ADVERTISEMENT

ಸಾರ್ವಜನಿಕ ಸಾರಿಗೆ ಮೆಟ್ರೊ ಪ್ರಯಾಣ ದರ ಏರಿಸುವ ಅಗತ್ಯವಿತ್ತೇ?: ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 0:12 IST
Last Updated 11 ಫೆಬ್ರುವರಿ 2025, 0:12 IST
<div class="paragraphs"><p>ಮೆಟ್ರೊ</p></div>

ಮೆಟ್ರೊ

   

– ಪ‍್ರಜಾವಾಣಿ ಚಿತ್ರ

‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಎಷ್ಟು ಹೆಚ್ಚಳ ಮಾಡಿದೆ ಎಂಬ ಬಗ್ಗೆ ಲೆಕ್ಕಾಚಾರ ಇಲ್ಲದೇ ಮೆಟ್ರೊದಲ್ಲಿ ಪ್ರಯಾಣಿಸಿದಾಗ ಬೆಲೆ ದುಪ್ಪಟ್ಟಾಗಿರುವುದನ್ನು ಕಂಡು ಪ್ರಯಾಣಿಕರು ಅವಕ್ಕಾಗಿದ್ದಾರೆ. ದುಬಾರಿ ದರ ನಿಗದಿ ಮಾಡಿರುವುದನ್ನು ಖಂಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಸಾರ್ವಜನಿಕ ಸಾರಿಗೆಯಾಗಿರುವ ಮೆಟ್ರೊ ಪ್ರಯಾಣ ದರ ಏರಿಕೆ ಮಾಡುವ ಅಗತ್ಯವಿತ್ತೇ? ಬೆಂಗಳೂರಿಗರ ನಾಡಿಮಿಡಿತವಾಗಿರುವ ಮೆಟ್ರೊದಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ದರ ಏರಿಕೆ ಮಾಡಿರುವುದರಿಂದ ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರಿಗೆ ಹೊರೆಯಾಗಿದೆ. ಕೆಲ ಮಾರ್ಗಗಳಲ್ಲಿ ಶೇಕಡ 80ಕ್ಕಿಂತ ಹೆಚ್ಚು ದರ ಏರಿಕೆಯಾಗಿದೆ. ಟೋಕನ್‌ ಮೂಲಕ ಪ್ರಯಾಣಿಸುವವರಿಗೆ ಶೇ 50ರಷ್ಟು ಅಧಿಕವಾದರೆ, ಸ್ಮಾರ್ಟ್‌ ಕಾರ್ಡ್‌ ಮೂಲಕ ಪ್ರಯಾಣಿಸುವವರಿಗೆ ಶೇ 45ರಷ್ಟು ದರ ಹೆಚ್ಚಾಗಿದೆ. ಕೂಡಲೇ ಈ ದರಗಳನ್ನು ಪರಿಷ್ಕರಿಸಬೇಕು. 
ಅರ್ಚನಾ ಆರ್., ಸಹಾಯಕ ಪ್ರಾಧ್ಯಾಪಕಿ

ಅರ್ಚನಾ ಆರ್.

ADVERTISEMENT
ನಮ್ಮ ಮೆಟ್ರೊ ‘ನಿಮ್ಮ’ ಮೆಟ್ರೊ ಎನ್ನುವಂತಾಗಿದೆ. ಇಷ್ಟೊಂದು ದರ ಏರಿಸಲು ಕಾರಣಗಳೇನು ಎಂದು ಸರ್ಕಾರ ಜನಸಾಮಾನ್ಯರಿಗೆ ತಿಳಿಸಬೇಕು. ಮೆಟ್ರೊ ಪ್ರಯಾಣಿಕರೆಲ್ಲರೂ ಇದರ ವಿರುದ್ಧ ಬೃಹತ್ ವಿರೋಧ ದಾಖಲಿಸಬೇಕು. ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆಂದು ಪ್ರಚಾರ ಗಿಟ್ಟಿಸಿಕೊಳ್ಳುವ ಸರ್ಕಾರಗಳು, ಇನ್ನೊಂದೆಡೆ ಜನಸಾಮಾನ್ಯರನ್ನು ಹಗಲು ದರೋಡೆ ಮಾಡುತ್ತಿವೆ. ಪ್ರತಿದಿನ ಮೆಟ್ರೊ ಅವಲಂಬಿಸಿರುವ ದುಡಿಯುವ ವರ್ಗಕ್ಕೆ ಇದು ಅತಿ ದೊಡ್ಡ ಹೊಡೆತವಾಗಿದೆ.
ಅಣೇಕಟ್ಟೆ ವಿಶ್ವನಾಥ್, ಚಿಕ್ಕಬಾಣಾವರ

