ವೀರಣ್ಣಪಾಳ್ಯದಿಂದ ಆರಂಭವಾಗುವ ಸಂಪರ್ಕ ರಸ್ತೆ ಗುಂಡಿಗಳಿಂದ ತುಂಬಿದ್ದ ವಾಹನ ಸಂಚಾರರು ಪರದಾಡುವಂತಾಗಿದೆ
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನಮ್ಮ ಮೆಟ್ರೊ’ ಸಂಪರ್ಕ
ಕಲ್ಪಿಸುವ ಕಾಮಗಾರಿಯಿಂದಾಗಿ ನಾಲ್ಕು ವರ್ಷದಿಂದ ಆ ಭಾಗದ ವಾಹನ ಸವಾರರು ಬಸವಳಿದಿದ್ದಾರೆ.
ಹೊರ ವರ್ತುಲ ರಸ್ತೆಯಿಂದ ನಗರದ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳ
ಅವ್ಯವಸ್ಥೆಯಿಂದಾಗಿ ನಿತ್ಯವೂ ಗಂಟೆಗಟ್ಟಲೆ ರಸ್ತೆಯಲ್ಲೇ ಪರದಾಡುತ್ತಿದ್ದಾರೆ.
ಹೊರವರ್ತುಲ ರಸ್ತೆಗೆ ಪರ್ಯಾಯವಾಗಿ ವೀರಣ್ಣಪಾಳ್ಯ, ನಾಗವಾರ ಮುಖ್ಯರಸ್ತೆ, ಹೆಣ್ಣೂರು ಮುಖ್ಯರಸ್ತೆ ಬಳಿಯ 80 ಅಡಿ ರಸ್ತೆ ಮೂಲಕ ನಗರದ ಕೇಂದ್ರ ಭಾಗವನ್ನು ಸಂಪರ್ಕಿಸಬಹುದು. ಆದರೆ, ಈ ಮೂರು ರಸ್ತೆಗಳಲ್ಲಿ ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಗಳಿಂದ ವಾಹನ ಸಂಚಾರ ದುಸ್ತರವಾಗಿದೆ. ಹೀಗಾಗಿ ಹೊರವರ್ತುಲ ರಸ್ತೆ, ಹೆಬ್ಬಾಳ ಜಂಕ್ಷನ್ ಮೂಲಕವೇ ವಾಹನಗಳು ಸಂಚರಿಸುತ್ತಿರುವುದರಿಂದ ತಾಸುಗಟ್ಟಲೆ ವಾಹನ ದಟ್ಟಣೆ ಉಂಟಾಗುತ್ತಿದೆ. ‘ರಸ್ತೆ ಗುಂಡಿಗಳನ್ನಾದರೂ ಮುಚ್ಚಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ದಟ್ಟಣೆ ಸುಧಾರಿಸುತ್ತದೆ’ ಎಂದು ಹೊರ ವರ್ತುಲ ಹಾಗೂ ಸಂಪರ್ಕ ರಸ್ತೆಗಳಲ್ಲಿ ಸಂಚಾರ ನಿಯಂತ್ರಿಸುವ ಪೊಲೀಸರು ಹೇಳಿದರು.
‘ಬಿಬಿಎಂಪಿಗೆ ಕಾಯದೇ, ಕಾಂಕ್ರೀಟ್ ತುಂಬಿರುವ ಲಾರಿಗಳು ಬಂದಾಗ ಅವರಲ್ಲಿ ಮನವಿ ಮಾಡಿಕೊಂಡು ನಾವೇ ಗುಂಡಿಗಳನ್ನು ಮುಚ್ಚುತ್ತೇವೆ’ ಎಂದು ಸಂಚಾರ ಪೊಲೀಸರು ತಿಳಿಸಿದರು. ಸಂಪರ್ಕ ರಸ್ತೆಗಳ ಅಕ್ಕಪಕ್ಕದಲ್ಲಿ ವಾಸಿಸುವ ಜನರಂತೂ ಬಿಬಿಎಂಪಿ ಅಧಿಕಾರಿಗೆ ಶಾಪ ಹಾಕುತ್ತಾರೆ. ಆದರೆ ಬಿಬಿಎಂಪಿ ಎಂಜಿನಿಯರ್‌ಗಳು, ‘ವೈಟ್ ಟಾಪಿಂಗ್ ಕಾಮಗಾರಿ ನಡೆಯುವಾಗ ಸ್ವಲ್ಪ ದಿನ ತೊಂದರೆ ಆಗುತ್ತದೆ’ ಎನ್ನುತ್ತಾರೆ.
