ಪೊಲೀಸ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಯಲಹಂಕದ ಶಿವಾಸ್ ಪೇಯಿಂಗ್ ಗೆಸ್ಟ್‌ಗೆ (ಪಿ.ಜಿ) ನುಗ್ಗಿದ ದುಷ್ಕರ್ಮಿಯೊಬ್ಬ, ಬೆಸ್ಕಾಂ ಸಹಾಯಕ ಎಂಜಿನಿಯರ್‌ರೊಬ್ಬರ ಎದುರು ಅಸಭ್ಯವಾಗಿ ವರ್ತಿಸಿ ಎರಡು ಮೊಬೈಲ್ ಕಳವು ಮಾಡಿಕೊಂಡು ಪರಾರಿ ಆಗಿದ್ದಾನೆ.
ಎಂಜಿನಿಯರ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪೇಯಿಂಗ್ ಗೆಸ್ಟ್ ಸುತ್ತಮುತ್ತ ರಸ್ತೆಗಳು ಹಾಗೂ ಪಿ.ಜಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಯನ್ನು ಪಡೆದುಕೊಳ್ಳಲಾಗಿದೆ. ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ದೂರುದಾರರು ಯಲಹಂಕದ ಬೆಸ್ಕಾಂ ಸಿ–7ರಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 11ರಂದು ಮಧ್ಯಾಹ್ನ ಕಚೇರಿಯಿಂದ ಪಿ.ಜಿಗೆ ಬಂದು ತಮ್ಮ ಕೊಠಡಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಕೊಠಡಿಯ ಬಾಗಿಲು ಬಡಿದ ಶಬ್ದವಾಗಿತ್ತು. ಪಿ.ಜಿ ನಿವಾಸಿಗಳು ಅಥವಾ ಮಾಲೀಕರು ಇರಬಹುದೆಂದು ಭಾವಿಸಿ ದೂರುದಾರರು ಕೊಠಡಿಯ ಬಾಗಿಲು ತೆರೆದಿದ್ದರು. ಆಗ ಆರೋಪಿ ಕೊಠಡಿಯ ಒಳಗೆ ನುಗ್ಗಿದ್ದ. ದೂರುದಾರರ ಕುತ್ತಿಗೆಗೆ ಚಾಕು ಇಟ್ಟು ಕೈಯಲ್ಲಿದ್ದ ಚಿನ್ನದ ಬಳೆಯನ್ನು ತೆಗೆಯುವಂತೆ ಬೆದರಿಕೆ ಹಾಕಿದ್ದ. ನಂತರ, ಅಸಭ್ಯವಾಗಿ ವರ್ತಿಸಿದ್ದ. ಬಳೆಯನ್ನು ತೆಗೆಯಲು ಸಾಧ್ಯವಾಗಿರಲಿಲ್ಲ. ನಂತರ ಹಣ ಕೊಡುವಂತೆ ಪೀಡಿಸಿದ್ದ. ದೂರುದಾರರು ರೂಮ್‌ನಲ್ಲಿದ್ದ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಆಗ ಕಳ್ಳ ಎರಡು ಮೊಬೈಲ್ ಕಳವು ಮಾಡಿಕೊಂಡು ಪರಾರಿ ಆಗಿದ್ದಾನೆ’ ಎಂದು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.