ಅಣೇಕಟ್ಟೆ ವಿಶ್ವನಾಥ್, ಚಿಕ್ಕಬಾಣಾವರ

ಸಾರ್ವಜನಿಕ ಸಾರಿಗೆ ಲಾಭಗಳಿಸುವ ಉದ್ದೇಶದಿಂದ ಸೇವೆ ನೀಡುವುದಲ್ಲ. ವಾಹನಗಳ ಸಂಖ್ಯೆ ಏರಿಕೆಯಿಂದ ಬೆಂಗಳೂರಿನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದೀಗ ಮೆಟ್ರೊ ತುಟ್ಟಿಯಾಗಿದ್ದು, ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ರಾಜರಾಜೇಶ್ವರಿ ನಗರದಿಂದ ಮಹಾತ್ಮ ಗಾಂಧಿ ರಸ್ತೆವರೆಗಿನ ಪ್ರಯಾಣ ದರ ಬಹುತೇಕ ದುಪ್ಪಟ್ಟಾಗಿದೆ. ತಿಂಗಳ ಬಜೆಟ್‌ನಲ್ಲಿ ಮೆಟ್ರೊ ಟಿಕೆಟ್‌ಗೆ ಹಣ ಎತ್ತಿಡುವುದು ಈಗ ದೊಡ್ಡ ತಲೆನೋವಾಗಿದೆ. ಈ ಪ್ರಮಾಣದ ದರ ಏರಿಕೆ ನಿಜಕ್ಕೂ ಅಮಾನವೀಯ.
ಆಶಿಕಾ ಬಿ. ರಾಜರಾಜೇಶ್ವರಿ ನಗರ

ಆಶಿಕಾ ಬಿ. ರಾಜರಾಜೇಶ್ವರಿ ನಗರ

ನಾನು ನಿತ್ಯ ಕಬ್ಬನ್ ಉದ್ಯಾನ ಮೆಟ್ರೊ ನಿಲ್ದಾಣದಿಂದ ಜಯನಗರಕ್ಕೆ ಪ್ರಯಾಣಿಸುತ್ತೇನೆ. ₹ 30 ಇದ್ದ ಪ್ರಯಾಣ ದರ ಈಗ ₹ 50ಕ್ಕೆ ಏರಿಕೆಯಾಗಿದೆ. ಈ ಪ್ರಮಾಣದ ದರ ಹೆಚ್ಚಳ ನಿಜಕ್ಕೂ ಅಚ್ಚರಿಯಾಗಿದೆ. ಇದು ಸಾರ್ವಜನಿಕ ಸಾರಿಗೆ ಬಳಕೆಯನ್ನು ನಿರುತ್ಸಾಹಗೊಳಿಸುತ್ತದೆ. ಇದರಿಂದ ಸಂಚಾರ ಸಮಸ್ಯೆ ಇನ್ನಷ್ಟು ಹೆಚ್ಚಳವಾಗುತ್ತದೆ. ಹಣದುಬ್ಬರದ ಜೊತೆಗೆ ಈ ದರ ಏರಿಕೆಯನ್ನೂ ಸಹಿಸಿಕೊಳ್ಳಬೇಕಾಗಿದೆ. ನಮ್ಮಂತಹ ಮಧ್ಯಮ ವರ್ಗಕ್ಕೆ ಇದು ದೊಡ್ಡ ಬರೆ. ಈಗ ಮೆಟ್ರೊಗಿಂತ ದ್ವಿಚಕ್ರ ಪ್ರಯಾಣವೇ ಉತ್ತಮ.
ರಾಶಿದ್ ಅಹ್ಮದ್, ಆರ್‌.ಟಿ. ನಗರ