ಸಂಪರ್ಕ ರಸ್ತೆ 1:
ಹೊರ ವರ್ತುಲ ರಸ್ತೆಯ ವೀರಣ್ಣಪಾಳ್ಯದ 3ನೇ ಮುಖ್ಯರಸ್ತೆಯಿಂದ ಪ್ರಾರಂಭವಾಗುವ ರಸ್ತೆ, ಗುಂಡಿಗಳಿಂದ ಹದಗೆಟ್ಟಿದೆ. ಅಲ್ಲಲ್ಲಿ ಪೈಪ್ ಅಳವಡಿಸಲು ಅಗೆಯಲಾಗಿದ್ದು ಅದನ್ನು ಮುಚ್ಚಿಲ್ಲ. ಕನಕನಗರದ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಇದ್ದು, ಆಗಾಗ ರೈಲು ಸಂಚರಿಸುವ ಸಮಯದಲ್ಲಿ ಗೇಟ್ ಹಾಕಲಾಗುತ್ತದೆ. ಆ ಸಂದರ್ಭದಲ್ಲಿ ಅರ್ಧ ಕಿ.ಮೀ ವಾಹನಗಳು ನಿಲ್ಲುತ್ತವೆ. ಗೇಟ್ ತೆಗೆದಾಗ, ಎರಡೂ ಬದಿಯಿಂದ ವಾಹನಗಳು ಬರುವಾಗ ದಟ್ಟಣೆಯಾಗುತ್ತದೆ. ಕೆಎಚ್‌ಬಿ ಕಾಲೊನಿ ಮುಖ್ಯರಸ್ತೆಯಲ್ಲಿ ಸಾಗುವ ಈ ರಸ್ತೆ 50 ಮೀ. ಕೂಡ ಉತ್ತಮವಾಗಿಲ್ಲ. ಪುಷ್ಪಾಂಜಲಿ ಚಿತ್ರಮಂದಿರದ ಬಳಿ ದಿಣ್ಣೂರು ಮುಖ್ಯರಸ್ತೆ ಸೇರಿಕೊಳ್ಳುವ ಈ ಸಂಪರ್ಕ ರಸ್ತೆ, ಕಿರಿದಾಗಿದ್ದು, ಏಕಕಾಲಕ್ಕೆ ಎರಡು ವಾಹನಗಳು ಓಡಾಡದಂತಹ ಸ್ಥಿತಿ ಇದೆ.
ಸಂಪರ್ಕ ರಸ್ತೆ 2:
ಹೊರ ವರ್ತುಲ ರಸ್ತೆಯ ಥಣಿಸಂದ್ರ–ನಾಗವಾರ ಜಂಕ್ಷನ್‌ನಿಂದ ನಾಗವಾರ ಮುಖ್ಯರಸ್ತೆ ಮೂಲಕ ಅರೆಬಿಕ್ ಕಾಲೇಜು, ಕಾಡುಗೊಂಡನಹಳ್ಳಿ ಮೂಲಕ ಟ್ಯಾನರಿ ರಸ್ತೆಯತ್ತ ಸಾಗುವ ಈ ಸಂಪರ್ಕ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಂಚಾರವೂ ಇದೆ. ಆದರೆ, ವೈಟ್‌ಟಾಪಿಂಗ್, ನಮ್ಮ ಮೆಟ್ರೊ ಕಾಮಗಾರಿಯ ನಡುವೆ ರಸ್ತೆಯನ್ನು ಹುಡುಕಬೇಕಾಗಿದೆ. ಇಲ್ಲೂ ರೈಲ್ವೆ ಲೆವೆಲ್ ಕ್ರಾಸಿಂಗ್ ಸಮಸ್ಯೆ ಇದೆ. ರಸ್ತೆಯಲ್ಲಿ ಪೈಪ್‌ಗಳನ್ನು ಅಳವಡಿಸಲು ಅಗೆದಿರುವ ಜೊತೆಗೆ, ಎರಡೂ ಬದಿ ಪಾದಚಾರಿ ಮಾರ್ಗ ಗಳು, ಡಕ್ಟ್ ಅಳವಡಿಸುವ ಕೆಲಸ ನಡೆಯುತ್ತಿದೆ. ಯಾವ ಭಾಗದಲ್ಲೂ ಕೆಲಸ ಪೂರ್ಣಗೊಂಡಿಲ್ಲ. ಹಸಿ ಮಣ್ಣಿನಲ್ಲಿ ವಾಹನಗಳು ಇಳಿದು ನಿಂತುಕೊಳ್ಳುತ್ತವೆ. ಅವುಗಳನ್ನು ತೆರವು ಮಾಡುವ ವೇಳೆಗೆ ವಾಹನಗಳು ಸಾಲುಗಟ್ಟುತ್ತವೆ. ಟ್ಯಾನರಿ ರಸ್ತೆಯಲ್ಲಿ ವೆಂಕಟೇಶಪುರ, ಅರೆಬಿಕ್ ಕಾಲೇಜು ಸೇರಿದಂತೆ ಎರಡು ಕಡೆ ನಮ್ಮ ಮೆಟ್ರೊ ನಿಲ್ದಾಣದ ಕೆಲಸ ನಡೆಯುತ್ತಿದ್ದು, ರಸ್ತೆ ಕಿರಿದಾಗಿದೆ. ಇಲ್ಲೇ ತ್ಯಾಜ್ಯ ಸಂಗ್ರಹಿಸುವ ಆಟೊಗಳು ನಿಲ್ಲುತ್ತಿದ್ದು, ದುರ್ವಾಸನೆ ಬೀರುತ್ತಿರುತ್ತವೆ. ಫ್ರೇಜರ್‌ಟೌನ್‌ಗೆ ಸಂಪರ್ಕಿಸುವ ಮುನ್ನ ಬಿಲಾಲ್‌ನಗರದ ಸಮೀಪ ರಸ್ತೆ ಕಿರಿದಾಗಿ, ಬಸ್ ಸಂಚಾರವೂ ಸಾಧ್ಯವಿಲ್ಲ.
