ಬೆಂಗಳೂರು: ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ನೆಲ ಅಂತಸ್ತನ್ನು ‘ಸ್ಟಿಲ್ಟ್ ಫ್ಲೋರ್’ ಆಗಿ ಪರಿಗಣಿಸಿ, ಸಂಪೂರ್ಣವಾಗಿ ವಾಹನ ನಿಲುಗಡೆಗೆ ಮೀಸಲಿಡುವ ನಿಯಮಗಳು ಜಾರಿಯಾಗಿವೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ ಸೆಕ್ಷನ್ 13–ಇಗೆ ತಿದ್ದುಪಡಿಯಾಗಿ, ಪರಿಷ್ಕೃತ ಮಾಸ್ಟರ್ ಪ್ಲಾನ್–2015ರ ವಲಯ ನಿಯಮಗಳಿಗೆ ‘ಬೆಂಗಳೂರು ಸ್ಥಳೀಯ ಯೋಜನಾ ಪ್ರಾಧಿಕಾರ (ತಿದ್ದುಪಡಿ) ನಿಯಮಗಳು– 2025’ ಜಾರಿಯಾಗಿವೆ.
2025ರ ಜೂನ್ 12ರಂದು ಕರಡು ಆದೇಶ ಹೊರಡಿಸಿದ್ದ ನಗರಾಭಿವೃದ್ಧಿ ಇಲಾಖೆ, ಆಕ್ಷೇಪಣೆಗೆ ನೀಡಿದ್ದ 30 ದಿನದ ಅವಕಾಶ ಮುಗಿದ ಮೇಲೆ ಅವುಗಳನ್ನು ಪರಿಗಣಿಸಿ ಆಗಸ್ಟ್ 1ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ.
ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ನಿರ್ಮಿಸಿರುವ, ನಿರ್ಮಾಣ ಹಂತದಲ್ಲಿರುವ ಹಾಗೂ ಮುಂದೆ ನಿರ್ಮಾಣವಾಗಲಿರುವ ಕಟ್ಟಡಗಳಲ್ಲಿನ ನೆಲ ಅಂತಸ್ತನ್ನು ‘ಸ್ಟಿಲ್ಟ್ ಪಾರ್ಕಿಂಗ್ ಫ್ಲೋರ್’ ಎಂದು ಪರಿಗಣಿಸಿ, ಅದರ ಎತ್ತರವನ್ನು ಮೂರು ಮೀಟರ್‌ಗೆ ನಿಗದಿಪಡಿಸಲಾಗಿದೆ. ಈ ‘ಸ್ಟಿಲ್ಟ್ ಪಾರ್ಕಿಂಗ್ ಫ್ಲೋರ್’ ಅನ್ನು ಪಾರ್ಕಿಂಗ್‌ಗೆ ಬಳಸುವುದರಿಂದ ಕಟ್ಟಡದ ಒಟ್ಟಾರೆ ಎತ್ತರದಲ್ಲಿ ಪರಿಗಣಿಸಬಾರದು. ಕಟ್ಟಡದ ಒಟ್ಟಾರೆ ಎತ್ತರ 15 ಮೀಟರ್ ಮೀರಬಾರದು. ಅದರಂತೆಯೇ ನಕ್ಷೆ ಅನುಮೋದನೆ ಅಥವಾ ಪರಿಷ್ಕೃತ ನಕ್ಷೆ ನೀಡಲು ಹೊಸ ನಿಯಮಗಳು ಅವಕಾಶ ಮಾಡಿಕೊಟ್ಟಿವೆ.
ನೆಲ ಅಂತಸ್ತನ್ನು ಪಾರ್ಕಿಂಗ್‌ಗೆ ಮೀಸಲಿಟ್ಟ ಕಟ್ಟಡಕ್ಕೆ ಸೆಟ್‌ಬ್ಯಾಕ್‌ನಲ್ಲಿ ರಿಯಾಯಿತಿ ನೀಡಿ ನಾಲ್ಕನೇ ಅಂತಸ್ತನ್ನು (ಜಿ+4) ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಜಿ+3 ಕಟ್ಟಡ ನಿರ್ಮಿಸಿರುವವರು ನೆಲ ಅಂತಸ್ತನ್ನು ಸಂಪೂರ್ಣವಾಗಿ ಪಾರ್ಕಿಂಗ್‌ಗೆ ಮೀಸಲಿಟ್ಟರೆ, ಅವರಿಗೆ ಇನ್ನೊಂದು ಅಂತಸ್ತು ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಪಾರ್ಕಿಂಗ್ ಅಂತಸ್ತನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಿದರೆ, ಬೆಸ್ಕಾಂ, ಜಲಮಂಡಳಿ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ವಸತಿಯೇತರ ಕಟ್ಟಡಗಳಲ್ಲಿ ಪಾರ್ಕಿಂಗ್ ಜಾಗವನ್ನು ದುರುಪಯೋಗಪಡಿಸಿಕೊಂಡರೆ ಉದ್ದಿಮೆ ಪರವಾನಗಿಯನ್ನೂ ರದ್ದುಗೊಳಿಸಲಾಗುತ್ತದೆ.
‘ಸ್ಟಿಲ್ಟ್ ಪಾರ್ಕಿಂಗ್ ಫ್ಲೋರ್’ ಅವಕಾಶ ಜಾರಿಯಾಗುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ 2025ರ ಜೂನ್ 3ರಂದು ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.