ರಾಶಿದ್ ಅಹ್ಮದ್

ಮೆಟ್ರೊ ದರ ಹೆಚ್ಚಳ ಮಾಡುವ ಅಗತ್ಯವಿರಲಿಲ್ಲ. ಮೆಟ್ರೊ ದರವನ್ನು ₹5 ಅಥವಾ ₹10 ಹೆಚ್ಚಿಸದೇ ಶೇಕಡ 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ದರ ಹೆಚ್ಚಳ ಮಾಡಲಾಗಿದೆ. ಕೆಲ ಭಾಗಗಳಲ್ಲಿ ಶೇ 100ರಷ್ಟು ಹೆಚ್ಚಳವಾಗಿದೆ. ಸಮಯ ಉಳಿಸಲು ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದೇವೆ. ಈಗ ದರ ಏರಿಕೆ ಮಾಡಿರುವುದು ನಮಗೆ ಬಹಳ ಬೇಸರ ತಂದಿದೆ. ಈಗ ಮೆಟ್ರೊ ಪ್ರಯಾಣ ಬಿಟ್ಟು ಆಟೊದಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಸುಷ್ಮಾ, ಆರ್‌.ಟಿ. ನಗರ

ಸುಷ್ಮಾ

ಮೆಟ್ರೊ ಪ್ರಯಾಣ ದರದಲ್ಲಿ ಶೇಕಡ 10 ರಿಂದ 15ರಷ್ಟು ಹೆಚ್ಚಳ ಮಾಡಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ನಮ್ಮ ಮೆಟ್ರೊದವರು ಅತಿಹೆಚ್ಚು ಪ್ರಮಾಣದ ಪ್ರಯಾಣ ದರ ಏರಿಕೆ ಮಾಡಿದ್ದರಿಂದ ಮಧ್ಯಮ ವರ್ಗದವರಿಗೆ ಹೊರೆ ಆಗಲಿದೆ. ಸಂಬಳದಲ್ಲಿ ಮೆಟ್ರೊ ಪ್ರಯಾಣಕ್ಕೆ ಎಂದು ಇಂತಿಷ್ಟು ಹಣ ಎತ್ತಿ ಇಡಲಾಗುತ್ತಿತ್ತು. ದಿಢೀರನೆ ಪ್ರಯಾಣ ದರ ಏರಿಕೆ ಮಾಡಿರುವುದು ಸರಿಯಲ್ಲ.
ಹರಿಪ್ರಸಾದ್, ಎಲೆಕ್ಟ್ರಾನಿಕ್ ಸಿಟಿ

ಹರಿಪ್ರಸಾದ್, ಎಲೆಕ್ಟ್ರಾನಿಕ್ ಸಿಟಿ

ದಾಸರಹಳ್ಳಿ ಮೆಟ್ರೊ ನಿಲ್ದಾಣದಿಂದ ಮಹಾತ್ಮ ಗಾಂಧಿ ರಸ್ತೆ ಮೆಟ್ರೊ ನಿಲ್ದಾಣಕ್ಕೆ ಈ ಹಿಂದೆ ₹42.72 ಪ್ರಯಾಣ ದರ ಇತ್ತು. ಈಗ ₹ 70 ನೀಡುತ್ತಿದ್ದೇನೆ. ನನಗೆ ಬರುವ  ಸಂಬಳದ ಅರ್ಧ ಭಾಗ ಮೆಟ್ರೊ ಪ್ರಯಾಣಕ್ಕೆ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಮೆಟ್ರೊ ಪ್ರಯಾಣಕ್ಕೆ ತಿಂಗಳಿಗೆ ₹3 ಸಾವಿರ ಖರ್ಚಾಗುತ್ತಿತ್ತು. ಈಗ ₹5 ಸಾವಿರಕ್ಕೂ ಹೆಚ್ಚು ಖರ್ಚಾಗಲಿದೆ. ನಾವು ದುಡಿಯುವ ಹಣ ಮೆಟ್ರೊ ಪ್ರಯಾಣಕ್ಕೆ ಖರ್ಚಾಗಿ ಉಳಿತಾಯವೇ ಇಲ್ಲದಂತಾಗಲಿದೆ. ದರ ಏರಿಕೆ ಪ್ರತಿಯೊಬ್ಬರಿಗೂ ಹೊರೆಯಾಗಿ ಪರಿಣಮಿಸಿದೆ.
ಲಕ್ಷ್ಮಿ, ದಾಸರಹಳ್ಳಿ