ಸಂಪರ್ಕ ರಸ್ತೆ 3:
ಹೊರವರ್ತುಲ ರಸ್ತೆಯಿಂದ ಹೊಸ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ ಹೆಣ್ಣೂರು ಮುಖ್ಯರಸ್ತೆ, ಸರ್ವೀಸ್ ರಸ್ತೆ ಮೂಲಕ ಎಚ್‌ಆರ್‌ಬಿಆರ್ ಬಡಾವಣೆಯ 3ನೇ ಬ್ಲಾಕ್ 80 ಅಡಿ ರಸ್ತೆಯಿಂದ ಲಿಂಗರಾಜಪುರಂನಿಂದ ನಗರ ತಲುಪುವ ರಸ್ತೆಗಳಲ್ಲಿ ವರ್ಷದಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಲೇ ಇದೆ. ಒಂದು ಬದಿ ವೈಟ್‌ಟಾಪಿಂಗ್ ಮುಗಿದಿದೆ, ಆದರೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ಇನ್ನೊಂದು ಬದಿ ರಸ್ತೆ ಅಗೆಯಲಾಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಪಾದಚಾರಿ ಮಾರ್ಗದಲ್ಲಿ ನಿರ್ಮಾಣ ತ್ಯಾಜ್ಯವನ್ನು ತುಂಬಿದ್ದು, ಜನ ಓಡಾಡಲು ಸಾಧ್ಯವಿಲ್ಲ. ಎರಡು–ಮೂರು ಅಡಿ ಆಳದ ಡಕ್ಟ್‌ಗಳು ತೆರೆದುಕೊಂಡಿದ್ದು, ವಾಹನ ಹಾಗೂ ನಡೆದಾಡುವವರೂ ಬೀಳುವಂತಾಗಿದೆ.
ಸಂಪರ್ಕ ರಸ್ತೆಗಳು
ಸಂಪರ್ಕ ರಸ್ತೆ 1: ವೀರಣ್ಣಪಾಳ್ಯ 3ನೇ ಮುಖ್ಯರಸ್ತೆಯಿಂದ ದಿಣ್ಣೂರು ಮುಖ್ಯರಸ್ತೆ– ಕನಕ ನಗರ–ಕೆಎಚ್‌ಬಿ ಕಾಲೊನಿ ಮುಖ್ಯರಸ್ತೆ– ದಿಣ್ಣೂರು ಮುಖ್ಯರಸ್ತೆ– ಜೆಸಿ ನಗರ ಮುಖ್ಯರಸ್ತೆ– ಫನ್ ವರ್ಲ್ಡ್– ಜಯಮಹಲ್ ಮುಖ್ಯರಸ್ತೆ
****
ಸಂಪರ್ಕ ರಸ್ತೆ 2: ಥಣಿಸಂದ್ರ ರಸ್ತೆ– ನಾಗವಾರ ಜಂಕ್ಷನ್‌ನಿಂದ– ನಾಗವಾರ ಮುಖ್ಯರಸ್ತೆ– ಅರೆಬಿಕ್ ಕಾಲೇಜು–ಕಾಡುಗೊಂಡನಹಳ್ಳಿ– ಅರೆಬಿಕ್ ಕಾಲೇಜು ಮುಖ್ಯರಸ್ತೆ– ಟ್ಯಾನರಿ ರಸ್ತೆ– ಫ್ರೇಜರ್ ಟೌನ್
****
ಸಂಪರ್ಕ ರಸ್ತೆ 3: ಹೆಣ್ಣೂರು ಮುಖ್ಯರಸ್ತೆ– ಸರ್ವಿಸ್ ರಸ್ತೆ– ಎಚ್‌ಆರ್‌ಬಿಆರ್ 3ನೇ ಬ್ಲಾಕ್ 80 ಅಡಿ ರಸ್ತೆ– ಇಸ್ಕಾನ್ ಟೆಂಪಲ್ ಗೋಶಾಲಾ– ಲಿಂಗರಾಜಪುರಂ
****
ತುರ್ತಾಗಿ ಏನಾಗಬೇಕು?
