ADVERTISEMENT

ಬೆಂಗಳೂರು: ನಗರದಲ್ಲಿ ಹಸಿರು ಹೊದಿಕೆ ಇಳಿಕೆ

ವಾಯುಮಾಲಿನ್ಯದ ಗಾಯಕ್ಕೆ ಕಂಟೋನ್ಮೆಂಟ್‌ನಲ್ಲಿ ಮರ ಕಡಿದು ಉಪ್ಪು ಸವರಲು ಮುಂದಾದ ಜಿಬಿಎ: ಆರೋಪ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯ 368 ಮರಗಳನ್ನು ಉಳಿಸಲು ಪರಿಸರ ಕಾರ್ಯಕರ್ತರು ಭಾನುವಾರ ಮರಗಳಿಗೆ ಪೋಸ್ಟರ್‌ ಅಂಟಿಸಿ ಅಭಿಯಾನ ನಡೆಸಿದರು.
ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯ 368 ಮರಗಳನ್ನು ಉಳಿಸಲು ಪರಿಸರ ಕಾರ್ಯಕರ್ತರು ಭಾನುವಾರ ಮರಗಳಿಗೆ ಪೋಸ್ಟರ್‌ ಅಂಟಿಸಿ ಅಭಿಯಾನ ನಡೆಸಿದರು.   

ಬೆಂಗಳೂರು: ನಗರದಲ್ಲಿ 50 ವರ್ಷಗಳ ಹಿಂದೆ ಶೇ 68.2ರಷ್ಟು ಇದ್ದ ಹಸಿರು ಹೊದಿಕೆ ಈಗ ಶೇ 3ಕ್ಕೆ ಇಳಿದಿದೆ. ಪರಿಸ್ಥಿತಿ ಹೀಗಿರುವಾಗಲೇ ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯ ಮರಗಳನ್ನು ಕಡಿಯಲು ಮುಂದಾಗಿರುವುದು ಪರಿಸರಕ್ಕೆ ಇನ್ನಷ್ಟು ಹಾನಿ ಉಂಟು ಮಾಡಲಿದೆ ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆ ತಿಳಿಸಿದೆ. 

ಭಾರತೀಯ ವಿಜ್ಞಾನ ಸಂಸ್ಥೆಯು 1973ರಿಂದ 2023ರ ನಡುವೆ ಬೆಂಗಳೂರಿನ ಪರಿಸರದಲ್ಲಿ ಆಗಿರುವ ಬದಲಾವಣೆಗಳಿಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಸಂಶೋಧನಾ ವರದಿಯಲ್ಲಿ ಹಸಿರು ಹೊದಿಕೆಯ ಪ್ರಮಾಣ ದಾಖಲಾಗಿದೆ. ವಾಯು ಮಾಲಿನ್ಯಕ್ಕೆ ದೂಳಿನ ಕಣಗಳ ಕೊಡುಗೆ ಶೇ 51ರಷ್ಟು ಇದೆ. ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದೇ ದೂಳಿನ ಕಣಗಳು ಅಧಿಕಗೊಳ್ಳಲು ಕಾರಣವಾಗಿದೆ. ಒಬ್ಬ ವ್ಯಕ್ತಿಗೆ ಏಳು ಮರ ಇರಬೇಕು. ಆದರೆ, ಬೆಂಗಳೂರಿನ ಜನಸಂಖ್ಯೆ 1.5 ಕೋಟಿ ಇದ್ದರೆ, ಮರಗಳ ಸಂಖ್ಯೆ ಕೇವಲ 75 ಲಕ್ಷ ಇದೆ. ಬೆಂಗಳೂರಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.

ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಜಗತ್ತಿನ ಜೀವ ಸಂಕುಲವನ್ನು ತೀವ್ರವಾಗಿ ಬಾಧಿಸುತ್ತಿವೆ. ಇದರ ಪರಿಣಾಮ ಬೆಂಗಳೂರಿನಲ್ಲಿಯೂ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಗಿಡ, ಮರಗಳನ್ನು ಉಳಿಸಿಕೊಂಡು ಇನ್ನೂ ಹೆಚ್ಚಿನ ಗಿಡಗಳನ್ನು ಬೆಳೆಸುವುದು ಅನಿವಾರ್ಯ. ಆದರೆ, ನಗರದಲ್ಲಿ ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯಲ್ಲಿ ನೂರಾರು ವರ್ಷಗಳ ಇತಿಹಾಸ ಇರುವ 368 ಮರಗಳನ್ನು ಕಡಿದು ಕಟ್ಟಡ ಕಟ್ಟಲು ಮುಂದಾಗಿರುವುದು ವಿಪರ‍್ಯಾಸ. ನೂರಾರು ವರ್ಷಗಳ ಹಳೆಯ ಮರಗಳನ್ನು ಕಡಿದು ಕಟ್ಟಡ ಕಟ್ಟುವ ಬದಲಿಗೆ ಮರಗಳನ್ನು ಉಳಿಸಿ ಬೇರೆ ಜಾಗದಲ್ಲಿ ಕಟ್ಟಡ ಕಟ್ಟುವುದು ಸರಿಯಾದ ನಿರ್ಧಾರ ಎಂದು ಹೇಳಿದೆ.

ADVERTISEMENT

ಮರಗಳನ್ನು ಕಡಿಯುವ ನೈರುತ್ಯ ರೈಲ್ವೆಯ ತೀರ್ಮಾನ ವಿರೋಧಿಸಿ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಂದ 10,700 ಆಕ್ಷೇಪಣೆಗಳು ಬಂದಿವೆ. ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎ.ಟಿ ರಾಮಸ್ವಾಮಿ ನೇತೃತ್ವದಲ್ಲಿ, ಇದೇ ಜಾಗದಲ್ಲಿ ವೃಕ್ಷ ರಕ್ಷಾ ಅಭಿಯಾನ ಆಯೋಜಿಸಲಾಗಿತ್ತು. ಸುಪ್ರೀಂ ಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು, ಐವರು ಮಠಾಧೀಶರು, ಎಸ್. ಆರ್. ಹಿರೇಮಠ, ನಾಗೇಶ ಹೆಗಡೆ, ಹಂಪ ನಾಗರಾಜಯ್ಯ , ಕಾಳೇಗೌಡ ನಾಗವಾರ, ಇಂದೂಧರ ಹೊನ್ನಾಪುರ , ಚಂದ್ರಕಾಂತ ವಡ್ಡು, ವಿ. ನಾಗರಾಜ್, ಆಂಜನಪ್ಪ, ರವೀಂದ್ರನಾಥ ಸಿರಿವರ, ಗುಂಡಣ್ಣ ಸೇರಿದಂತೆ ಪರಿಸರ ಕಾಳಜಿಯುಳ್ಳ ನೂರಾರು ಜನರು ಭಾಗಿಯಾಗಿದ್ದರು. ಪ್ರಧಾನಿ, ರೈಲ್ವೆ ಸಚಿವರು, ಅರಣ್ಯ ಸಚಿವರು, ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆಯಲಾಗಿತ್ತು ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದರ ಪರಿಣಾಮ ಅರಣ್ಯ ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  ರಾಜ್ಯ ಜೀವವೈವಿಧ್ಯ ಮಂಡಳಿಯ ಸಭೆಯಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಕಾಲೊನಿ ಪ್ರದೇಶವನ್ನು ‘ಜೀವವೈವಿಧ್ಯ ತಾಣ’ ಎಂದು ಘೋಷಿಸಿ, ಅದಕ್ಕೆ ಬೇಕಾದ ಪ್ರಕ್ರಿಯೆ ನಡೆಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಅಲ್ಲಿಯವರೆಗೆ ಮರ ಕಡಿಯಲು ಅನುಮತಿ ನೀಡಬಾರದು ಎಂದು ನಿರ್ದೇಶಿಸಿದ್ದರು. ಈಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಇದಕ್ಕೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.