ಲಕ್ಷ್ಮಿ, ದಾಸರಹಳ್ಳಿ

ಮೆಟ್ರೊ ಶೇಕಡ 50ರಷ್ಟು ದರ ಹೆಚ್ಚಳ ಮಾಡುವ ಮೂಲಕ ಪ್ರಯಾಣಿಕರಿಗೆ ಅನ್ಯಾಯ ಮಾಡಿದೆ. ಕೆಲ ದಿನಗಳ ಹಿಂದೆ ಬಸ್‌ ಪ್ರಯಾಣ ದರ ಏರಿಸಲಾಗಿತ್ತು. ಈಗ ಮೆಟ್ರೊ ಪ್ರಯಾಣ ದರ ಹೆಚ್ಚಿಸಲಾಗಿದೆ. ಮಧ್ಯಮ ವರ್ಗದವರು ಹೆಚ್ಚಾಗಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದು, ಮತ್ತೊಂದು ಆರ್ಥಿಕ ಹೊರೆ ನಿಭಾಯಿಸುವ ಸವಾಲು ಎದುರಾಗಿದೆ. ಬೆಂಗಳೂರಿನಲ್ಲಿ ಜೀವನ ವೆಚ್ಚ ಅಧಿಕವಾಗುತ್ತಿದೆ.
ಅರುಣಕುಮಾರ್, ವಿಜಯನಗರ

ಅರುಣಕುಮಾರ್, ವಿಜಯನಗರ

ನಮ್ಮ ಮೆಟ್ರೊ ದರ ಹೆಚ್ಚಳ ದೆಹಲಿ ರಾಜ್ಯದ ಚುನಾವಣೆಯ ನಂತರ ಕೇಂದ್ರ ಸರ್ಕಾರ ಬೆಂಗಳೂರಿಗರಿಗೆ ನೀಡುತ್ತಿರುವ ಕೊಡುಗೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ನಿಲುವಗಳನ್ನು ಸ್ಪಷ್ಟಪಡಿಸುತ್ತಿದೆ. ಬಿಎಂಆರ್‌ಸಿಎಲ್‌ ತನ್ನ ಹೇಳಿಕೆಯಲ್ಲಿ ದೆಹಲಿ ಚುನಾವಣೆಯ ನಿಮಿತ್ತ ದರ ಏರಿಕೆ ಮಾಡಿಲ್ಲವೆಂದು ಹೇಳಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಜಗದೀಶ್ ವಿ. ಸದಂ, ಆಮ್‌ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ
ನಮ್ಮ ಮೆಟ್ರೊ ಪ್ರಯಾಣ ದರವನ್ನು ಶೇಕಡ 70ರಷ್ಟು ಹೆಚ್ಚಿಸುವ ಮೂಲಕ ಎಲ್ಲ ದಾಖಲೆಗಳನ್ನು ಮುರಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ಹಿತಾಸಕ್ತಿಗಳ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಮೆಟ್ರೊ ಪ್ರಯಾಣ ದರ ಹೆಚ್ಚಿಸುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಮೆಟ್ರೊ ಪ್ರಯಾಣವನ್ನು ಜನಸ್ನೇಹಿ ಮಾಡುವ ಬದಲು ಖಾಸಗಿ ಸಂಸ್ಥೆಗಳನ್ನು ಆಕರ್ಷಿಸಲು ಸರ್ಕಾರಗಳು ಸಜ್ಜಾಗಿವೆ. ಮೆಟ್ರೊ ಪ್ರಯಾಣ ದರ ಏರಿಕೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು. 
ಎಂ.ಎನ್. ಶ್ರೀರಾಮ್, ಸೊಷಿಯಲಿಸ್ಟ್‌ ಯೂನಿಟಿ ಆಫ್‌ ಇಂಡಿಯಾ (ಕಮ್ಯೂನಿಸ್ಟ್‌) ಬೆಂಗಳೂರು ಜಿಲ್ಲಾ ಕಾರ್ಯದರ್ಶಿ

ಅಭಿಪ್ರಾಯ ಕಳುಹಿಸಿ

ಮೆಟ್ರೊ ಪ್ರಯಾಣ ದರ ಏರಿಕೆಯ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 50 ಪದಗಳ ಮಿತಿಯಲ್ಲಿ ಈ ಕೆಳಗಿನ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಕಳುಹಿಸಬಹುದು. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ವಾಟ್ಸ್‌ಆ್ಯಪ್‌ ಸಂಖ್ಯೆ: 96060 38256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.