ಹೊರ ವರ್ತುಲ ರಸ್ತೆಯಿಂದ ಕೇಂದ್ರ ಭಾಗಕ್ಕೆ ವೀರಣ್ಣಪಾಳ್ಯ, ನಾಗವಾರ ಮುಖ್ಯರಸ್ತೆ– ಟ್ಯಾನರಿ ರಸ್ತೆ ಹಾಗೂ ಎಚ್‌ಆರ್‌ಬಿಆರ್ ಬಡಾವಣೆಯ 80 ಅಡಿ ರಸ್ತೆಗಳಲ್ಲಿರುವ ಗುಂಡಿಗಳನ್ನಾದರೂ ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕಾಮಗಾರಿ ಮುಗಿದ ಮೇಲೆ ಅಗೆದಿರುವ ಗುಂಡಿಯನ್ನು ಮುಚ್ಚುವ ಬದಲು, 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಯನ್ನು ಮುಗಿಸಿ, ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಂತರ ಮುಂದಿನ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಆರಂಭಿಸಬೇಕು. ಜಲಮಂಡಳಿ, ಬೆಸ್ಕಾಂ, ಬಿಬಿಎಂಪಿ ಹಾಗೂ ಇತರೆ ಸಂಸ್ಥೆಗಳು ಸಮನ್ವಯ ಸಾಧಿಸಿ ಕಾಮಗಾರಿಯನ್ನು ಒಂದೇ ವೇಗದಲ್ಲಿ ಮುಗಿಸಬೇಕು. ಇಲಾಖೆಗಳ ಮುಖ್ಯಸ್ಥರು ಆಗಾಗ್ಗೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ, ಇರುವ ಸಮಸ್ಯೆಗಳನ್ನು ಬಗೆಹರಿಸಿ, ಕಾಮಗಾರಿಗಳು ವೇಗವಾಗಿ ಮುಗಿಸುವ ಜವಾಬ್ದಾರಿ ಹೊರಬೇಕು. ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಮುಕ್ತ ಸಂಚಾರಕ್ಕೆ ಕಾಮಗಾರಿಗಳು ನಡೆಯಬೇಕಿವೆ.
ದೂಳು, ಆರೋಗ್ಯ ಸಮಸ್ಯೆ
ಹೊರ ವರ್ತುಲ ರಸ್ತೆಯಿಂದ ನಾಗವಾರ ಮುಖ್ಯರಸ್ತೆ ಮೂಲಕ ಟ್ಯಾನರಿ ದೊಡ್ಡಿ ರಸ್ತೆಯವರೆಗೂ ಒಂದು ವರ್ಷದಿಂದ ರಸ್ತೆ ಅಭಿವೃದ್ಧಿಪಡಿ ಸುತ್ತೇವೆ ಎಂದು ಕೆಲಸ ಮಾಡುತ್ತಿದ್ದಾರೆ. ಗುಂಡಿ ತೆಗೆಯುತ್ತಾರೆ, ಪೈಪ್ ಹಾಕುತ್ತಾರೆ. ಅದನ್ನು ಸರಿಯಾಗಿ ಮುಚ್ಚುವುದಿಲ್ಲ. ಎಲ್ಲ ಕಡೆಯೂ ಪೈಪ್ ಅಳವಡಿಸಿದ ಮೇಲೆ ವೆಟ್‌ಮಿಕ್ಸ್ ಹಾಕುತ್ತೇವೆ ಎನ್ನುತ್ತಾರೆ. ದೂಳು ಅತಿಯಾಗಿದ್ದು, ಜನರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆ ಉಂಟಾಗಿದೆ. ನಿತ್ಯವೂ ಇಲ್ಲಿ ಮಾಸ್ಕ್ ಹಾಕಿಕೊಂಡೇ ಇರಬೇಕಾಗುತ್ತದೆ. ಅಂಗಡಿಗಳಲ್ಲಿ ವ್ಯಾಪಾರ ಆಗುತ್ತಿಲ್ಲ, ವಸ್ತುಗಳೆಲ್ಲವೂ ದೂಳು ತುಂಬಿಕೊಂಡು ಜನರು ಖರೀದಿಸುವುದಿಲ್ಲ. ಹೋಟೆಲ್‌ಗಳ ಸ್ಥಿತಿಯಂತೂ ಬಂದ್ ಮಾಡುವಂತಾಗಿದೆ ಎಂದು ಕಾಡುಗೊಂಡನಹಳ್ಳಿ ನಿವಾಸಿ ರಾಬರ್ಟ್ ಅಳಲು ತೋಡಿಕೊಂಡರು.
