
ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ಸಹಯೋಗದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ಫೆ.1ರಿಂದ ಫೆ.6ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಭಾರತ ರಂಗ ಮಹೋತ್ಸವ’ ಹಾಗೂ ‘ರಂಗ ಪರಿಷೆ’ ರಂಗ ಉತ್ಸವ ಹಮ್ಮಿಕೊಂಡಿದೆ.
‘ಆರು ದಿನಗಳ ಈ ಉತ್ಸವದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿರುವ ಅಕಾಡೆಮಿ ಮತ್ತು ಪ್ರಾಧಿಕಾರಗಳ ವತಿಯಿಂದಲೂ ಕಾರ್ಯಕ್ರಮ, ವಸ್ತು ಹಾಗೂ ಪುಸ್ತಕ ಪ್ರದರ್ಶನ ನಡೆಯಲಿದೆ. ಬೆಂಗಳೂರಿನ 45ಕ್ಕೂ ಅಧಿಕ ರಂಗ ತಂಡಗಳು ಛಾಯಾಚಿತ್ರ ಹಾಗೂ ರಂಗ ಪರಿಕರಗಳನ್ನು ಪ್ರದರ್ಶನ ಮಾಡಲಿವೆ’ ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ತಿಳಿಸಿದ್ದಾರೆ.
‘ಒಟ್ಟು 5 ವೇದಿಕೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕವಿಗೋಷ್ಠಿ, ರಂಗ ಚಿಂತನೆ, ಕಲಾಕೃತಿಗಳ ಪ್ರದರ್ಶನ, ಚಿತ್ರ ರಚನೆ, ಬೀದಿ ನಾಟಕ, ರಂಗಭೂಮಿಗೆ ಸಂಬಂಧಿಸಿದ ಕಾರ್ಯಾಗಾರ, ಯಕ್ಷಗಾನ ಮತ್ತು ಬಯಲಾಟ, ನೃತ್ಯ ಪ್ರದರ್ಶನ, ರಂಗಗೀತೆಗಳ ಗಾಯನ, ಸುಗಮ ಸಂಗೀತ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ವೈವಿಧ್ಯಮಯ ರಂಗ ಪರಿಷೆ ಆಯೋಜಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ಈ ಉತ್ಸವದಲ್ಲಿ ಭಾರತದ ಪ್ರಮುಖ ನಾಟಕಗಳಲ್ಲದೆ, ವಿದೇಶಿ ನಾಟಕಗಳನ್ನೂ ಆಹ್ವಾನಿಸಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರಂಗಭೂಮಿ ಕ್ಷೇತ್ರದಲ್ಲಿ 40ಕ್ಕೂ ಅಧಿಕ ವರ್ಷ ಸೇವೆ ಸಲ್ಲಿಸಿರುವ ಹಾಗೂ ಈಗಲೂ ಕ್ರಿಯಾಶೀಲವಾಗಿರುವ ರಂಗ ತಂಡವನ್ನು ಗೌರವಿಸಲಾಗುತ್ತದೆ. ಬೆಂಗಳೂರೇತರ ಅರ್ಹ ರಂಗ ತಂಡಗಳು ವಿವರವನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಕಳುಹಿಸಬೇಕು’ ಎಂದು ತಿಳಿಸಿದ್ದಾರೆ.
‘ಈ ಉತ್ಸವದಲ್ಲಿ ರಂಗ ಗೌರವಕ್ಕೆ ಆಯ್ಕೆ ಮಾಡಿದ ರಂಗ ತಂಡಗಳಿಗೆ ಊಟ ಮತ್ತು ವಸತಿ ನೀಡಿ, ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಲಾಗುವುದು’ ಎಂದಿದ್ದಾರೆ.