
ಬೆಂಗಳೂರು: ಉದ್ಯಾನನಗರಿ ಬೆಂಗಳೂರು ಆಹ್ಲಾದಕರ ವಾತಾವರಣದಿಂದ ಹೆಸರಾದ ನಗರ. ಇಲ್ಲಿಗೆ ಬರುವ ಬೇರೆ ರಾಜ್ಯಗಳ ಜನರು ಇಲ್ಲಿನ ಸಮಶೀತೋಷ್ಣ ವಾತಾವರಣ ಕಂಡು ಅಚ್ಚರಿಪಡುತ್ತಿದ್ದರು. ಏಕೆಂದರೆ, ಉತ್ತರ ಭಾರತದ ರಾಜ್ಯಗಳೂ ಸೇರಿದಂತೆ ಬೇರೆ ರಾಜ್ಯಗಳ ರೀತಿ ಬೇಸಿಗೆ, ಚಳಿಗಾಲ ಏನೇ ಇದ್ದರೂ ಉಷ್ಣಾಂಶದಲ್ಲಿ ಭಾರಿ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಚಳಿಗಾಲದಲ್ಲಿ 20ರ ಆಸುಪಾಸು ಕನಿಷ್ಠ ತಾಪಮಾನ, ಬೇಸಿಗೆಯಲ್ಲಿ 30ರ ಆಸುಪಾಸಿಗೆ ಗರಿಷ್ಠ ತಾಪಮಾನವಿರುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ತಾಪಮಾನದಲ್ಲಿ ಅನಿಶ್ಚಿತತೆ ನಿರಂತರವಾಗಿದೆ. ಚಳಿಗಾಲದಲ್ಲಿ ಮೈಕೊರೆವ ಚಳಿ, ಬೇಸಿಗೆಯಲ್ಲಿ ನೆತ್ತಿ ಸುಡುವ ಬಿಸಿಲು ಜನರನ್ನು ಕಂಗೆಡಿಸಿದೆ.
ಈ ವರ್ಷದ ಚಳಿಗಾಲದ ಮಧ್ಯಭಾಗದಲ್ಲೇ ಬೆಂಗಳೂರಿನ ಕನಿಷ್ಠ ತಾಪಮಾನ 12.9ಕ್ಕೆ ಕುಸಿದಿದೆ. ಕಳೆದ ಕೆಲ ದಿನಗಳಿಂದ 13, 14ರಲ್ಲಿ ಕನಿಷ್ಠ ತಾಪಮಾನವಿದೆ. ಸಂಜೆಯಾದರೆ ಜನ ಸ್ವೆಟರ್, ಟೋಪಿಗಳ ಮೊರೆಹೋಗುತ್ತಿದ್ದಾರೆ. ಹೊರಗಡೆ ಓಡಾಡುವುದು ಕಷ್ಟವಾಗಿದೆ. ಬೆಂಗಳೂರಿನ ಜನರಿಗೆ ಇದು ಹೊಸ ಅನುಭವವಾಗಿದೆ.
ಬೆಂಗಳೂರಿನಲ್ಲಿ ತಾಪಮಾನ ಇಳಿಕೆಗೆ ಕಾರಣಗಳನ್ನು ಹುಡುಕುತ್ತಾ ಹೋದರೆ, ಮಧ್ಯಭಾರತದ ವಾತಾವರಣದಲ್ಲಿ ಒತ್ತಡ ಹೆಚ್ಚಾಗಿರುವುದರಿಂದ ಅಲ್ಲಿಂದ ಒಣ ತಂಡಿ ಗಾಳಿ ಬೀಸುತ್ತಿದೆ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಚಳಿಗಾಲದ ಸಂದರ್ಭ ಉತ್ತರ ಮತ್ತು ಮಧ್ಯಭಾರತದಲ್ಲಿ ವಾತಾವರಣದಲ್ಲಿ ಒತ್ತಡ ಹೆಚ್ಚಾಗುವುದರಿಂದ ಶೀತ ಗಾಳಿ ಹೆಚ್ಚಾಗುತ್ತದೆ. ಅದರ ಪರಿಣಾಮ ದಕ್ಷಿಣ ಭಾರತದಲ್ಲಿ ಚಳಿ ಆವರಿಸುತ್ತದೆ. ಈ ಬಾರಿ ನಿರೀಕ್ಷೆ ಮೀರಿ ಶೀತ ಕಾಡುತ್ತಿದೆ. ಹೀಗಾಗಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ತಾಪಮಾನ ಕುಸಿಯುತ್ತಿದೆ. ಕಳೆದ ವರ್ಷ ಬೆಂಗಳೂರಲ್ಲಿ 15 ಡಿಗ್ರಿ ಸೆಲ್ಸಿಯಸ್ ಇದ್ದ ಕನಿಷ್ಠ ತಾಪಮಾನ ಈ ವರ್ಷ 13 ಡಿಗ್ರಿಗೆ ಕುಸಿದಿದೆ. ರಾಜ್ಯದ ವಿವಿಧೆಡೆ 10ಕ್ಕಿಂತ ಕಡಿಮೆ ಆಗಿದೆ ಎನ್ನುತ್ತಾರೆ ಹವಾಮಾನ ವಿಜ್ಞಾನಿ ಸಿ.ಎಸ್. ಪಾಟೀಲ್.
