
ಬೆಂಗಳೂರು: ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆಗೆ ಟೆಂಡರ್ ತೆರೆಯುವ ಸಮಯ ಹತ್ತಿರವಾಗುತ್ತಿದ್ದರೂ, ಅಲೈನ್‌ಮೆಂಟ್ ಬದಲಾವಣೆ ನಡೆಯುತ್ತಲೇ ಇದೆ. ಬದಲಾದ ಯೋಜನೆಯಿಂದ, ಹೆಬ್ಬಾಳ ಕೆರೆಗೆ ಸಮಸ್ಯೆ ಹೆಚ್ಚಾಗಿದ್ದರೆ, ಸ್ಯಾಂಕಿ ಕೆರೆಯ ಮೂಲಕ್ಕೇ ಕಂಟಕ ಎದುರಾಗಿದೆ.
ಸ್ಯಾಂಕಿ ಕೆರೆಯ ದಡದ ಮೇಲೆ ಸ್ಯಾಂಕಿ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ನಿರ್ಮಿಸಲು 2023ರಲ್ಲಿ ಬಿಬಿಎಂಪಿ ಮುಂದಾದಾಗ, ಸ್ಥಳೀಯರು ಪ್ರತಿರೋಧ ತೋರಿದ್ದರು. ಆಗ ಮೇಲ್ಸೇತುವೆ ನಿರ್ಮಾಣ ಯೋಜನೆ ಕೈಬಿಡಲಾಗಿತ್ತು. ಕೆರೆ ಹಾಗೂ ಮರಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಸ್ಯಾಂಕಿ ಕೆರೆ ರಸ್ತೆಯ ಕೆಳಭಾಗದಲ್ಲಿ ಸುರಂಗ ರಸ್ತೆ ನಿರ್ಮಿಸಲು ಬಿ–ಸ್ಮೈಲ್ ಮುಂದಾಗಿದೆ.
ಹೆಬ್ಬಾಳ–ಎಸ್ಟೀಮ್ ಮಾಲ್ ಜಂಕ್ಷನ್‌ನಲ್ಲಿ ಸುರಂಗ ರಸ್ತೆಯ ಪ್ರವೇಶ–ನಿರ್ಗಮನ ಟ್ಯೂಬ್‌ಗಳಿರಲಿವೆ. ಅಂತಿಮ ವಿಸ್ತೃತ ಯೋಜನಾ ವರದಿಯಲ್ಲಿರುವ (ಡಿಪಿಆರ್) ಈ ಜಂಕ್ಷನ್‌ನಲ್ಲಿ ಶಾಫ್ಟ್ ನಿರ್ಮಾಣ ಪ್ರದೇಶದಲ್ಲಿ ಹೆಚ್ಚು ಸ್ಥಳವನ್ನು ಪಡೆದುಕೊಳ್ಳಲು ಉದ್ದೇಶಿಸಿರುವುದರಿಂದ ಹೆಬ್ಬಾಳ ಕೆರೆ ಅಂಗಳ ಹಾಗೂ ರಾಜಕಾಲುವೆಗೆ ಸಮಸ್ಯೆ ಅಧಿಕವಾಗಿದೆ.
ಅಂತಿಮ ಡಿಪಿಆರ್‌ನಲ್ಲಿ ಇಲ್ಲದ ಹೊಸ ನಿರ್ಗಮನ ಪಥ ಸ್ಯಾಂಕಿ ಕೆರೆಯ ಸಮೀಪ ತೆರೆದುಕೊಳ್ಳುವುದರಿಂದ ಈಗಾಗಲೇ ಒತ್ತುವರಿಯಿಂದ ಬಳಲುತ್ತಿರುವ ಕೆರೆಗೆ ಕಂಟಕ ಎದುರಾಗಿದೆ. ಮೇಖ್ರಿ ವೃತ್ತದಿಂದ ಸಿ.ವಿ. ರಾಮನ್ ರಸ್ತೆ ಕಡೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ, ನಿರ್ಗಮನ ರ್‍ಯಾಂಪ್ ರದ್ದುಗೊಳಿಸಿ, ಗಾಲ್ಫ್ ಮೈದಾನ ಕೆಳಭಾಗದಿಂದ ಸ್ಯಾಂಕಿ ಕೆರೆಯವರೆಗೆ ಹೊಸದಾಗಿ ನಿರ್ಗಮನ ರ‍್ಯಾಂಪ್ ನಿರ್ಮಿಸಲು ಡಿಪಿಆರ್ ಮಾಡಿಕೊಟ್ಟಿದ್ದ ರೊಡಿಕ್ ಕನ್ಸಲ್ಟೆಂಟ್ಸ್‌ನಿಂದ ಬಿ–ಸ್ಮೈಲ್ ತಾಂತ್ರಿಕ ನಿರ್ದೇಶಕರಿಗೆ ಅ.9ರಂದು ‘ಬದಲಾದ ಅಲೈನ್‌ಮೆಂಟ್ ಅನುಬಂಧ’ಗಳೊಂದಿಗೆ ವರದಿ ಸಲ್ಲಿಸಲಾಗಿದೆ.
