ADVERTISEMENT

ಕೆಲಸ ಮಾಡುತ್ತಿದ್ದ ಲಾಜಿಸ್ಟಿಕ್ ಕಂಪನಿ ಕಳ್ಳತನ: ಆರೋಪಿಯಿಂದ 70 ವಾಚ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 23:30 IST
Last Updated 16 ಸೆಪ್ಟೆಂಬರ್ 2025, 23:30 IST
ಶೇಷಾದ್ರಿರೆಡ್ಡಿ
ಶೇಷಾದ್ರಿರೆಡ್ಡಿ   

ಬೆಂಗಳೂರು: ಕೆಲಸ ಮಾಡುತ್ತಿದ್ದ ಲಾಜಿಸ್ಟಿಕ್ ಕಂಪನಿಯಲ್ಲಿ ದುಬಾರಿ ಬೆಲೆಯ ವಾಚ್‌ಗಳನ್ನು ಕಳವು ಮಾಡಿ ಆನ್‌ಲೈನ್‌ನ ವಿವಿಧ ವೇದಿಕೆಗಳ ಮೂಲಕ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೇಗೂರಿನ ಹೊಂಗಸಂದ್ರ ನಿವಾಸಿ ಶೇಷಾದ್ರಿರೆಡ್ಡಿ (27) ಬಂಧಿತ.

ಆರೋಪಿಯಿಂದ ₹10 ಲಕ್ಷ ಮೌಲ್ಯದ ಫಾಸಿಲ್, ಅರ್ಮಾನಿ, ಮೈಕೆಲ್ ಕೋರ್ಸ್ ಸೇರಿ ವಿವಿಧ ಕಂಪನಿಗಳ 70 ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಆಂಧ್ರಪ್ರದೇಶದ ಶೇಷಾದ್ರಿ ರೆಡ್ಡಿ ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿರುವ ಲಾಜಿಸ್ಟಿಕ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.

ಡೆಲಿವರಿಗಾಗಿ ಕಂಪನಿಯಿಂದ ವಾಚ್ ಬಾಕ್ಸ್ ಸ್ವೀಕರಿಸುತ್ತಿದ್ದ ಆರೋಪಿ, ಡೆಲಿವರಿಗೆ ಕೊಂಡೊಯ್ಯುವ ಮಾರ್ಗ ಮಧ್ಯೆಯೇ ಕೆಲವು ವಾಚ್‌ಗಳನ್ನು ಕಳವು ಮಾಡುತ್ತಿದ್ದ. ರಾತ್ರಿ ಕೆಲಸ ಮುಗಿಸಿಕೊಂಡು ಹೋಗುವಾಗಲೂ ವಾಚ್‌ ಬಾಕ್ಸ್ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ. ಇತ್ತೀಚೆಗೆ ಲಾಜಿಸ್ಟಿಕ್ ಕಂಪನಿಯ ಪ್ರತಿನಿಧಿಗಳು ವಾಚ್ ಬಾಕ್ಸ್‌ ಪರಿಶೀಲಿಸಿದಾಗ ಲಕ್ಷಾಂತರ ರೂಪಾಯಿ ಮೌಲ್ಯದ ವಾಚ್‌ಗಳು ನಾಪತ್ತೆ ಆಗಿದ್ದವು. ಮತ್ತೊಂದೆಡೆ ಇದೇ ವೇಳೆ ಆರೋಪಿ ಏಕಾಏಕಿ ನಾಪತ್ತೆಯಾಗಿದ್ದ. ಹೀಗಾಗಿ, ಆತನ ಮೇಲೆ ಅನುಮಾನಗೊಂಡು ಆರೋಪಿ ವಿರುದ್ಧ ಕಂಪನಿಯ ವ್ಯವಸ್ಥಾಪಕರು ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಆರೋಪಿ ಕಳವು ಮಾಡಿದ್ದ ವಾಚ್‌ಗಳನ್ನು ತನ್ನ ಸ್ನೇಹಿತರ ಮೂಲಕ ಒಎಲ್‌ಎಕ್ಸ್‌ಗಳಲ್ಲಿ ಹಾಕಿ ಮಾರಾಟ ಮಾಡುತ್ತಿದ್ದ. ಇನ್ನೂ ಕೆಲವರಿಗೆ ರಸ್ತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ. ಬಂದ ಹಣದಲ್ಲಿ ಸ್ನೇಹಿತರ ಜತೆ ಸೇರಿ ಮೋಜು-ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿಯಿಂದ ಜಪ್ತಿ ಮಾಡಿಕೊಂಡ ವಾಚ್‌ಗಳನ್ನು ಪರಿಶೀಲಿಸಿದ ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ ಕುಮಾರ್ ಸಿಂಗ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.