
₹ 7.11 ಕೋಟಿ ದರೋಡೆ ಪ್ರಕರಣದ ಸೂತ್ರಧಾರ ಕಾನ್‌ಸ್ಟೆಬಲ್?
ಬೆಂಗಳೂರು: ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹ 7.11 ಕೋಟಿ ದರೋಡೆ ನಡೆಸಿದ್ದ ಪ್ರಕರಣ ಸೂತ್ರಧಾರನೇ ಕಾನ್‌ಸ್ಟೆಬಲ್ ಎಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
ದರೋಡೆ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸುತ್ತಿದಂತೆಯೇ ವಿವಿಧ ವಿಚಾರಗಳು ಬಹಿರಂಗವಾಗುತ್ತಿವೆ. ಹಲವು ಕೋನಗಳಲ್ಲಿ ತನಿಖೆ ನಡೆಯುತ್ತಿದೆ.
ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್ ಅವರನ್ನು ವಶಕ್ಕೆ ಪಡೆದಿರುವ ತನಿಖಾಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದಾರೆ. ಕುಂಬಳಗೋಡು ಸೇರಿದಂತೆ ಹಲವು ಕಡೆ ಕಾನ್‌ಸ್ಟೆಬಲ್ ಕೆಲಸ ಮಾಡಿದ್ದರು ಎಂದು ಮೂಲಗಳು ಹೇಳಿವೆ. ಕಾನ್‌ಸ್ಟೆಬಲ್ ಮೇಲೆ ಅನುಮಾನ ಬಲವಾಗಿದೆ.
ಕಮ್ಮನಹಳ್ಳಿ, ಕಲ್ಯಾಣನಗರದ ಯುವಕರನ್ನು ದರೋಡೆಗೆ ಸಿದ್ಧಪಡಿಸಿದ್ದ ಅಣ್ಣಪ್ಪ ನಾಯ್ಕ್, ದರೋಡೆ ಕುರಿತು ತರಬೇತಿ ನೀಡಿದ್ದರು.
ಕಾನ್‌ಸ್ಟೆಬಲ್ ಸೂಚನೆಯಂತೆ ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ತಂಡವೇ ₹ 7.11 ಕೋಟಿ ದರೋಡೆ ಮಾಡಿದೆ. ಅಲ್ಲದೆ ಸಿಎಂಎಸ್ ಸೆಕ್ಯೂರಿಟಿ ಎಜೆನ್ಸಿಯ ಮಾಜಿ ಉದ್ಯೋಗಿಗಳು ದರೋಡೆಗೆ ಬೆಂಬಲ ನೀಡಿದ್ದ, ಕದ್ದ ಹಣವನ್ನು ನಗರದ ಗಡಿಪ್ರದೇಶದಲ್ಲಿ ಬಚ್ಚಿಟ್ಟು ಪರಾರಿ ಆಗಿದ್ದಾರೆ.
ಪೊಲೀಸರ ತನಿಖೆ ಯಾವ ರೀತಿ ನಡೆಯುತ್ತದೆ? ಹೇಗೆ ತಪ್ಪಿಸಿಕೊಳ್ಳಬೇಕು? ಎಂಬೆಲ್ಲ ವಿಚಾರವನ್ನು ಚರ್ಚಿಸಿ ಅಣ್ಣಪ್ಪ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
ಇನ್ನು, ಇದೇ ವೇಳೆ ದರೋಡೆ ಹಣದ ಆಸೆಗಾಗಿ ಸಂಸ್ಥೆಯ ಗೋಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇರೆಗೆ ಸಿಎಂಎಸ್ ಏಜೆನ್ಸಿಯ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ತಾಂತ್ರಿಕ ವಿಭಾಗ, ಭದ್ರತಾ ವಿಭಾಗದ ಅಧಿಕಾರಿ-ಸಿಬ್ಬಂದಿ, ಇಬ್ಬರು ಕಸ್ಟೋಡಿಯನ್ ಕೂಡ ಇದ್ದಾರೆ.
ಮತ್ತೊಂದೆಡೆ ಈ ಹಿಂದೆ ಸಿಎಂಎಸ್ ಸಂಸ್ಥೆಯ ವಾಹನದಲ್ಲಿ ಹಣ ಕಳವು ನಡೆದಾಗ ವಾಹನದ ಎರಡು ಬದಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ, ಈ ವಾಹನಕ್ಕೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ತೆಗೆಯಲಾಗಿತ್ತು. ಹೀಗಾಗಿ ಸಿಎಂಎಸ್ ಸಂಸ್ಥೆಯ ಭದ್ರತಾ ವಿಭಾಗದ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.