ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ‘ಕೇಂದ್ರ ತೆರಿಗೆ ಆಯುಕ್ತಾಲಯದ ಬೆಂಗಳೂರು ವಲಯಕ್ಕೆ ಇತ್ತೀಚೆಗೆ ಅನ್ಯ ಭಾಷಿಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಈ ನೇಮಕಾತಿಯನ್ನು ಕೂಡಲೇ ತಡೆ ಹಿಡಿಯಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ‘ಆಯುಕ್ತಾಲಯಕ್ಕೆ ಇತ್ತೀಚೆಗೆ 137 ಹವಾಲ್ದಾರರು, ಸಹಾಯಕರು ಹಾಗೂ ತೆರಿಗೆ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕನ್ನಡಿಗರ ಸೇವೆ ಮಾಡಬೇಕಾದ ಈ ಎಲ್ಲ ನೌಕರರು ಅನ್ಯ ಭಾಷಿಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಭಾಷಾ ಸಂಘರ್ಷವನ್ನು ತಡೆಯಲು ಕೂಡಲೇ ಈ ನೇಮಕಾತಿಯನ್ನು ತಡೆ ಹಿಡಿದು, ಸ್ಥಳೀಯರಿಗೆ ಪ್ರಾತಿನಿಧ್ಯ ನೀಡುವ ನೇಮಕಾತಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.
‘ಕೇಂದ್ರದ ಈ ರೀತಿಯ ತೀರ್ಮಾನಗಳು ಸ್ಥಳೀಯರಲ್ಲಿ ಆಕ್ರೋಶವನ್ನು ಉಂಟು ಮಾಡುತ್ತವೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾವನೆಗಳನ್ನು ಗೌರವಿಸುವುದು ಯಾವುದೇ ಸರ್ಕಾರದ ಕರ್ತವ್ಯವಾಗಿದ್ದು, ಸಾಂವಿಧಾನಿಕ ಆಶಯಗಳು ಸಾಕಾರಗೊಳ್ಳಬೇಕಾದರೆ ಕೇಂದ್ರ ಸರ್ಕಾರ ಇಂತಹ ಕ್ರಮಗಳನ್ನು ಪ್ರೋತ್ಸಾಹಿಸಬಾರದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.