ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರುವ ಅಪಘಾತ ಮತ್ತು ತುರ್ತು ಆರೈಕೆ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಕಾರ್ಯಾರಂಭಿಸಿದೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರು ಕ್ಯಾಥ್ ಲ್ಯಾಬ್ ಉದ್ಘಾಟಿಸಿದರು.
ಪ್ರಿ-ಕ್ಯಾಥ್ ಮತ್ತು ಪೋಸ್ಟ್-ಕ್ಯಾಥ್ ವಾರ್ಡ್‌ಗಳ ಜತೆಗೆ ಎಂಟು ಹಾಸಿಗೆಗಳ ವಾರ್ಡ್ ಅನ್ನು ಈ ಕ್ಯಾಥ್ ಲ್ಯಾಬ್ ಒಳಗೊಂಡಿದೆ.
ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 250 ಆಸನಗಳ ಹಾಗೂ ಅಪಘಾತ ಮತ್ತು ತುರ್ತು ಆರೈಕೆ ಕೇಂದ್ರದಲ್ಲಿ 150 ಆಸನಗಳ ಸಭಾಂಗಣ ನಿರ್ಮಿಸಲಾಗಿದೆ. ಇದರ ಉದ್ಘಾಟನೆ ಜೊತೆಗೆ ಸಚಿವರು, ವಿಕ್ಟೋರಿಯಾ ಆಸ್ಪತ್ರೆಗೆ 125 ವರ್ಷವಾದ ಸ್ಮರಣಾರ್ಥ ನೂತನ ಲಾಂಛನ ಅನಾವರಣಗೊಳಿಸಿದರು.
ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ಅಧ್ಯಕ್ಷ ರಾಕೇಶ್ ಸಿಂಗ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ.ಕೆ. ರಮೇಶ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಇಲಾಖೆ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್, ಟ್ರಾಮಾ ಕೇರ್ ಕೇಂದ್ರದ ಮುಖ್ಯಸ್ಥರಾದ ಡಾ. ಬಾಲಾಜಿ ಪೈ, ಬಿಎಂಸಿಆರ್‌ಐ ಡೀನ್ ಡಾ. ರಮೇಶ್ ಕೃಷ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.