ADVERTISEMENT

ಬೆಂಗಳೂರು | ₹1.20 ಕೋಟಿ ಮೌಲ್ಯದ ಡ್ರಗ್ಸ್‌ ಕಚ್ಚಾ ವಸ್ತು ವಶ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 16:21 IST
Last Updated 28 ಡಿಸೆಂಬರ್ 2025, 16:21 IST
   

ಬೆಂಗಳೂರು: ಎಎನ್‌ಟಿಎಫ್‌ ಮತ್ತು ಬೆಂಗಳೂರು ಪೊಲೀಸರು ಜಂಟಿಯಾಗಿ ನಗರದ ಕಾರ್ಖಾನೆಯೊಂದರ ಮೇಲೆ ಶನಿವಾರ ದಾಳಿ ನಡೆಸಿ ₹1.20 ಕೋಟಿ ಮೌಲ್ಯದ ಡ್ರಗ್ಸ್ ಕಚ್ಚಾ ವಸ್ತು ಜಪ್ತಿ ಮಾಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಭಾನುವಾರ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ‘ಕಾರ್ಖಾನೆಯಲ್ಲಿ ಯಾವುದೇ ಡ್ರಗ್ಸ್‌ ತಯಾರಿಸುತ್ತಿರಲಿಲ್ಲ. ಡ್ರಗ್ಸ್‌ ತಯಾರಿಕೆಯ ಕಚ್ಚಾ ವಸ್ತು ಯಂತ್ರೋಪಕರಣಗಳು ರಾಸಾಯನಿಕಗಳು ಪತ್ತೆಯಾಗಿವೆ. ದಾಳಿ ವೇಳೆ ₹55.88 ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆಯಾಗಿದೆ ಎಂಬುದಾಗಿ ಎಎನ್‌ಟಿಎಫ್‌ ನೀಡಿರುವ ಹೇಳಿಕೆ ಸತ್ಯಕ್ಕೆ ದೂರ ಎಂದರು.

‘ಮೂರು ಕಡೆ ಡ್ರಗ್ಸ್ ಕಾರ್ಖಾನೆ ಇತ್ತು ಎಂಬುದು ಸುಳ್ಳು. ಕಾರ್ಯಾಚರಣೆ ವೇಳೆ ನಗರದ ಡಿಸಿಪಿ ಸಹ ಎಎನ್‌ಟಿಎಫ್‌ ಪೊಲೀಸರೊಂದಿಗೆ ಇದ್ದರು’ ಎಂದು ಅವರು ಹೇಳಿದರು.

ADVERTISEMENT

‘ಪತ್ತೆಯಾಗಿರುವ ಡ್ರಗ್ಸ್ ರಾಸಾಯನಿಕದ ಮೌಲ್ಯ 1 ಕೆ.ಜಿ.ಗೆ 30 ಲಕ್ಷ. ಒಟ್ಟು 4 ಕೆ.ಜಿ.ಗೆ ₹1.20 ಕೋಟಿ ಆಗುತ್ತದೆ. ಮುಂಬೈನಲ್ಲಿ ಸೆರೆಸಿಕ್ಕ ಆರೋಪಿಯು ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ನಗರ ಪೊಲೀಸ್ ಮುಂಬೈ ಪೊಲೀಸ್ ಎನ್‌ಸಿಬಿ ಸೋಕೋ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಆರೋಪಿಯು ಡ್ರಗ್ಸ್ ತಯಾರಿಸಲು ಬೇಕಾದ ಮೆಫೆಡ್ರೋನ್ ಎಂಬ ರಾಸಾಯನಿಕ ಸಂಗ್ರಹಿಸಿಟ್ಟುಕೊಂಡಿದ್ದ. ಈ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ‌ ಎಂಬುದು ಸರಿಯಲ್ಲ ಎಂದರು.

‘ಅನೇಕ‌ ಸಂದರ್ಭಗಳಲ್ಲಿ ಪೊಲೀಸರು ತಮ್ಮ ರಾಜ್ಯದಲ್ಲಿ ಸೆರೆಸಿಕ್ಕ ಆರೋಪಿಗಳು ನೀಡುವ ಮಾಹಿತಿ ಆಧರಿಸಿ ಬೇರೆ ರಾಜ್ಯಗಳಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಾರೆ. ಈಗಾಗಲೇ ಬೇರೆ ಬೇರೆ ಪ್ರಕರಣಗಳಲ್ಲಿ ನಮ್ಮ ಪೊಲೀಸರ ನಾಲ್ಕು ತಂಡಗಳು ಬೇರೆ ರಾಜ್ಯಗಳಲ್ಲೂ ಮಾಹಿತಿ ಸಂಗ್ರಹಿಸುತ್ತಿವೆ‌. ಆಗ ಅಲ್ಲಿನ ಪೊಲೀಸರ ವೈಫಲ್ಯ ಎಂದು ಹೇಳಲಾಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಬೆಂಗಳೂರಿನಲ್ಲಿ ಮುಂದೆ ಇಂತಹ ಘಟನೆ ಆಗಬಾರದು. ಡಿಸಿಪಿ ಎಸಿಪಿ ಅಥವಾ ಸ್ಥಳೀಯ ಅಧಿಕಾರಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅಮಾನತು ಅಷ್ಟೇ ಅಲ್ಲದೇ ಬೇರೆ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ’ ಎಂದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್ ವಂಶಿಕೃಷ್ಣ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.