ADVERTISEMENT

Bengaluru Stampede: ಡಿಎನ್‌ಎ, ಆರ್‌ಸಿಬಿಯ ನಾಲ್ವರ ಬಂಧನ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸೆರೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 4:12 IST
Last Updated 6 ಜೂನ್ 2025, 4:12 IST
<div class="paragraphs"><p>ಆರ್‌ಸಿಬಿ ಸಂಭ್ರಮಾಚರಣೆ ಹಾಗೂ ‌ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಚಿತ್ರಗಳು</p></div>

ಆರ್‌ಸಿಬಿ ಸಂಭ್ರಮಾಚರಣೆ ಹಾಗೂ ‌ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಚಿತ್ರಗಳು

   

ಕೃಪೆ: ಪಿಟಿಐ

ಬೆಂಗಳೂರು: ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (ಆರ್‌ಸಿಬಿ) ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಉಂಟಾದ ಸಾವು–ನೋವು ಪ್ರಕರಣ ಸಂಬಂಧ ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್‌ಎ ಮ್ಯಾನೇಜ್‌ಮೆಂಟ್ (ಇವೆಂಟ್‌ ಮ್ಯಾನೇಜ್‌ಮೆಂಟ್‌) ಸಿಬ್ಬಂದಿ ಸುನಿಲ್ ಮ್ಯಾಥ್ಯು, ಕಿರಣ್ ಮತ್ತು ಸುಮಂತ್ ಎಂಬವರನ್ನು ಕೇಂದ್ರ ಅಪರಾಧ ದಳ ಹಾಗೂ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ 41ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳಿಗೆ ಜೂನ್‌ 19ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಘಟನೆಗೆ ಕಾರಣರಾದವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ ಬೆನ್ನಲ್ಲೇ ವಿಮಾನದ ಮೂಲಕ ಮುಂಬೈಗೆ ಪ್ರಯಾಣಿಸಲು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಲ್ವರು ಆರೋಪಿಗಳು ತೆರಳಿದ್ದರು. ಸಿಸಿಬಿ ಹಾಗೂ ಕಬ್ಬನ್‌ ಪಾರ್ಕ್ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.

ಠಾಣೆಯಲ್ಲಿ ವಿಚಾರಣೆ: ಬಂಧಿತ ನಾಲ್ವರೂ ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶೇಷಾದ್ರಿಪುರ ವಿಭಾಗದ ಎಸಿಪಿ ಪ್ರಕಾಶ್ ಅವರು ಪ್ರಾಥಮಿಕ ವಿಚಾರಣೆ ನಡೆಸಿದರು. ಆರೋಪಿಗಳ ಹೇಳಿಕೆ ದಾಖಲಿಸಿಕೊಂಡರು.

‘ಪೊಲೀಸರು ಅನುಮತಿ ನಿರಾಕರಿಸಿದ್ದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೂ ವಿಜಯೋತ್ಸವ ಮೆರವಣಿಗೆ ನಡೆಸಲಾಗುವುದು ಎಂದು ನಿಖಿಲ್ ಸೋಸಲೆ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ ಬಳಿಕ ಅಳಿಸಿ ಹಾಕಿದ್ದರು. ಅಲ್ಲದೇ ಕ್ರೀಡಾಂಗಣದಲ್ಲಿ ನಡೆಯುವ ವಿಜಯೋತ್ಸವಕ್ಕೂ ಉಚಿತ ಟಿಕೆಟ್‌ ಎಂದು ಘೋಷಿಸಿದ್ದರು. ಇದರಿಂದ ದೊಡ್ಡ ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಜಮಾವಣೆಗೊಂಡು ಕಾಲ್ತುಳಿತ ಸಂಭವಿಸಿದೆ. ಅದೇ ಕಾರಣಕ್ಕೆ ಬಂಧಿಸಿ ವಿಚಾರಣೆ ನಡೆಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿಖಿಲ್ ಪರ ವಾದ ಮಂಡಿಸಿದ ವಕೀಲ, ‘ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಈ ಘಟನೆಗೆ ಹೊಣೆ. ನಮ್ಮ ಪೊಲೀಸರು ಜೂನ್ 3ರ ರಾತ್ರಿ ಪೂರ್ತಿ ಕೆಲಸ ಮಾಡಿದ್ದಾರೆ. ಹೀಗಾಗಿ, ಭದ್ರತೆ ನೀಡುವುದಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿತ್ತು. ಸರ್ಕಾರದ ಪ್ರತಿನಿಧಿಯೊಬ್ಬರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿ ಆಟಗಾರರನ್ನು ಸ್ವಾಗತ ಮಾಡಿ, ಕರೆದುಕೊಂಡು ಬಂದು ವಿಧಾನಸೌಧದ ಬಳಿ ಕಾರ್ಯಕ್ರಮ ನಡೆಸಿದ್ದಾರೆ. ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸಿದ್ದರು. ಅವರ ಮೇಲೆ ಕ್ರಮ ಏನು’ ಎಂದು ಪ್ರಶ್ನಿಸಿದರು.

ಸಿಎಂ, ಡಿಸಿಎಂ, ಗೃಹ ಸಚಿವರ ವಿರುದ್ಧ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಜಿ.ಪರಮೇಶ್ವರ ಅವರು ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ದೂರು ನೀಡಿದ್ದಾರೆ.

ಪೊಲೀಸರು ದೂರು ಸ್ವೀಕರಿಸಿ ಮುಂದಿನ ಕಾನೂನು ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ, ಯಾವುದೇ ಪೂರ್ವ ತಯಾರಿ ಕೈಗೊಳ್ಳದೇ ಇರುವುದು, ಸಾವು–ನೋವು ಉಂಟಾಗಬಹುದು ಎಂಬ ಮಾಹಿತಿ ತಿಳಿದಿದ್ದರೂ ಅಧಿಕಾರದ ದುರ್ಬಳಕೆ ಹಾಗೂ ಸಾರ್ವಜನಿಕ ಹಣದ ದುರುಪಯೋಗ ಮಾಡಿರುವ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ವಿರುದ್ಧ ಮತ್ತೆ ಎರಡು ಎಫ್‌ಐಆರ್‌  

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮತ್ತೆ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.

ಈ ಪ್ರಕರಣಗಳಲ್ಲೂ ಆರ್‌ಸಿಬಿ, ಡಿಎನ್‌ಎ ಹಾಗೂ ಕೆಎಸ್‌ಸಿಎ ಆಡಳಿತ ಮಂಡಳಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ಕಾಲ್ತುಳಿತದಲ್ಲಿ ಗಾಯಗೊಂಡಿರುವ ರೋಲನ್ ಗೊಮೆಸ್ ಮತ್ತು ವೇಣು ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಕಾಲ್ತುಳಿತದಿಂದ ರೋಲನ್ ಗೊಮೆಸ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ವೇಣು ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.