‘ಸ್ಯಾಂಕಿ ರಸ್ತೆ ಕೆಳಭಾಗದಲ್ಲಿ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿರುವುದರಿಂದ, ಸ್ಯಾಂಕಿ ಕೆರೆಯ ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಪ್ರವಾಹ ಹಾಗೂ ಸಂಚಾರ ದಟ್ಟಣೆ ಈ ಭಾಗದಲ್ಲಿ ಇನ್ನೂ ಹೆಚ್ಚಾಗಲಿದೆ. ಯಾವುದೇ ರೀತಿಯ ಅಧ್ಯಯನ ನಡೆಸದೆ ಇಲ್ಲಿ ಸುರಂಗ ನಿರ್ಮಿಸಲು ಯೋಜಿಸಿದ್ದಾರೆ. ಸ್ಯಾಂಕಿ ಕೆರೆ ದಡದಲ್ಲಿ ಮೇಲ್ಸೇತುವೆ ಯೋಜನೆಯನ್ನು ನಾವು ನಿಲ್ಲಿಸಿದ್ದೆವು. ಇದೀಗ ನಾವೆಲ್ಲ ಮತ್ತೆ ಒಟ್ಟಾಗಿ, ಸುರಂಗ ರಸ್ತೆ ವಿರುದ್ಧ ಹೋರಾಡಿ, ನಮ್ಮ ಜಲಮೂಲವಾದ ಸ್ಯಾಂಕಿ ಕೆರೆ ಹಾಗೂ ಜೀವವೈವಿಧ್ಯವನ್ನು ಉಳಿಸಿಕೊಳ್ಳುತ್ತೇವೆ’ ಎಂದು ಸ್ಯಾಂಕಿ ಕೆರೆ ತಂಡದ ಪ್ರೀತಿ ಸುಂದರ್‌ರಾಜನ್ ತಿಳಿಸಿದರು.
ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದ್ದ ಸಿ.ವಿ ರಾಮನ್ ರಸ್ತೆಯಲ್ಲಿ ಪ್ರವೇಶ ಹಾಗೂ ನಿರ್ಗಮನ ರ್‍ಯಾಂಪ್ ಯೋಜನೆ ಕೈಬಿಟ್ಟು, ಸ್ಯಾಂಕಿ ರಸ್ತೆಯಲ್ಲಿ ಹೆಚ್ಚುವರಿಯಾಗಿ ರ್‍ಯಾಂಪ್–6ಎ ಅನ್ನು ಸೇರಿಸಲಾಗಿದೆ
ರ‍್ಯಾಂಪ್ –6ಎ 2.450 ಕಿ.ಮೀ ಉದ್ದವಿರಲಿದೆ.
ಗಾಲ್ಫ್ ಮೈದಾನದ ಕೆಳಭಾಗದಿಂದ ನಿರ್ಗಮನ ರ್‍ಯಾಂಪ್ ಆರಂಭವಾಗಿ, ಸ್ಯಾಂಕಿ ರಸ್ತೆಯಲ್ಲಿ ಕೆರೆಯ ದಡದಲ್ಲಿ ಮುಕ್ತಾಯವಾಗಲಿದೆ
ಸುರಂಗ ರಸ್ತೆ ಆರಂಭವಾಗುವ ಹೆಬ್ಬಾಳ ಜಂಕ್ಷನ್‌ನಲ್ಲಿ1.123 ಕಿ.ಮೀನಷ್ಟು ಟ್ಯೂಬ್–1, ಟ್ಯೂಬ್–2ರ ಅಲೈನ್‌ಮೆಂಟ್ ಅನ್ನು ಬದಲಾಯಿಸಲಾಗಿದ್ದು, 23 ಮೀಟರ್ ಕಡಿಮೆಯಾಗಿದೆ. ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಮಾಣವಾಗುವ ಶಾಫ್ಟ್ ಪ್ರದೇಶ ಟ್ಯೂಬ್–1ರ ಬಳಿ 56 ಮೀಟರ್ ಹೆಚ್ಚಳವಾಗಿದೆ. ಟ್ಯೂಬ್–2ರ ಬಳಿಯ ಶಾಫ್ಟ್ ಬಳಿ 53 ಮೀಟರ್ ಉದ್ದ ಅಧಿಕವಾಗಿದೆ.
