ADVERTISEMENT

ಬೆಂಗಳೂರು | ಸುರಂಗ ರಸ್ತೆ: ಅಂತರ್ಜಲ, ಕೊಳವೆಬಾವಿಗೆ ಕುತ್ತು

ವಸತಿ, ವಾಣಿಜ್ಯ ಕಟ್ಟಡಗಳ ಕೆಳಗೆ ಸಾಗುವ ಪಥಗಳಿಂದ ಜಲಮೂಲಗಳಿಗೆ ಧಕ್ಕೆ

ಆರ್. ಮಂಜುನಾಥ್
Published 27 ಅಕ್ಟೋಬರ್ 2025, 0:30 IST
Last Updated 27 ಅಕ್ಟೋಬರ್ 2025, 0:30 IST
ಸುರಂಗ ರಸ್ತೆಯ ಪ್ರತಿ 500 ಮೀಟರ್‌ ಅಂತರದಲ್ಲಿ ನಿರ್ಮಾಣವಾಗಲಿರುವ ‘ಟನಲ್‌ ಕ್ರಾಸ್‌ ಪ್ಯಾಸೇಜ್‌’
ಸುರಂಗ ರಸ್ತೆಯ ಪ್ರತಿ 500 ಮೀಟರ್‌ ಅಂತರದಲ್ಲಿ ನಿರ್ಮಾಣವಾಗಲಿರುವ ‘ಟನಲ್‌ ಕ್ರಾಸ್‌ ಪ್ಯಾಸೇಜ್‌’   

ಬೆಂಗಳೂರು: ಸುರಂಗ ರಸ್ತೆ ಹಾದುಹೋಗುವ ಮಾರ್ಗದಲ್ಲಿ ಅಂತರ್ಜಲ, ಜಲಮೂಲ ಹಾಗೂ ಕೊಳವೆಬಾವಿಗಳಿಗೆ ಸಮಸ್ಯೆಯಾಗಲಿದ್ದು, ಇದಕ್ಕೆ ಯಾವುದೇ ರೀತಿಯ ಪರಿಹಾರ ಕ್ರಮಗಳನ್ನು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸೂಚಿಸಿಲ್ಲ.

‘ಅಂತರ್ಜಲ, ಜಲಮೂಲಗಳನ್ನು ಯಾವುದೇ ವರದಿಯಲ್ಲೂ ಪರಿಗಣಿಸಿಲ್ಲ. ಇದು ಸುರಂಗ ರಸ್ತೆಗೆ ಅತಿ ಅಪಾಯಕಾರಿಯಾದದ್ದು’ ಎಂದು ರಾಜ್ಯ ಸರ್ಕಾರ ರಚಿಸಿರುವ ‘ತಜ್ಞರ ಸಮಿತಿ’ಯೇ ಅಭಿಪ್ರಾಯಪಟ್ಟಿದೆ.

‘ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟದಲ್ಲಿ ಇಳಿಕೆಯಾಗುತ್ತಲೇ ಇದೆ. ಸುರಂಗ ರಸ್ತೆ ಸಾಗುವ ಸ್ಥಳಗಳಲ್ಲಿ ಜಲಮೂಲಗಳನ್ನು ಗುರುತಿಸಲು ‘ಎಲೆಕ್ಟ್ರಿಕಲ್‌ ರೆಸಿಸ್ಟಿವಿಟಿ ಟೊಮೊಗ್ರಫಿ’ಯನ್ನು (ಇಆರ್‌ಟಿ) ಏಕೆ ಬಳಿಸಿಲ್ಲ’ ಎಂಬ ತಜ್ಞರ ಸಮಿತಿಯ ಪ್ರಶ್ನೆಗೆ, ಡಿಪಿಆರ್‌ ಕನ್ಸಲ್ಟೆಂಟ್ಸ್‌ ಮಾಹಿತಿಯನ್ನು ಒದಗಿಸಿಲ್ಲ.

