ಬೆಂಗಳೂರು: ನಗರದ ಸಂಚಾರ ನಿರ್ವಹಣಾ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರೊಂದಿಗೆ ನಾಲ್ವರು ಮಕ್ಕಳು ಪೊಲೀಸ್ ಸಮವಸ್ತ್ರ ಧರಿಸಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿಗಳಾಗಿ ಕೊಪ್ಪಳ, ವಿಜಯಪುರ, ತುಮಕೂರು ಹಾಗೂ ಮೈಸೂರಿನ ನಾಲ್ವರು ಮಕ್ಕಳು ಕೆಲಸ ಮಾಡಿದರು. ಪತ್ರಿಕಾಗೋಷ್ಠಿಯಲ್ಲೂ ದಯಾನಂದ ಅವರ ಅಕ್ಕಪಕ್ಕ ಕುಳಿತಿದ್ದರು. ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಕ್ಕಳ ಆಸೆಯನ್ನು ನಗರ ಪೊಲೀಸ್ ಇಲಾಖೆ ಸಿಬ್ಬಂದಿ ಈಡೇರಿಸಿದರು. ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಈ ಅವಕಾಶ ಕಲ್ಪಿಸಲಾಗಿತ್ತು.
ಪೊಲೀಸ್ ಸಮವಸ್ತ್ರ, ಸೊಂಟದಲ್ಲಿ ಪಿಸ್ತೂಲ್, ಕೈಯಲ್ಲಿ ಲಾಠಿ.. ಹಿಡಿದು ಕಚೇರಿ ಪ್ರವೇಶಿಸಿದರು. ಅಲ್ಲಿದ್ದ ಪೊಲೀಸರು ಸಲ್ಯೂಟ್‌ನೊಂದಿಗೆ ಸ್ವಾಗತ ಕೋರಿದರು. ನೇರವಾಗಿ ಅವರನ್ನು ಕಳೆದ ವಾರ ಉದ್ಘಾಟನೆಗೊಂಡ ಪೊಲೀಸ್ ವಸ್ತು ಸಂಗ್ರಹಾಲಯ ಹಾಗೂ ಅನುಭವ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಮಕ್ಕಳು ಸಂಗ್ರಹಾಲಯ ಕಣ್ತುಂಬಿಕೊಂಡರು.
ಬಳಿಕ ಅವರು ಪತ್ರಿಕಾಗೋಷ್ಠಿಗೆ ಹಾಜರಾದರು. ಹೂಗುಚ್ಛ ನೀಡಿ ಅವರನ್ನು ದಯಾನಂದ ಅವರು ಸ್ವಾಗತಿಸಿದರು. ಮಕ್ಕಳ ಜತೆಗೆ ಫೋಟೊ ತೆಗೆಸಿಕೊಂಡರು. ಇದರಿಂದ ಮಕ್ಕಳು ಸಂಭ್ರಮಪಟ್ಟರು.
ನಂತರ ಮಾತನಾಡಿದ ದಯಾನಂದ ಅವರು, ‘ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಾಲ್ವರು ಕಿರಿಯ ಸ್ನೇಹಿತರಿಗೆ ಒಂದು ದಿನದ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಯಿತು. ಜೀವನ ಬಹಳ ಅಮೂಲ್ಯವಾದ್ದದ್ದು. ಅಪಘಾತದಿಂದ ಜೀವನ ಹಾಳು ಮಾಡಿಕೊಳ್ಳಬಾರದು’ ಎಂದು ತಿಳಿಸಿದರು.
‘ಮನುಷ್ಯನನ್ನು ಕ್ಯಾನ್ಸರ್ ಕಾಡುವಂತೆಯೇ ಈ ಸಮಾಜವನ್ನು ಅಪರಾಧ ಚಟುವಟಿಕೆಗಳು ಕಾಡುತ್ತಿವೆ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಲೇ ಇದೆ’ ಎಂದು ಹೇಳಿದರು.
ಮಕ್ಕಳಾದ ಪಲ್ಲವಿ, ದಿವ್ಯಶ್ರೀ, ವಿಶ್ವಾಸ್ ಜೀವನ್ ಅವರಿಗೆ ಉಡುಗೊರೆ ನೀಡಲಾಯಿತು. ಮಕ್ಕಳು ಅವಕಾಶ ಕಲ್ಪಿಸಿದ್ದಕ್ಕೆ ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದರು. ಕಿದ್ವಾಯಿ ಆಸ್ಪತ್ರೆ ಸಿಬ್ಬಂದಿ ಹಾಗೂ ಮಕ್ಕಳ ಪೋಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.