ರದಿಂದ ಹೊಡೆದು 45 ಗ್ರಾಂ ಚಿನ್ನದ ಸರ ದೋಚಿ ಪರಾರಿ ಆಗಿದ್ದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.