ADVERTISEMENT

ಉಪಚುನಾವಣೆ ಸವಾಲಾಗಿ ಸ್ವೀಕರಿಸಿದ್ದೇನೆ: ಎಚ್.ಡಿ.ದೇವೇಗೌಡ

‘ಪಕ್ಷಕ್ಕೆ ದ್ರೋಹ ಬಗೆದ ಗೋಪಾಲಯ್ಯನ ಸೋಲಿಸಬೇಕು’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:50 IST
Last Updated 1 ಡಿಸೆಂಬರ್ 2019, 13:50 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

ಬೆಂಗಳೂರು: ‘ಮಹಾಲಕ್ಷ್ಮಿ‌ಲೇಔಟ್‌ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಭಾನುವಾರ ಹೇಳಿದರು.

‘ಅನರ್ಹಗೊಂಡ ಜೆಡಿಎಸ್‌ ಶಾಸಕ ಕೆ.ಗೋಪಾಲಯ್ಯ ಅವರಿಗೆ ಬೇಕಾದುದೆಲ್ಲವನ್ನೂ ನೀಡಿದರೂ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಹಣ ಬಲ ಇರುವ ಗೋಪಾಲಯ್ಯನನ್ನು ಸೋಲಿಸಬೇಕು’ ಎಂದು ಅವರು ಹೇಳಿದರು.

ನಗರದ ನಂದಿನಿ ಲೇಔಟ್‌ನಲ್ಲಿಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ನಾನು ವ್ಯಕ್ತಿ ನಿಂದನೆಗೆ ಇಲ್ಲಿಗೆ ಬಂದಿಲ್ಲ.ದುಡ್ಡು ತೆಗೆದುಕೊಂಡು ಹೋದರೂ ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ.ಗೋಪಾಲಯ್ಯ ಅವರ ಪತ್ನಿಯನ್ನು ಬಿಬಿಎಂಪಿಯಲ್ಲಿ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷೆಯನ್ನಾಗಿ ಮಾಡಿದ್ದೆವು. ಆದರೆ, ಅವರು ಬಿಜೆಪಿಗೆ ಹೋಗಿ ಮೇಯರ್ ಆಗುವ ಯೋಚನೆ ಮಾಡುತ್ತಿದ್ದಾರೆ. ಇದೆಲ್ಲದರ ಹಿಂದೆ ಬೇರೆಯದ್ದೇ ಕಾರಣ ಇದೆ’ ಎಂದರು.

‘ಹಿಂದೆ ಅವರ ಮನೆ ಮುಂದೆ ಪೊಲೀಸರು ಬಂದು ನಿಂತಾಗ ಏನಾಯಿತು ಆ ವಿಚಾರದ ಬಗ್ಗೆ ಈಗ ಚರ್ಚೆ ಬೇಡ. ಪತ್ನಿಯನ್ನು ಉಪಮೇಯರ್ ಮಾಡಬೇಕೆಂದು ಅವರು ಪಟ್ಟು ಹಿಡಿದಿದ್ದರು.ಅದಕ್ಕೆ ಎರಡು ಮಾತನಾಡದೆ ಉಪಮೇಯರ್ ಮಾಡಿದೆ.ಅಲ್ಲದೆ ಪ್ರತಿವರ್ಷ ಒಂದಲ್ಲ ಒಂದು ಕಮಿಟಿಯ ಸದಸ್ಯರನ್ನಾಗಿಯೂ ಮಾಡುತ್ತಿದ್ದೆ. ಹಣಕಾಸು ಸ್ಥಾಯಿ ಸಮಿತಿಯ ಜವಾಬ್ದಾರಿಯನ್ನು ನೀಡಿದೆ. ಆದರೆ ಅವರು ನಮ್ಮನ್ನು ಬಿಟ್ಟು ಹೋದರು’ ಎಂದು ವಿಷಾದಿಸಿದರು.

‘ಅವರು ಈಗ ನಿಮ್ಮ ಮನೆಗೆ ಬಂದು ನಮ್ಮನ್ನು ಉಳಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ.ಆದರೆ ಈಗ ಅವರ ಜೊತೆಗೆ 10 ಮಂದಿ ಹೋಗುವುದೂ ಕಷ್ಟವಾಗಿದೆ.ಉಪ ಚುನಾವಣೆ ಇರಬಹುದು, ನೇರ ಚುನಾವಣೆ ಬರ ಬಹುದು, ಸಿದ್ಧವಾಗಿರಿ’ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.

‘ಪ್ರಾದೇಶಿಕ ಪಕ್ಷಗಳ ಬಲ ತೋರಬೇಕು’
‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಬಂದಿದೆ. ಏಕಚಕ್ರಾಧಿಪತ್ಯ ವ್ಯವಸ್ಥೆ ಬರುತ್ತಿದೆ. ಇದನ್ನು ನೀವೆಲ್ಲಾ ಎದುರಿಸಬೇಕು’ ಎಂದು ದೇವೇಗೌಡರು ಹೇಳಿದರು.

‘ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲಿಸುವ ಮೂಲಕ ಏಕಚಕ್ರಾಧಿಪತ್ಯ‌ ವ್ಯವಸ್ಥೆಯ ವಿರುದ್ಧದ ಸಂದೇಶವನ್ನು ರವಾನಿಸ ಬೇಕಾಗಿದೆ. ಪ್ರಾದೇಶಿಕ ಪಕ್ಷಗಳು ಇವೆ ಎಂಬುದನ್ನು ತೋರಿಸಬೇಕಿದೆ. ಅದು ಈ ‌ಕ್ಷೇತ್ರದಿಂದಲೇ ಆರಂಭವಾಗಲಿ’ ಎಂದು ಅವರು ಹೇಳಿದರು.

*
ಗೋಪಾಲಯ್ಯ ಅವರ ಮುಂದೆ ನೀವು ಪ್ರಾಮಾಣಿಕವಾಗಿ ಹೋರಾಡಬೇಕು. ಆಮಿಷಕ್ಕೆ ಒಳಗಾಗಬೇಡಿ. ಪ್ರತಿವಾರ ನಿಮ್ಮ ಬಳಿ ಬರುತ್ತೇನೆ. ವಾರ್ಡ್‌ಗೆ ಭೇಟಿ ನೀಡಿ ಪಕ್ಷ ಕಟ್ಟುತ್ತೇನೆ.
-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.