ADVERTISEMENT

‘ಡಿಪಿಆರ್‌ ತಪಾಸಣೆ ಸಂದರ್ಭದಲ್ಲಿ ದ್ವಿತೀಯ ಮೂಲಗಳಿಂದ ಅಂತರ್ಜಲ ಸ್ಥಿತಿಯನ್ನು ಅರಿಯಲಾಗಿದೆ. ಯಾವುದಾದರೂ ದುರ್ಬಲ ವಲಯದಲ್ಲಿ ಅಪಾಯಗಳ ಮೌಲ್ಯಮಾಪನ ಮಾಡಲು ಮೆಟ್ರೊ ಸುರಂಗ ಮಾರ್ಗಗಳನ್ನು ಪರಿಗಣಿಸಲಾಗಿದೆ. ಮುಂದೆ ಅಂತಹ ಅಪಾಯವನ್ನು ತಗ್ಗಿಸಲು ಸುರಂಗ ಕೊರೆಯುವ ಯಂತ್ರ (ಟಿಬಿಎಂ)ನ ಆಯ್ಕೆ ಮತ್ತು ವಿನ್ಯಾಸವು ಅತ್ಯಂತ ಪ್ರಮುಖ ಅಂಶವಾಗಿದೆ. ಸುರಂಗ ಮಾರ್ಗ ನಿರ್ಮಾಣ ಮಾಡುವವರು ಇದರ ಬಗ್ಗೆ ನಿಯಮಿತವಾಗಿ ತನಿಖೆ ಮಾಡಲಿದ್ದಾರೆ’ ಎಂದು ಸುರಂಗ ರಸ್ತೆಯ ಡಿಪಿಆರ್‌ ಕನ್ಸಲ್ಟೆಂಟ್ಸ್‌ ನೀಡಿರುವ ವಿವರಣೆಯನ್ನು ತಜ್ಞರ ಸಮಿತಿ ಒಪ್ಪಿಲ್ಲ.

ಮೆಟ್ರೊ ಮಾರ್ಗವು ನಗರದಲ್ಲಿರುವ ರಸ್ತೆಗಳ ಕೆಳಭಾಗದಲ್ಲೇ ಸಾಗಿದೆ. ಆದರೆ, ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ಗೆ ಸಂಪರ್ಕ ಕಲ್ಪಿಸುವ ಸುರಂಗ ರಸ್ತೆಯು ವಸತಿ, ವಾಣಿಜ್ಯ ಕಟ್ಟಡಗಳು, ಸಾಂಸ್ಥಿಕ ವಲಯಗಳು, ಸರ್ಕಾರದ ಪ್ರಮುಖ ಕಟ್ಟಡಗಳ ಕೆಳಭಾಗದಲ್ಲಿ ಸಾಗಲಿದೆ. ಇದರಿಂದ, ಮನೆ ಅಥವಾ ವಾಣಿಜ್ಯ ಕಟ್ಟಡಗಳಲ್ಲಿರುವ ಕೊಳವೆಬಾವಿಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ನಗರದ ಕೇಂದ್ರ ಭಾಗವೂ ಸೇರಿದಂತೆ ಬಹುತೇಕ ಭಾಗಗಳಲ್ಲಿ ಕೊಳವೆಬಾವಿಗಾಗಿ ನೂರಾರು ಅಡಿ ಆಳ ಕೊರೆಯಲಾಗಿದೆ. ಸುರಂಗ ರಸ್ತೆ 50 ಅಡಿಯಿಂದ 100 ಅಡಿ ಆಳದಲ್ಲಿ ಬರುವುದರಿಂದ ಕೊಳವೆಬಾವಿಗಳಿಗೆ ಸಮಸ್ಯೆ ಆಗುತ್ತದೆ.

‘ಜಲಮೂಲ, ಅಂತರ್ಜಲ, ಕೊಳವೆಬಾವಿಗಳಿಗಾಗುವ ಧಕ್ಕೆಯನ್ನು ಯಾವ ರೀತಿಯಲ್ಲಿ ಸರಿಪಡಿಸಲಾಗುತ್ತದೆ, ಅವುಗಳ ರಕ್ಷಣೆಗೆ ಕೈಗೊಳ್ಳಲಾಗುವ ಕ್ರಮಗಳೇನು ಎನ್ನುವ ಬಗ್ಗೆಯೂ ಡಿಪಿಆರ್‌ನಲ್ಲಿ ಯಾವುದೇ ಮಾಹಿತಿ ಇಲ್ಲ. ಪರಿಸರ ಸೂಕ್ಷ್ಮ ಪ್ರದೇಶಗಳ ಜೊತೆಗೆ ಜಲಮೂಲಗಳಿಗೂ ತಡೆಯಾಗುವುದಕ್ಕೆ ಪರಿಹಾರ ಕಂಡುಕೊಳ್ಳಲು ತಜ್ಞರಿಂದ ಸೂಕ್ತ ಅಧ್ಯಯನ ಅಗತ್ಯ’ ಎಂದು  ಭೂವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಇಆರ್‌ಟಿ ಪರೀಕ್ಷೆ ಮಾದರಿ

‘ನಾಲ್ಕು ಬೋರ್‌ಹೋಲ್‌ಗಳಲ್ಲಷ್ಟೇ ಅಧ್ಯಯನ’