‘ಊಟಕ್ಕೆ ಸಾಲ ಮಾಡುವಂತಾಗಿದೆ’
‘ಒಂಬತ್ತು ತಿಂಗಳಿನಿಂದ ಕೆಲಸ ಮಾಡಬೇಕೋ, ಬೇಡವೋ ಎಂಬ ರೀತಿಯಲ್ಲಿ ಕಾಂಕ್ರೀಟ್ ರಸ್ತೆ ಮಾಡುತ್ತಿದ್ದಾರೆ. ನಾವು ಬೀದಿಬದಿ ವ್ಯಾಪಾರಿಗಳು. ಇಲ್ಲಿ ವ್ಯಾಪಾರ ನಡೆದರೆ ರಾತ್ರಿ ಹೊಟ್ಟೆ ತುಂಬ ಊಟ ಮಾಡುತ್ತೇವೆ. ಆದರೆ, ಇವರು ರಸ್ತೆ ಕೆಲಸವನ್ನು ಮುಗಿಸುತ್ತಿಲ್ಲ. ಈಗ ಕೆಲವು ದಿನಗಳಿಂದ ಒಂದು ಭಾಗದಲ್ಲಿ ವಾಹನ ಸಂಚರಿಸಲು ಬಿಟ್ಟಿದ್ದಾರೆ. ಆಗಾಗ ಮುಚ್ಚುತ್ತಾರೆ. ಸಂಜೆ ವೇಳೆಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತುಕೊಳ್ಳುತ್ತವೆ. ಹಣ್ಣುಗಳು ದೂಳಾಗಿ ನಮಗೆ ವ್ಯಾಪಾರ ಇಲ್ಲದಂತಾಗಿದೆ. ಸಾಲ ಮಾಡಿ ಊಟ ಮಾಡುವಂತಹ ಪರಿಸ್ಥಿತಿ ಇದೆ’ ಎಂದು ಎಚ್‌ಆರ್‌ಬಿಆರ್ 2ನೇ ಬ್ಲಾಕ್‌ನ 80 ಅಡಿ ರಸ್ತೆಯಲ್ಲಿ ಹಣ್ಣಿನ ವ್ಯಾಪಾರಿ ಸೈಯ್ಯದ್ ಅವರು ಪರಿಸ್ಥಿತಿಯನ್ನು ಅರುಹಿಕೊಂಡರು.
ಕನಕನಗರದಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್
ನಾಗವಾರ ಮುಖ್ಯರಸ್ತೆ – ಕಾಡುಗೊಂಡನಹಳ್ಳಿಯಲ್ಲಿ ರಸ್ತೆ ಮಣ್ಣುಮಯವಾಗಿದ್ದು, ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂತಾಗಿದೆ
ಟ್ಯಾನರಿ ರಸ್ತೆಯಲ್ಲಿ ವೆಂಕಟೇಶಪುರ ಮೆಟ್ರೊ ನಿಲ್ದಾಣದ ಜೊತೆಗೆ ವೈಟ್ ಟಾಪಿಂಗ್, ಚರಂಡಿ ಕಾಮಗಾರಿ ನಡೆಯುತ್ತಿದ್ದು ವಾಹನ ಸಂಚಾರಕ್ಕೆ ಸ್ಥಳವೇ ಇಲ್ಲದಂತಾಗಿದೆ
ಎಚ್ಆರ್‌ಬಿಆರ್ ಬಡಾವಣೆಯ 80 ಅಡಿ ರಸ್ತೆಯಲ್ಲಿ ಮಂದಗತಿಯಲ್ಲಿರುವ ವೈಟ್ ಟಾಪಿಂಗ್ ಕಾಮಗಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.