ಹಾಗೆ ನೋಡಿದರೆ, ಭಾರತೀಯ ಹವಾಮಾನ ಇಲಾಖೆಯ ದಾಖಲೆಯ ಪ್ರಕಾರ, ಬೆಂಗಳೂರು ನಗರದಲ್ಲಿ 1884ರ ಜನವರಿ 13ರಂದು 7.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಅದು ಈವರೆಗಿನ ದಾಖಲೆಯ ಕನಿಷ್ಠ ತಾಪಮಾನವಾಗಿದೆ. 1883ರ ಡಿಸೆಂಬರ್ 23ರಂದು 8.9 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಬೆಂಗಳೂರು ನಗರದ 2ನೇ ಕನಿಷ್ಠ ತಾಪಮಾನವಾಗಿದೆ.
ಉಳಿದಂತೆ, 1968ರ ನಂತರದಲ್ಲಿ ಬೆಂಗಳೂರು ನಗರದಲ್ಲಿ10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ದಾಖಲಾಗಿರುವ ಸಂದರ್ಭಗಳು ಇದ್ದರೂ, ಅದು 7.8 ಸೆ.ಗಿಂತ ಹೆಚ್ಚೇ ಇದೆ.
ಈ ವರ್ಷದ ಡಿಸೆಂಬರ್‌ನಲ್ಲಿ ನಗರದಲ್ಲಿ 12ರಿಂದ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಳೆದ ಎಂಟು ವರ್ಷಗಳಲ್ಲೇ ಕನಿಷ್ಠ ತಾಪಮಾನವಾಗಿದೆ. 2024ರಲ್ಲಿ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.
ಬೆಂಗಳೂರು ನಗರದಲ್ಲಿ ಬೇಸಿಗೆಯಲ್ಲಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದರೆ ಮಳೆ ಸುರಿಯುತ್ತಿತ್ತು. ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದ ಕೂಡಲೇ ಮಳೆಯ ಆಗಮನವಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಿದೆ. 38, 39 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರುತ್ತಿದೆ ಎನ್ನುತ್ತಾರೆ ಹವಾಮಾನ ತಜ್ಞರಾದ ಸಿ.ಎಸ್. ಪಾಟೀಲ್.
ಭಾರತೀಯ ಹವಾಮಾನ ಇಲಖೆಯ ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಅತ್ಯಂತ ಗರಿಷ್ಠ ತಾಪಮಾನ ಸುಮಾರು 39.2 ಸೆಲ್ಸಿಯಸ್ ಆಗಿದ್ದು, 2016ರ ಏಪ್ರಿಲ್ 25ರಂದು ದಾಖಲಾಗಿದೆ. 2023–24ರಲ್ಲಿ 38, 38.5 ಡಿಗ್ರಿಯಸ್ ತಾಪಮಾನ ದಾಖಲಾಗುವ ಮೂಲಕ ಎರಡನೇ ಗರಿಷ್ಠ ತಾಪಮಾನವಾಗಿದೆ.
ಮುಂಬರುವ ಬೇಸಿಗೆಯೂ ಸಹ ಗಾಢವಾಗಿರಲಿದೆ. 38ರಿಂದ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಜಾಗತಿಕ ತಾಪಮಾನ, ಜಲಮೂಲಗಳ ಕುಸಿತ, ಹಸಿರು ಕಣ್ಮರೆಯಾಗುತ್ತಿರುವುದು ಬೆಂಗಳೂರಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣ ಎಂಬುದು ಸಿ.ಎಸ್.. ಪಾಟೀಲ್ ಅವರ ಅಭಿಪ್ರಾಯವಾಗಿದೆ. ಒಂದು ಕಾಲದಲ್ಲಿ ಗಾರ್ಡನ್ ಸಿಟಿ ಎಂದು ಕರೆಯಲಾಗುತ್ತಿದ್ದ ಬೆಂಗಳೂರು ನಗರದಲ್ಲಿ ಈಗ ಶೇ 90ಕ್ಕಿಂತ ಹೆಚ್ಚು ವಸತಿ ಪ್ರದೇಶ ಮತ್ತು ರಸ್ತೆ, ಫ್ಲೈಓವರ್‌ಗಳಿವೆ. ಅದು ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎನ್ನುತ್ತಾರೆ.
ಮರಗಳನ್ನು ಕಡಿಯುತ್ತಿರುವುದು, ಜಲಮೂಲಗಳು ಕಣ್ಮರೆಯಾಗುತ್ತಿರುವ ಈ ಅಭಿವೃದ್ಧಿ ಹೆಸರಿನ ದುರಂತ ಮುಂದುವರೆದರೆ ಬೆಂಗಳೂರು ನಗರ ಉತ್ತರ ಭಾರತದ ನಗರಗಳಂತೆ ಸಹಿಸಲಸಾಧ್ಯವಾದ ಶೀತ ಮತ್ತು ಅತ್ಯಂತ ಬಿಸಿಯ ವಾತಾವರಣ ಹೊಂದುವ ಕಾಲ ದೂರವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.