‘ಸುರಂಗ ರಸ್ತೆಯ ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿರುವ ಭೂತಾಂತ್ರಿಕ ವ್ಯಾಖ್ಯಾನ ವರದಿಯನ್ನು (ಜಿಐಆರ್) ಕೇವಲ ನಾಲ್ಕು ಬೋರ್‌ಹೋಲ್‌ಗಳ ತಪಾಸಣೆಯಿಂದ ತಯಾರಿಸಲಾಗಿದೆ. ಎಲ್ಲ ರೀತಿಯಲ್ಲಿಯೂ ಭೂವೈಜ್ಞಾನಿಕ ತಪಾಸಣೆಗಳನ್ನು ‘ಜಿಯೊಲಾಜಿಕಲ್‌ ಎಲ್‌–ಸಕ್ಷನ್‌’ ನಡೆಸಬೇಕು. ಅಂದರೆ ಭೂಗರ್ಭದಲ್ಲಿ ಕಲ್ಲು–ಬಂಡೆಗಳ ಪದರ ಹಾಗೂ ಅವುಗಳ ರಚನೆ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕು. ಇದಲ್ಲದೆ  ಅಂತರ್ಜಲ ಮತ್ತು ಜಲಮೂಲಗಳ ಬಗ್ಗೆ ‘ಎಲೆಕ್ಟ್ರಿಕಲ್‌ ರೆಸಿಸ್ಟಿವಿಟಿ ಟೊಮೊಗ್ರಫಿ’ (ಇಆರ್‌ಟಿ) ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು’ ಎಂದು ತಜ್ಞರ ಸಮಿತಿ ಸೂಚಿಸಿದೆ. ‘ನಿಖರವಾದ ಶಿಲಾಶಾಸ್ತ್ರ ಸ್ಥಿತಿಯನ್ನು ಅರಿಯಲು ಕೊರೆದ ಬೋರ್‌ಹೋಲ್‌ ಸಂಖ್ಯೆ ಅಥವಾ ಪ್ರದೇಶಗಳ ಮಾಹಿತಿಯನ್ನೂ ನೀಡಿಲ್ಲ. ಪರಿಷ್ಕೃತ ಜಿಐಆರ್ ಮತ್ತು ಸ್ಪಷ್ಟನೆ ನೀಡಿದ ಮಾಹಿತಿಯಲ್ಲೂ ಎಲ್ಲ ಬೋರ್‌ಹೋಲ್‌ಗಳ ವಿವರಗಳನ್ನು ಡಿಪಿಆರ್‌ ಕನ್ಸಲ್ಟೆಂಟ್ಸ್‌ ನೀಡಿಲ್ಲ’ ಎಂದು ತಜ್ಞರ ಸಮಿತಿ ತಿಳಿಸಿದೆ.

ಆಯಿಲ್‌ ಇಂಟರ್‌ಸೆಪ್ಟರ್

‘ಆಯಿಲ್‌ ಗ್ಯಾಸ್‌ ಪತ್ತೆಗೆ ಉಪಕರಣವಿಲ್ಲ’

‘ಸುರಂಗ ರಸ್ತೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಚೆಲ್ಲುವ ನೀರು ಅಂತರ್ಜಲ ಸೋರುವಿಕೆ ಮಳೆ ನೀರು ಬರುವ ಸಾಧ್ಯತೆ ಇದ್ದು ಅದನ್ನು ಮೂಲದಲ್ಲೇ ನಿಯಂತ್ರಿಸಬೇಕು. ಹೈಡ್ರೊಕಾರ್ಬನ್‌ ಗ್ಯಾಸ್‌ ಪತ್ತೆಹಚ್ಚುವುದು ಸೇರಿದಂತೆ ತೈಲ ಪ್ರತಿಬಂಧಕದ ಬಗ್ಗೆ ಡಿಪಿಆರ್‌ನಲ್ಲಿ ಮಾಹಿತಿ ಇಲ್ಲ’ ಎಂದು ತಜ್ಞರು ಹೇಳಿದ್ದಾರೆ. ‘ಸುರಂಗ ಮಾರ್ಗದಲ್ಲಿ ಇಂಧನ ಸಾಗಿಸುವ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಹೀಗಾಗಿ ತೈಲ ಪ್ರತಿಬಂಧಕ (ಆಯಿಲ್‌ ಇಂಟರ್‌ಸೆಪ್ಟರ್) ವ್ಯವಸ್ಥೆ ಅಗತ್ಯವಿಲ್ಲ’ ಎಂದು ಡಿಪಿಆರ್‌ ಕನ್ಸಲ್ಟೆಂಟ್ಸ್‌ ಪ್ರತಿಕ್ರಿಯಿಸಿದ್ದಾರೆ. ‘ಪೆಟ್ರೋಲ್‌ ಮತ್ತು ಡೀಸೆಲ್‌ ಕಾರುಗಳಿಂದ ತೈಲ ಸೋರುವ ಸಾಧ್ಯತೆ ಇದೆ. ಹೀಗಾಗಿ ಸುರಂಗದಿಂದ ನೀರನ್ನು ಪಾಲಿಕೆ ಚರಂಡಿಗಳಿಗೆ ಹೊರಹಾಕುವ ಮುನ್ನ ತೈಲ ಮತ್ತು ಹೂಳನ್ನು ಸಂಸ್ಕರಿಸಬೇಕು’ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಅಂತರ್ಜಲದ ಕಣ್ಣಿಗೆ ಪಟ್ಟಿ: ದೇವರಾಜ ರೆಡ್ಡಿ