ರಿಅಲೈನ್‌ಮೆಂಟ್ ಮಾಡಿರುವುದರಿಂದ ಪ್ರವೇಶ ರ್‍ಯಾಂಪ್–1ರ ಉದ್ದ 11 ಮೀಟರ್ ಹಾಗೂ ನಿರ್ಗಮನ ರ್‍ಯಾಂಪ್–7ರ ಉದ್ದ 167 ಮೀಟರ್ ಹೆಚ್ಚಳವಾಗಿದೆ. ಹೆಬ್ಬಾಳ ಎಸ್ಟೀಮ್ ಮಾಲ್ ಜಂಕ್ಷನ್‌ನಲ್ಲಿ ವಾಣಿಜ್ಯ ಪ್ರದೇಶ ಸೇರಿದಂತೆ ಇತರೆ ಸೌಲಭ್ಯಗಳಿರುವ ಐದು ಅಂತಸ್ತಿನ ಎರಡು ಶಾಫ್ಟ್‌ಗಳು ನಿರ್ಮಾಣವಾಗಲಿವೆ. ಅಂತಿಮ ಡಿಪಿಆರ್‌ನಲ್ಲಿರುವುದಕ್ಕಿಂತ ರ್‍ಯಾಂಪ್ ಉದ್ದವನ್ನು ಹೆಚ್ಚು ಮಾಡಲು ಅಲೈನ್‌ಮೆಂಟ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಹೆಬ್ಬಾಳ ಕೆರೆ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳಿಗೆ ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗಲಿದೆ. ಕೆರೆ ಜಾಗವನ್ನು ಅಭಿವೃದ್ಧಿಗಾಗಿ ಎಷ್ಟು ಬೇಕಾದರೂ ಬಳಸಿಕೊಳ್ಳಬಹುದು ಎಂಬ ಅಧಿಕಾರಿಗಳ ಮನಃಸ್ಥಿತಿಯಿಂದ ಕೆರೆ ಅಂಗಳ ಹಾಗೂ ರಾಜಕಾಲುವೆಗಳಿಗೆ ಧಕ್ಕೆ ಹೆಚ್ಚಾಗಲಿದೆ ಎಂದು ಪರಿಸರ ಕಾರ್ಯಕರ್ತರು ದೂರಿದರು.
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆಗೆ ಡಿಪಿಆರ್ ಆಗಿ, ಟೆಂಡರ್ ಆಹ್ವಾನಿಸಲಾಗಿದೆ. ಹೆಬ್ಬಾಳ ಕೆರೆ ಹಾಗೂ ಸ್ಯಾಂಕಿ ಕೆರೆಯ ಬಳಿ ಟನಲ್ ರ‍್ಯಾಂಪ್‌ಗಳನ್ನು ಬಫರ್ ವಲಯದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಆದರೆ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಕೆಟಿಸಿಡಿಎ) ಬಿಬಿಎಂಪಿ, ಜಿಬಿಎ, ಬಿ–ಸ್ಮೈಲ್ ಅಥವಾ ಡಿಪಿಆರ್ ತಯಾರಿಸಿದ ಸಂಸ್ಥೆ ಅನುಮತಿಯನ್ನು ಪಡೆದಿಲ್ಲ.
‘ಕೆರೆ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದ್ದರೆ, ಯೋಜನೆ ತಯಾರಿಸುವ ಪೂರ್ವದಲ್ಲೇ ಕೆಟಿಸಿಡಿಎಯಿಂದ ಅನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿ ಕಾಯ್ದೆಯೇ ಇದೆ. ಕೆರೆಯ ಕೆಳಭಾಗ ಅಥವಾ ಬಫರ್ ವಲಯದಲ್ಲಿ ಯಾವುದೇ ರೀತಿಯ ಬೃಹತ್ ಯೋಜನೆಗಳಾಗುವಂತಿಲ್ಲ. ಅಂತಹ ಯೋಜನೆಗಳಿದ್ದರೆ, ಅದರ ಬಗ್ಗೆ ಸ್ಪಷ್ಟ ವಿವರಣೆ ನೀಡಿ, ಅನುಮತಿಗೆ ಕೆಟಿಸಿಡಿಎಗೆ ಅರ್ಜಿ ಸಲ್ಲಿಸಬೇಕು. ಆದರೆ, ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಅನುಮತಿಗಾಗಿ ಈವರೆಗೆ ಯಾರೂ ಅರ್ಜಿ ಸಲ್ಲಿಸಿಲ್ಲ’ ಎಂದು ಕೆಟಿಸಿಡಿಎ ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.