‘ಬೃಹತ್‌ ಸುತ್ತಳತೆಯಲ್ಲಿ ಸುರಂಗ ಕೊರೆಯುವುದರಿಂದ ಅಂತರ್ಜಲಕ್ಕೆ ನೇರವಾಗಿ ಧಕ್ಕೆಯಾಗಲಿದೆ. ಭೂಗರ್ಭದಲ್ಲಿ ಅಂತರ್ಜಲ ತನ್ನದೇ ಸ್ವಾಭಾವಿಕ ಹರಿವನ್ನು ಹೊಂದಿರುತ್ತದೆ. ಸುರಂಗ ಕೊರೆದಾಗ ಅದಕ್ಕೆ ತಡೆಯಾಗುತ್ತದೆ. ಸುರಂಗದೊಳಗೆ ನೀರು ಜಿನುಗದಂತೆ ಹಲವು ರೀತಿಯಲ್ಲಿ ತಡೆ ಒಡ್ಡಲಾಗುತ್ತದೆ. ಇದರಿಂದ ಅಂತರ್ಜಲದ ಹರಿವಿನ ‘ಕಣ್ಣಿಗೆ ಪಟ್ಟಿ’ ಕಟ್ಟಿದಂತಾಗುತ್ತದೆ. ಅಂತರ್ಜಲದ ಮಟ್ಟಕ್ಕೂ ತೊಂದರೆಯಾಗುತ್ತದೆ’ ಎಂದು ಅಂತರ್ಜಲ ತಜ್ಞ ದೇವರಾಜ ರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸುರಂಗ ಕೊರೆಯುವ ಸ್ಥಳದಲ್ಲಿ ತಡೆ ಒಡ್ಡುವುದರಿಂದ ಆ ಪ್ರದೇಶದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಸುಮಾರು ಕಿಲೋಮೀಟರ್‌ ಪ್ರದೇಶದ ಅಂತರ್ಜಲ ಹರಿವಿಗೆ ಧಕ್ಕೆಯಾಗುತ್ತದೆ. ಇನ್ನು ವಸತಿ ವಾಣಿಜ್ಯ ಪ್ರದೇಶದಲ್ಲಿರುವ ಕೊಳವೆಬಾವಿಗಳು ಬಹುತೇಕ ಬತ್ತಿಹೋಗಲಿವೆ’ ಎಂದರು.

ಬೆಂಗಳೂರಿನಲ್ಲಿ ಕ್ಷಿಪ್ರ ಪ್ರವಾಹ ಹಾಗೂ ನೀರು ನಿಲ್ಲುವ ಸಂಕಷ್ಟವಿದೆ. ಸುರಂಗ ರಸ್ತೆಯಲ್ಲಿ ಈ ಸಮಸ್ಯೆಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳೇನು? ವಿನ್ಯಾಸದಲ್ಲಿ ಇದನ್ನು ಏಕೆ ಅಳವಡಿಸಿಲ್ಲ? ತೆರದ ಬಾವಿ ಹಾಗೂ ಕೊಳವೆಬಾವಿಗಳನ್ನು ಮುಚ್ಚುವ ಬಗ್ಗೆ ಮಾಹಿತಿ ಇಲ್ಲ. ರ‍್ಯಾಂಪ್‌ ಹಾಗೂ ಸುರಂಗ ರಸ್ತೆಯಲ್ಲಿ ಅಗ್ನಿಶಾಮಕ ವ್ಯವಸ್ಥೆಗೆ ಸಂಬಂಧಿಸಿದ ವಿಷಯದ ಬಗ್ಗೆ ಸ್ಪಷ್ಟ ವಿವರಣೆ ಇಲ್ಲ.
-ತಜ್ಞರ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.